ಹಮೀದ್ ಶಾ ಆವರಣದೊಳಗೆ ರಕ್ತ ನಿಧಿ ಕೇಂದ್ರ ಸ್ಥಾಪನೆ: ಜಿ.ಎ.ಬಾವಾ

Update: 2022-08-16 15:18 GMT

ಬೆಂಗಳೂರು, ಆ.16: 'ಅಪಘಾತ ಮುಂತಾದ ತುರ್ತು ಸ್ಥಿತಿಯಲ್ಲಿ ರಕ್ತಕ್ಕಾಗಿ ಉಂಟಾಗುತ್ತಿರುವ ಕೊರತೆಯನ್ನು ನೀಗಿಸುವ ಸಲುವಾಗಿ ಬೆಂಗಳೂರಿನ ಹೃದಯ ಭಾಗದಲ್ಲಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ' ಎಂದು ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ದರ್ಗಾ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದ್ದಾರೆ.

ಇಲ್ಲಿನ ಕಾರ್ಪೋರೇಷನ್ ವೃತ್ತದಲ್ಲಿರುವ ಹಝ್ರತ್ ಹಮೀದ್ ಶಾ ಕಟ್ಟಡ ಆವರಣದಲ್ಲಿ ನೂತನವಾಗಿ ರಕ್ತ ನಿಧಿ ಕೇಂದ್ರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ರೆಡ್ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ಸಂಗ್ರಹ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲು ಅಸಾಧ್ಯ. ನಿರ್ವಹಣೆ ಕೊರತೆಯಿಂದ ಹೆಚ್ಚಿನ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ರಕ್ತನಿಧಿಯನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.

ಇಲ್ಲಿ ರಕ್ತನಿಧಿ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಅನುಮತಿ ದೊರೆತಿದ್ದು, ರೋಗಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ನಯಾಝ್ ಅಹ್ಮದ್, ಕಾರ್ಯದರ್ಶಿ ಸೆಯ್ಯದ್ ಮುನಾವರ್, ಜಂಟಿಕಾರ್ಯದರ್ಶಿ ಸೆಯ್ಯದ್ ರಶೀದ್ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News