ಮಂಕಿಪಾಕ್ಸ್ ಗೆ ಮರುನಾಮಕರಣಕ್ಕೆ ನಿರ್ಧಾರ: ಹೆಸರು ಸೂಚಿಸಲು ಸಾರ್ವಜನಿಕರಿಗೆ ಮನವಿ

Update: 2022-08-16 17:31 GMT

ಜಿನೆವಾ, ಆ.16: ಮಂಕಿಪಾಕ್ಸ್ ಸಾಂಕ್ರಾಮಿಕಕ್ಕೆ ಮರುನಾಮಕರಣ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದ್ದು, ಅತ್ಯಂತ ವೇಗವಾಗಿ ಹರಡುತ್ತಿರುವ ಈ ಸಾಂಕ್ರಾಮಿಕ ರೋಗಕ್ಕೆ ಕಡಿಮೆ ಕಳಂಕ ತರುವ ಪದನಾಮವನ್ನು ಸೂಚಿಸುವಂತೆ ಸಾರ್ವಜನಿಕರನ್ನು ಮಂಗಳವಾರ ವಿನಂತಿಸಿದೆ.

ಮೇ ತಿಂಗಳಿನಿಂದ ಜಾಗತಿಕ ರಂಗದಲ್ಲಿ ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕದ ಹೆಸರಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಲವು ಬಾರಿ ಕಳವಳ ವ್ಯಕ್ತಪಡಿಸಿತ್ತು. ಕೋತಿಗಳಲ್ಲಿ ಮೊದಲ ಬಾರಿ ಸೋಂಕಿನ ವೈರಸ್ ಪತ್ತೆಯಾದ್ದರಿಂದ ಮಂಕಿಪಾಕ್ಸ್ ಎಂಬ ಹೆಸರಿಡಲಾಗಿದೆ. ಆದರೆ ವಾಸ್ತವವಾಗಿ ಈ ಸೋಂಕು ಹರಡುವುದರಲ್ಲಿ ಕೋತಿಗಳ ಅಥವಾ ಇತರ ಸಸ್ತನಿಗಳ ಪಾತ್ರ ಕಡಿಮೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಂಕಿಪಾಕ್ಸ್ ಸಾಂಕ್ರಾಮಿಕ ತೀವ್ರಗೊಂಡ ಬಳಿಕ ಬ್ರೆಝಿಲ್ನಲ್ಲಿ ಕೋತಿಗಳನ್ನು ಹಿಡಿದು ಹತ್ಯೆ ಮಾಡುವ ಹಲವು ಪ್ರಕರಣ ವರದಿಯಾಗಿದೆ. ರೋಗಗಳನ್ನು ಹೆಸರಿಸಲು ಪ್ರಸ್ತುತ ಅನುಸರಿಸುವ ಉತ್ತಮ ಪ್ರಕ್ರಿಯೆಗೂ ಮೊದಲು ಈ ಸಾಂಕ್ರಾಮಿಕಕ್ಕೆ ಮಂಕಿಪಾಕ್ಸ್ ಹೆಸರಿಡಲಾಗಿತ್ತು . ಈಗ ಕಳಂಕರಹಿತ ಹೆಸರನ್ನು ಹುಡುಕಲು ನಿರ್ಧರಿಸಿದ್ದೇವೆ . ವಿಶ್ವಸಂಸ್ಥೆಯ ವೆಬ್ಸೈಟ್ನಲ್ಲಿ ಸಾರ್ವಜನಿಕರೂ ಹೆಸರನ್ನು ಸೂಚಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರೆ ಫಡೇಲಾ ಚಯೀಬ್ ಜಿನೆವಾದಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಜ್ವರ, ಸ್ನಾಯುನೋವು ಮತ್ತು ಮೈಮೇಲೆ ಸಿಡುಬಿನ ತರಹದ ಹುಣ್ಣು ಕಾಣಿಸಿಕೊಳ್ಳುವ ಈ ಸಾಂಕ್ರಾಮಿಕ ಮೇ ತಿಂಗಳಿನಲ್ಲಿ ವಿಶ್ವದಾದ್ಯಂತ ಕ್ಷಿಪ್ರವಾಗಿ ಹರಡುತ್ತಿದೆ. ಈ ವರ್ಷದ ಜನವರಿಯಿಂದ ಇದುವರೆಗೆ ಸುಮಾರು 31,000ಕ್ಕೂ ಅಧಿಕ ಸೋಂಕು ಪ್ರಕರಣ ದಾಖಲಾಗಿದ್ದು 12 ಮಂದಿ ಮರಣ ಹೊಂದಿದ್ದಾರೆ ಎಂದು ಹೇಳಿರುವ ವಿಶ್ವ ಆರೋಗ್ಯಸಂಸ್ಥೆ ಈ ಸಾಂಕ್ರಾಮಿಕವನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.

ವೈರಸ್ ಪ್ರಾಣಿಗಳಿಂದ ಮಾನವನಿಗೆ ಹರಡಬಹುದು, ಆದರೆ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಉಲ್ಬಣಗೊಳ್ಳಲು ಮಾನವರ ನಡುವಿನ ನಿಕಟ ಸಂಪರ್ಕ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳಿದ್ದಾರೆ. ಈಗಾಗಲೇ ಸಭೆ ನಡೆಸಿರುವ ತಜ್ಞರ ತಂಡ ಮಂಕಿಪಾಕ್ಸ್ ರೂಪಾಂತರಕ್ಕೆ ಹೊಸ ಹೆಸರು ಇಡಲು ನಿರ್ಧರಿಸಿದೆ.

ಇದುವರೆಗೆ, ಎರಡು ಮುಖ್ಯ ರೂಪಾಂತರಗಳಿಗೆ ಅವು ಪ್ರಸಾರಗೊಂಡಿರುವ ಭೌಗೋಳಿಕ ಪ್ರದೇಶಗಳಾದ ಕಾಂಗೊ ಜಲಾನಯನ ಹಾಗೂ ಪಶ್ಚಿಮ ಆಫ್ರಿಕಾದ ಹೆಸರನ್ನು ಇಡಲಾಗಿದೆ. ಬಾಕ್ಸ್: ಕೋತಿಯಲ್ಲಿ ಮೊದಲು ಪತ್ತೆ 1958ರಲ್ಲಿ ಡೆನ್ಮಾರ್ಕ್ನಲ್ಲಿ ಸಂಶೋಧನೆಗೆಂದು ತರಿಸಲಾಗಿದ್ದ ಕೋತಿಯಲ್ಲಿ ಈ ಸೋಂಕಿನ ವೈರಸ್ ಮೊದಲ ಬಾರಿ ಪತ್ತೆಯಾದ್ದರಿಂದ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಸಲಾಗಿದೆ.

ಆದರೆ ಕೋತಿಗಳಷ್ಟೇ ಅಲ್ಲ, ಹೆಗ್ಗಣ, ಮುಂಗುಸಿ ಮುಂತಾದ ಹಲವು ದಂಶಕಗಳಲ್ಲೂ (ಬಾಯಿಯ ಮುಂಭಾಗದಲ್ಲಿ ಹರಿತವಾದ ಹಲ್ಲು ಹೊಂದಿರುವ ಪ್ರಾಣಿ) ಈ ಸಾಂಕ್ರಾಮಿಕ ಕಂಡು ಬಂದಿದೆ. 1970ರಲ್ಲಿ ಕಾಂಗೊ ಗಣರಾಜ್ಯದಲ್ಲಿ ಪ್ರಥಮ ಬಾರಿಗೆ ಮಾನವನಲ್ಲಿ ಈ ಸೋಂಕು ಪತ್ತೆಯಾಗಿತ್ತು. ಆ ಬಳಿಕ ಇದು ಕೆಲವು ಪಶ್ಚಿಮ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಮಾತ್ರ ಸೀಮಿತವಾಗಿತ್ತು ಮತ್ತು ಇದು ಸ್ಥಳೀಯವಾಗಿ ಆಗಾಗ ಕಾಣಿಸಿಕೊಳ್ಳುವ ರೋಗವೆಂದು ಗುರುತಿಸಿಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News