ನನ್ನ ತಂದೆಯ ಸ್ವಾತಂತ್ರ್ಯ ಕಸಿಯಲಾಗಿದೆ: ಬಂಧಿತ ಪತ್ರಕರ್ತ ಸಿದ್ದೀಖ್ ಕಪ್ಪನ್ ಪುತ್ರಿಯ ಭಾವುಕ ಸ್ವಾತಂತ್ರ್ಯ ಭಾಷಣ

Update: 2022-08-15 13:23 GMT
Photo: thenewsminute.com

ತಿರುವನಂತಪುರಂ: "ನಾನು ಮೆಹನಾಝ್ ಕಪ್ಪನ್. ಒಬ್ಬ ನಾಗರಿಕನ ಎಲ್ಲಾ ಸ್ವಾತಂತ್ರ್ಯವನ್ನು ಕಸಿದು ಬಲವಂತದಿಂದ ಕತ್ತಲ ಕೋಣೆಯೊಳಗೆ ನೂಕಲ್ಪಟ್ಟ ಪತ್ರಕರ್ತ ಸಿದ್ದೀಕ್ ಕಪ್ಪನ್(Siddique Kappan) ಅವರ ಮಗಳು ನಾನು, '' ಹೀಗೆಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣವನ್ನು ಇಂದು ಕೇರಳದ ನೊಟ್ಟಪಾರಂ ಜಿಎಲ್‍ಪಿ ಸರಕಾರಿ ಶಾಲೆಯಲ್ಲಿ ಆರಂಭಿಸಿದವಳು, ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ 9 ವರ್ಷದ ಪುತ್ರಿ ಮೆಹನಾಝ್. ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ಮಾಡಲೆಂದು ಹತ್ರಾಸ್‍ಗೆ ತೆರಳುತ್ತಿದ್ದ ವೇಳೆ ಅಕ್ಟೋಬರ್ 2020 ರಲ್ಲಿ ಬಂಧಿಸಲ್ಪಟ್ಟು ಯುಎಪಿಎ ಎದುರಿಸುತ್ತಿರುವ ಸಿದ್ದೀಖ್ ಕಪ್ಪನ್ ಅವರ ಪುತ್ರಿ ಈಕೆ.

"ದೇಶ ತನ್ನ 76ನೇ ಸ್ವಾತಂತ್ರ್ಯ ದಿನಕ್ಕೆ ಕಾಲಿಡುತ್ತಿರುವ ಈ ಮಹತ್ವದ ಸಂದರ್ಭದಲ್ಲಿ ಹೆಮ್ಮೆಯ ಭಾರತೀಯಳಾಗಿ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇನೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಗಾಂಧೀಜಿ, ನೆಹರೂ, ಭಗತ್ ಸಿಂಗ್ ಸಹಿತ ಅಸಂಖ್ಯಾತ ಕ್ರಾಂತಿಕಾರರ ಹೋರಾಟದ ಫಲ, ಇಂದು ಪ್ರತಿಯೊಬ್ಬ ಭಾರತೀಯನಿಗೆ ಒಂದು ಆಯ್ಕೆಯಿದೆ- ಅವರೇನು ಮಾತನಾಡಬಹುದು, ತಿನ್ನಬಹುದು ಹಾಗೂ ಯಾವ ಧರ್ಮವನ್ನು ಅನುಸರಿಸಬೇಕೆಂದು. ಅವರಿಗೆ  ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಈ ಮಹಾನ್ ದೇಶದ ಘನತೆಯನ್ನು ಯಾರೊಂದಿಗೂ ರಾಜಿ ಮಾಡಿಕೊಳ್ಳಕೂಡದು, ಆದರೆ ಕೆಲವೆಡೆ ಅಶಾಂತಿಯಿದೆ. ಇಂದು ಧರ್ಮ, ಜಾತಿ ರಾಜಕೀಯ ಕಾರಣಗಳಿಗಾಗಿ ಹಿಂಸೆ ನಡೆಯುತ್ತಿದೆ. ಇವುಗಳೆಲ್ಲವೂ ಅಂತ್ಯಗೊಳ್ಳಬೇಕು, ಅಶಾಂತಿಯ ನೆರಳನ್ನೂ ನಿರ್ಮೂಲನೆಗೊಳಿಸಬೇಕು. ಜೊತೆಯಾಗಿ ನಾವು ಈ ಜೀವನ ನಡೆಸಬೇಕು, ನಾವು ಭಾರತವನ್ನು ಉನ್ನತಿಯ ಉತ್ತುಂಗಕ್ಕೆ  ಏರಿಸಬೇಕು, ಉತ್ತಮ ಮತ್ತು ಯಾವುದೇ ಒಡಕುಗಳಿಲ್ಲದ ನಾಳೆಯ ಬಗ್ಗೆ ಕನಸು ಕಾಣಬೇಕು. ದೇಶದ ಸಾಮಾನ್ಯ ನಾಗರಿಕರ ಸ್ವಾತಂತ್ರ್ಯವನ್ನು ಸೆಳೆಯಬಾರದು ಎಂದು ಹೇಳಿ ನಾನು ಇಲ್ಲಿಗೆ ನಿಲ್ಲಿಸುತ್ತೇನೆ. ಜೈ ಹಿಂದ್, ಜೈ ಭಾರತ್,'' ಎಂದು ಹೇಳಿ ತನ್ನ ಭಾಷಣವನ್ನು ಬಾಲಕಿ ಅಂತ್ಯಗೊಳಿಸಿದ್ದಾಳೆ.

ಸಿದ್ದೀಕ್ ಕಪ್ಪನ್ ಅವರ ಬಿಡುಗಡೆಗಾಗಿ ಅವರ ಪತ್ನಿ ಹಾಗೂ ಕೇರಳ ಪತ್ರಕರ್ತರ ಯೂನಿಯನ್ ಶ್ರಮಿಸುತ್ತಿದ್ದರೂ ಫಲ ನೀಡಿಲ್ಲ.

ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News