ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ: ಡಿ.ಕೆ.ಶಿವಕುಮಾರ್

Update: 2022-08-15 12:25 GMT

ಬೆಂಗಳೂರು, ಆ. 15: ‘ಭಾರತ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಬೇಕಿದೆ. ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಕರೆ ನೀಡಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನಿಂದ ನಾವೆಲ್ಲರೂ ನಮ್ಮ ಹಿರಿಯರ ತ್ಯಾಗ-ಬಲಿದಾನ ಸ್ಮರಿಸಿ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಮಾಡಲು ಸೇರಿದ್ದೇವೆ. ನಾವು ಬಹಳ ಅದೃಷ್ಟವಂತರು. ಸ್ವಾತಂತ್ರ್ಯ ಬಂದಾಗ ನಾವು ಹುಟ್ಟಿರಲಿಲ್ಲ. ಆದರೆ, ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಿಹಿ ಅನುಭವಿಸುತ್ತಿದ್ದೇವೆ' ಎಂದು ತಿಳಿಸಿದರು.

‘ಗಾಂಧೀಜಿ ಅವರ ಜತೆಗೆ ನೆಹರು, ಸರ್ದಾರ್ ಪಟೇಲ್, ಸರೋಜಿನಿ ನಾಯ್ಡು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನ ಅಬುಲ್ ಕಲಾಂ ಆಝಾದ್, ಚಂದ್ರಶೇಖರ್ ಆಝಾದ್ ಸೇರಿದಂತೆ ಹಲವು ಹೋರಾಟಗಾರರು ದೇಶದೆಲ್ಲೆಡೆ ಹೋರಾಟ ನಡೆಸಿದರು. ಗಾಂಧೀಜಿ ಅವರ ನಾಯಕತ್ವ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದೆಲ್ಲೆಡೆ ಅಹಿಂಸಾ ಚಳುವಳಿ ಆರಂಭವಾಯಿತು' ಎಂದು ಅವರು ಸ್ಮರಿಸಿದರು.

‘ಕಾಂಗ್ರೆಸ್ ಸಾಮಾಜಿಕ ನ್ಯಾಯ ದೊರಕಿಸಲು, ಶೋಷಿತರಿಗೆ ಸಿಗಬೇಕಾದ ಹಕ್ಕು ಕೊಡಿಸಲು ಸರ್ವರಿಗೂ ಸಮ ಹಕ್ಕು ನೀಡಿ ಕೋಮು ಸಾಮರಸ್ಯದ ಭಾರತ ಕಾಂಗ್ರೆಸ್‍ನ ಕನಸಾಗಿದೆ. ಸಂವಿಧಾನದ ಅಡಿಯಲ್ಲಿ ಎಲ್ಲ್ಲ ಜಾತಿ, ಧರ್ಮಗಳಿಗೂ ಅವಕಾಶ ಇರಬೇಕು ಎಂದು ನೆಹರೂ ಅವರು ಶ್ರಮಿಸಿದರು. ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ನೆಹರೂ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆ ಆಧಾರದ ಮೇಲೆ ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿ ಚರ್ಚಿಸಿ ರಚಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ' ಎಂದು ಹೇಳಿದರು. 

‘ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಎತ್ತಿ ಹಿಡಿದು, ಯುವ ಪೀಳಿಗೆಗೆ ತಿಳಿಸೋಣ. ದೇಶದಲ್ಲಿ ಸ್ತ್ರೀಯರ ಅಸಮಾನತೆ, ಶೋಷಣೆ, ಜಾತಿ ಅಸಮಾನತೆ, ನಿರುದ್ಯೋಗ, ಆರ್ಥಿಕ ಸಮಸ್ಯೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು, ಇವುಗಳಿಗೆ ಪರಿಹಾರ ತಂದು, ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿ ಸಾಮಾಜಿಕ ಪ್ರಗತಿ ಸಾಧಿಸಬೇಕು' ಎಂದು ಅವರು ತಿಳಿಸಿದರು.

‘ನಾವೆಲ್ಲ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಕರೆಗೆ ಓಗೊಟ್ಟು 1ಲಕ್ಷಕ್ಕೂ ಹೆಚ್ಚು ಮಂದಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಈ ಕಾರ್ಯಕ್ರಮ ಸಮಯದಲ್ಲಿ ರಾಷ್ಟ್ರಧ್ವಜ ಕೆಳಗೆ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಗೌರವ ಸಲ್ಲಿಸಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ' ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News