ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಪಂದ್ಯಾಟ; ಯೆನೆಪೊಯ ಶಿಕ್ಷಣ ಸಂಸ್ಥೆಗೆ ಮೂರು ವಿಭಾಗದಲ್ಲಿ ಪ್ರಶಸ್ತಿ

Update: 2022-08-15 16:43 GMT

ಮಂಗಳೂರು : ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಮೈದಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ 24ನೇ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಪಂದ್ಯಾಟದ ಫೈನಲ್ ಹಣಾಹಣಿಯು ಸೋಮವಾರ ನಡೆಯಿತು. ಯೆನೆಪೊಯ ತಂಡವು ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪ್ರೌಢಶಾಲೆಯ ಬಾಲಕರ ವಿಭಾಗದಲ್ಲಿ ಯೆನೆಪೊಯ ಪ್ರೌಢಶಾಲೆ ಪ್ರಥಮ ಹಾಗೂ ಮಂಗಳೂರಿನ ಪ್ರೆಸ್ಟೀಜ್ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಪ್ರೌಢಶಾಲೆಯ ಬಾಲಕಿಯರ ವಿಭಾಗದಲ್ಲಿ ಬಜಪೆಯ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಹೈಸ್ಕೂಲ್ ತಂಡ ಪ್ರಥಮ ಹಾಗೂ ಉಚ್ಚಿಲ ಬೋವೀಸ್ ಆಂಗ್ಲಮಾಧ್ಯಮ ತಂಡ ದ್ವಿತೀಯ ತಂಡ ಪಡೆದಿದೆ.

ಪಿಯು ಕಾಲೇಜಿನ ಬಾಲಕರ ವಿಭಾಗದಲ್ಲಿ ಯೆನೆಪೊಯ ಪಿಯು ಕಾಲೇಜು ಪ್ರಥಮ ಹಾಗೂ ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಪಿಯು ಕಾಲೇಜಿನ ಬಾಲಕಿಯರ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಹಾಗೂ ಅಲೋಶಿಯಸ್ ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಕಾಲೇಜು ವಿಭಾಗದಲ್ಲಿ ಯೆನೆಪೊಯ ಕಾಲೇಜು ತಂಡ ಪ್ರಥಮ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.

ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ‘ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ವಾಗಲು ಸಾಧ್ಯ. ಕ್ರೀಡಾಪಟುಗಳೇ ದೇಶದ ಆಸ್ತಿ’ ಎಂದರು.

ಅತಿಥಿಗಳಾಗಿ ಆ್ಯಪಲ್ ಫ್ಲೈ ಮ್ಯಾನೇಜಿಂಗ್ ಡೈರೆಕ್ಟರ್ ನಿಯಾಝ್ ಎ.ಕೆ., ಮುಖಂಡರಾದ ಮೋಹನ್ ಬೆಂಗ್ರೆ, ಅರುಣ್ ಭಾಗವತ್ ಭಾಗವಹಿಸಿದ್ದರು. ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿಜಯ್ ಸುವರ್ಣ, ಹುಸೈನ್ ಬೋಳಾರ, ಉಮೇಶ್ ಉಚ್ಚಿಲ್, ಅನಿಲ್ ಪಿ.ವಿ., ಲತೀಫ್, ಚೇತನ್ ಬೆಂಗ್ರೆ, ಸಮೀರ್, ಸತೀಶ್, ಆನಂದ್ ಶೆಟ್ಟಿ, ಜಾವೆದ್, ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News