ಆರೆಸ್ಸೆಸ್ ಗೆ ತಲೆಬಾಗಿರುವೆ ಎಂಬ ಹೇಳಿಕೆ: ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲರಿಗೆ ದೂರು

Update: 2022-08-16 13:34 GMT

ಬೆಂಗಳೂರು, ಆ.16: ಆರೆಸ್ಸೆಸ್ (RSS) ತಲೆಬಾಗಿರುವೆ ಎಂಬ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಿಎಂ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಅವರು ದೂರು ಸಲ್ಲಿಸಿದ್ದಾರೆ.

ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸಂಘಟನೆ ಕಾನೂನಿನಡಿ ನೋಂದಣಿಯಾಗಿಲ್ಲ. ಹಲವಾರು ಕೋಟಿ ವ್ಯವಹಾರ ನಡೆಸುತ್ತಿದ್ದರೂ ಲೆಕ್ಕಪತ್ರ ನಿರ್ವಹಿಸಿಲ್ಲ. ಆರೆಸ್ಸೆಸ್ ಸಂಘಟನೆ ಸರಿಯಾಗಿ ಸದಸ್ಯರ ನಿರ್ವಹಣೆ ಮಾಡಿಲ್ಲ. ಆರೆಸ್ಸೆಸ್ ವಿರುದ್ಧ ಖುದ್ದು ಸಿಎಂ ಬೊಮ್ಮಾಯಿ ಅವರಿಗೆ ದೂರು ನೀಡಿದ್ದರೂ ತನಿಖೆ ನಡೆಸಿಲ್ಲ. ಹೀಗಾಗಿ, ಸಿಎಂ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹನುಮೇಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಆರೆಸೆಸ್ಸ್ ಸಂವಿಧಾನದ ಕಾನೂನಿನಡಿ ನೋಂದಣಿಯಾಗಿಲ್ಲ. ಈ ಬಗ್ಗೆ ಸರಕಾರವೇ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರಿಗೆ ಉತ್ತರ ಕೊಟ್ಟಿರುವುದು ಉಲ್ಲೇಖನೀಯವಾಗಿದೆ. ಈ ಸಂಘಟನೆ ವಿರುದ್ಧ ಹೈಕೋರ್ಟ್, ಸುಪ್ರೀಂಕೋರ್ಟ್‍ಗೆ ದೂರು ಸಲ್ಲಿಸಿದ್ದೇನೆ ಎಂದು ದೂರಿನಲ್ಲಿ ಎನ್.ಹನುಮೇಗೌಡ ಅವರು ತಿಳಿಸಿದ್ದಾರೆ. ಆಗಸ್ಟ್ 15ರಂದು ನಗರದಲ್ಲಿ ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಈ ಹೇಳಿಕೆ ನೀಡಿದ್ದರು.

► ಇದನ್ನೂ ಓದಿ...  ಆರೆಸ್ಸೆಸ್ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆಬಾಗಿದ್ದೇನೆ: ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News