10 ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರಗಳ ವಿತರಣೆ

Update: 2022-08-16 15:33 GMT

ಬೆಂಗಳೂರು, ಆ.16: ಝೀಮ್ಯಾನ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಝಾಹೆದ್ ಅವರು ಮಂಗಳವಾರ ಇಂದಿರಾನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ಆವರಣದಲ್ಲಿ ಹಝ್ರತ್ ಅಬು ಉಬೈದಾ(ರಅ) ಬೈತುಲ್‍ಮಾಲ್ ಟ್ರಸ್ಟ್ ನೆರವಿನೊಂದಿಗೆ 10 ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್.ಝಾಹೆದ್, ನನ್ನ ಮೊಮ್ಮಗ ಆದಮ್ ಸಾಹೇಬ್ ಅಮೆರಿಕಾದಲ್ಲಿದ್ದು, ಇಂದು ಅವರ ಹುಟ್ಟುಹಬ್ಬ. ಸಾಮಾನ್ಯವಾಗಿ ನಾವು ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವುದಾದರೂ ಒಂದು ಸಮಾಜ ಸೇವಾ ಸಂಸ್ಥೆಗಳಿಗೆ ನೆರವು ನೀಡುತ್ತೇವೆ. ಈ ಬಾರಿ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ನೀಡಿ, ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಹಝ್ರತ್ ಅಬು ಉಬೈದಾ(ರಅ) ಬೈತುಲ್‍ಮಾಲ್ ಅಧ್ಯಕ್ಷ ಮುಹಮ್ಮದ್ ಇಬ್ರಾಹಿಮ್ ಶಫೀಕ್ ಮಾತನಾಡಿ, ಝಾಹೆದ್ ಅವರು ಇದಕ್ಕಿಂತ ಮುಂಚೆಯೂ ನಮ್ಮ ಸಂಸ್ಥೆಯ ಜೊತೆ ಸಮಾಜ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಶಾಲೆಯ ಮಕ್ಕಳಿಗಾಗಿ 15 ಸೈಕಲ್‍ಗಳನ್ನು ನೀಡಿದ್ದರು. ಇಂದು ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರವನ್ನು ವಿತರಿಸಿದ್ದಾರೆ ಎಂದರು.

ನಮ್ಮ ಸಂಸ್ಥೆಯ ವತಿಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ 10 ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಇವರಲ್ಲಿ ಇಸ್ಲಾಮ್ ಪುರ, ಡಿ.ಜೆ.ಹಳ್ಳಿ, ಇಂದಿರಾನಗರ ಹಾಗೂ ಹಲಸೂರು ಭಾಗದವರಿದ್ದಾರೆ. ಎರಡು ಹೊಲಿಗೆ ಯಂತ್ರಗಳನ್ನು ಅನ್ನಸಂದ್ರ ಪಾಳ್ಯದಲ್ಲಿರುವ ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲು ಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಮಸ್ಜಿದೆ ಉಮ್ಮುಲ್ ಹಸೈನ್ ಅಧ್ಯಕ್ಷ ಝಿಯಾವುಲ್ಲಾ ಖಾನ್ ಮಾತನಾಡಿ, ಯಾರು ಹೊಲಿಗೆ ಕೆಲಸ ಮಾಡಿಕೊಂಡು ತಮ್ಮ ಕುಟುಂಬದ ನಿರ್ವಹಣೆ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಯಾರಿಗೆ ಹೊಲಿಗೆ ಯಂತ್ರ ಖರೀದಿಸಲು ಆರ್ಥಿಕ ಶಕ್ತಿ ಇಲ್ಲವೋ ಅಂತಹವರನ್ನು ಗುರುತಿಸಿ ಈ ನೆರವು ನೀಡಲಾಗಿದೆ. ಝಾಹೆದ್ ಅವರು ಮುಂದಿನ ದಿನಗಳಲ್ಲಿಯೂ ಸಮುದಾಯದ ಸೇವೆಗೆ ಇದೇ ರೀತಿ ಮುಂದಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್ ನ ಪದಾಧಿಕಾರಿಗಳಾದ ಮುಹಮ್ಮದ್ ಯೂಸುಫ್, ಜೆ.ಎಂ.ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News