BBMP ವಾರ್ಡ್ ಮರು ವಿಂಗಡಣೆಯಲ್ಲಿ ತಾರತಮ್ಯ ಆರೋಪ: ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಹೈಕೋರ್ಟ್

Update: 2022-08-16 15:13 GMT

ಬೆಂಗಳೂರು, ಆ.16: ಬಿಬಿಎಂಪಿ ವಾರ್ಡ್‍ಗಳ ಪುನರ್ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸಂಬಂಧ ಹೈಕೋರ್ಟ್‍ನಲ್ಲಿ ಮಂಗಳವಾರ ವಾದ-ಪ್ರತಿವಾದ ನಡೆಯಿತು.

ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್‍ಗಳ ಮರು ವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಎಸ್.ಇಸ್ಮಾಯಿಲ್ ಜಬಿವುಲ್ಲಾ ಹಾಗೂ ಇತರೆ ವಿಧಾನಸಭಾ ಕ್ಷೇತ್ರ ವಾರ್ಡ್‍ಗಳ ಪರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. 

ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಪರ ವಾದಿಸಿದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ವಿರೋಧ ಪಕ್ಷದ ಶಾಸಕರಿರುವ ವಾರ್ಡ್ ಸಂಖ್ಯೆ ಕಡಿಮೆ ಮಾಡಲಾಗಿದೆ. ಆದರೆ, ಆಡಳಿತ ಪಕ್ಷದ ಶಾಸಕರಿರುವ ವಾರ್ಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು ವಾದಿಸಿ, ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‍ಗಳ ಗಡಿಯನ್ನು ಬದಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್‍ಗಳ ಪರ ವಕೀಲರ, ರಾಜ್ಯ ಚುನಾವಣಾ ಆಯೋಗದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿತು. 

ಅರ್ಜಿದಾರರ ಕೋರಿಕೆ ಏನು?: ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ವಾರ್ಡ್‍ಗಳ ಸಂಖ್ಯೆ ಸಹ ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್‍ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. 

ಹಿಂದೆ ಏಳು ವಾರ್ಡ್‍ಗಳು ಇದ್ದವು. ಇದೀಗ ಕೆ.ಆರ್.ಮಾರ್ಕೆಟ್ ವಾರ್ಡ್ ಕೈಬಿಟ್ಟು ವಾರ್ಡ್‍ಗಳ ಸಂಖ್ಯೆಯನ್ನು ಆರಕ್ಕೆ ಇಳಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಹೀಗಾಗಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‍ಗಳನ್ನು ಪುನರ್ ರಚಿಸಿ 2022ರ ಜು.14ರಂದು ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‍ಗಳನ್ನು ರಚಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ.ಆರ್.ಮಾರ್ಕೆಟ್ ವಾರ್ಡ್ ಮರು ರಚಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News