ಸಿಪಿಐ ಮಂಗಳೂರು ತಾಲೂಕು ಸಮ್ಮೇಳನ; ಸಂಘರ್ಷ ರಾಜಕೀಯ ಜನರನ್ನು ವಿಭಜಿಸುತ್ತಿದೆ: ಡಾ. ಬಿ.ಎಸ್.ಕಕ್ಕಿಲಾಯ

Update: 2022-08-16 17:42 GMT

ಮಂಗಳೂರು: ಸ್ವಾತಂತ್ರ್ಯದ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯದ ಬಾವುಟವು ದೇಶದ ಅಖಂಡತೆ, ಸತ್ಯ, ಧರ್ಮ, ತ್ಯಾಗ, ಧೈರ್ಯ, ಶಾಂತಿ, ಪ್ರಗತಿ, ಸಹಬಾಳ್ವೆ ಹಾಗೂ ಏಕತೆಯನ್ನು ಪ್ರತಿನಿಧಿಸುತ್ತದೆ. ಈ ಆಶಯಗಳಿಗೆ ಪೂರಕವಾಗಿ ಭಾರತದ ಸಂವಿಧಾನವೂ ರಚಿತವಾಗಿದೆ. ಆದರೆ ಈವತ್ತಿನ ಸ್ವಾರ್ಥಪರ ರಾಜಕೀಯ ಸಂಘರ್ಷವು ಜನರನ್ನು ವಿಭಜಿಸುತ್ತಿದೆ. ಸಹಬಾಳ್ವೆ, ಶಾಂತಿ, ಪ್ರಗತಿ, ಏಕತೆ ನಶಿಸುತ್ತಿದೆ ಎಂದು ಹಿರಿಯ ವೈದ್ಯ, ಸಾಮಾಜಿಕ ಚಿಂತಕ, ಪ್ರಗತಿಪರ ಲೇಖಕ ಡಾ. ಬಿ. ಶ್ರೀನಿವಾಸ ಕಕ್ಕಿಲಾಯ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಉರ್ವಸ್ಟೋರ್ ಯುವವಾನಿ ಸಭಾಂಗಣದ ಎಂ.ಶಿವಪ್ಪ ಕೋಟ್ಯನ್ ವೇದಿಕೆಯಲ್ಲಿ ರವಿವಾರ ಜರಗಿದ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಮಂಗಳೂರು ತಾಲೂಕು 24ನೇ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದ 75ನೆ ಸ್ವಾತಂತ್ರ್ಯದ ಸಂದರ್ಭ ಪ್ರಾಣತ್ಯಾಗ ಮಾಡಿದ ಧೀರರನ್ನು ಸ್ಮರಿಸಿ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಸಿಪಿಐ ಪಕ್ಷದ ನಾಯಕರ ಹೋರಾಟಗಳು ಅವಿಸ್ಮರಣೀಯವಾಗಿದೆ. ಪಕ್ಷದ ಮುಖಂಡರಾದ ಬಿವಿ ಕಕ್ಕಿಲ್ಲಾಯರು ಕ್ವಿಟ್ ಇಂಡಿಯಾ - ಭಾರತ ಬಿಟ್ಟು ತೊಲಗಿ - ಆಂದೋಲನದಲ್ಲಿ ಜೈಲು ಸೇರಿ, ಬಿಡುಗಡೆಯಾದ ಬಳಿಕ ಮತ್ತೆ ಬ್ರಿಟಿಷ್ ಆಧಿಪತ್ಯದ ಎದುರಾಗಿ ನಿರಂತರವಾಗಿ ಹೋರಾಟಗಳನ್ನು ಸಂಘಟಿಸಿ, ಜೈಲುವಾಸವನ್ನು ಅನುಭವಿಸಿದ್ದರು. ಅವರಂತೆಯೇ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಶಾಂತಾರಾಂ ಪೈ, ಕೇಶವ ಕಾಮತ್, ಎಸ್‌ಎನ್ ಹೊಳ್ಳ, ಸಿಂಪ್ಸನ್ ಸೋನ್ಸ್, ಲಿಂಗಪ್ಪ ಸುವರ್ಣ, ಮಹಾಬಲೇಶ್ವರ ಭಟ್, ಅಡ್ಡೂರು ಶಿವಶಂಕರ ರಾವ್, ನಾರಾಯಣ ಮೂರ್ತಿ ಮುಂತಾದ ಅನೇಕರು ಕಾರ್ಮಿಕ ಚಳುವಳಿಗಳನ್ನು ಬಲವಾಗಿ ಕಟ್ಟಿ ಅನೇಕ ಹೋರಾಟಗಳನ್ನು ಸಂಘಟಿಸಿದ್ದರು. ಅವರನ್ನೆಲ್ಲಾ ಈ ಸಂದರ್ಭ ನೆನಪಿಸಿ ಗೌರವಿಸಬೇಕಾಗಿದೆ ಎಂದು ಡಾ.ಬಿ.ಎಸ್. ಕಕ್ಕಿಲಾಯ ಹೇಳಿದರು.

ಸಮ್ಮೇಳನವನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಉದ್ಘಾಟಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಬಿ.ಶೇಖರ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್. ರಾವ್, ಎಐವೈಎಫ್ ಅಧ್ಯಕ್ಷ ಪುಷ್ಪರಾಜ್ ಬೋಳೂರು ಮಾತನಾಡಿದರು.

ಭುಜಂಗ ಕೋಡಿಕಲ್, ಕೆ. ನಾರಾಯಣ, ವಾಸು ಟೈಲರ್ ಅಳಪೆ, ಸೀತಾ ಸಾಲ್ಯಾನ್, ನಳಿನಿ ಕೋಡಿಕಲ್ ಅವರನ್ನು ಗೌರವಿಸಲಾಯಿತು. ರಾಮಯ್ಯ ಪೂಜಾರಿ ಕಲ್ಲಗುಡ್ಡೆ, ಗ್ಲಾಡಿ ಡಿಸೋಜ ಅತ್ರೇಲ್, ತಿಮ್ಮಪ್ಪ ಕಾವೂರು ಅವರುಗಳ ಅಧ್ಯಕ್ಷೀಯ ಮಂಡಳಿಯು ಸಮ್ಮೇಳನವನ್ನು ನಡೆಸಿಕೊಟ್ಟಿತು.

ಮುಂದಿನ ಅವಧಿಗೆ ಒಂಭತ್ತು ಮಂದಿ ಸದಸ್ಯರ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಕಾರ್ಯದರ್ಶಿಯಾಗಿ ಎಂ. ಕರುಣಾಕರ್, ಜೊತೆ ಕಾರ್ಯದರ್ಶಿಗಳಾಗಿ ತಿಮ್ಮಪ್ಪಕಾವೂರು, ಕೃಷ್ಣಪ್ಪ ಪಿಲಿಕುಲ ಹಾಗೂ ಕೋಶಾಧಿಕಾರಿಯಾಗಿ ಸುಲೋಚನಾ ಹರೀಶ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News