×
Ad

"ನಿನ್ನೆಯಿಂದ ಹೋರಾಟ ನಡೆಸುತ್ತಿದ್ದರು ಸಮಸ್ಯೆ ಆಲಿಸದ ಇಲಾಖೆಗೆ ನಾಚಿಗೆ ಆಗಬೇಕು‌"

Update: 2022-08-17 13:20 IST

ಬೆಂಗಳೂರು, ಆ.17: ಅಕ್ಷರ ದಾಸೋಹ ನೌಕರರ ಧರಣಿ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆ ಆಲಿಸದ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ನೌಕರರು ತೀವ್ರ ಆಕ್ರೋಶ ಹೊರಹಾಕಿದರು‌.

ಅಕ್ಷರದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ 60 ವರ್ಷ ತುಂಬಿದ ನೌಕರರನ್ನು ಅವಮಾನವೀಯವಾಗಿ‌ ಕೆಲಸದಿಂದ ಬಿಡುಗಡೆಗೊಳಿಸುತ್ತಿರುವ ಸರ್ಕಾರದ ಆದೇಶದ ವಿರುದ್ಧ ನೌಕರರು ಅಹೋರಾತ್ರಿ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಜಮಾಯಿಸಿದ ಮಹಿಳಾ ನೌಕರರು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಇಡೀ ರಾತ್ರಿ ಕಳೆದರು.

ಬೆಳ್ಳಂ ಬೆಳ್ಳಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಹೋರಾಟ ಆರಂಭಿ, ನಿನ್ನೆಯಿಂದ ಹೋರಾಟ ನಡೆಸುತ್ತಿದ್ದರು ಸಮಸ್ಯೆ ಆಲಿಸದ ಇಲಾಖೆಗೆ ನಾಚಿಗೆ ಆಗಬೇಕು‌. ನಿನ್ನೆಯಿಂದ ಇಲ್ಲಿದ್ದೇವೆ ಯಾರು‌ ಬಂದಿಲ್ಲ ಅವರಿಗೆ ನಮ್ಮ ಕಷ್ಟ‌ ಕಾಣುತ್ತಿಲ್ಲ. ಆರಾಮವಾಗಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ರಾಜ್ಯದಲ್ಲಿ ಬಿಸಿಯೂಟದ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಅನುಷ್ಠಾನಗೊಂಡಿದೆ. ಅಂದಿನಿಂದಲೂ ಯಾವುದೇ ವಯಸ್ಸಿನ ನಿರ್ಬಂಧ ಇಲ್ಲದೆ ಅಡುಗೆ ಸಿಬ್ಬಂದಿ ಕನಿಷ್ಠ ಗೌರವಧನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಸರ್ಕಾರ ಮಾ.5ರಂದು 60 ವರ್ಷ ದಾಟಿದ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲು ಆದೇಶ ಹೊರಡಿಸಿತ್ತು. ಆದೇಶದಂತೆ ಇದೀಗ ಅವಮಾನೀಯವಾಗಿ ಮನೆಗೆ ಕಳುಹಿಸುತ್ತಿದ್ದಾರೆ ಎಂದರು.

ಪ್ರಾಥಮಿಕ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬಿಸಿಯೂಟ ನಂತರ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಸುಮಾರು 20 ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದರೂ ಯಾವುದೇ ಸೌಲಭ್ಯಗಳಿಲ್ಲ. 60 ವರ್ಷ ದಾಟಿದವರು ಪಿಂಚಣಿ ಅಥವಾ ಇಡಗಂಟು ಹಣ ಇಲ್ಲದೆ ಬರಿಗೈಲಿ ಮನೆಗೆ ಮರಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲಸದಿಂದ ಬಿಡುಗಡೆಗೊಳಿಸುವಾಗ ಇಂತಿಷ್ಟು ಎಂದು ಗೌರವ ಮೊತ್ತ ನೀಡಬೇಕು. ಪ್ರಮುಖವಾಗಿ 1 ಲಕ್ಷ ರೂ.ನೀಡಬೇಕು. ಅಕ್ಷರದಾಸೋಹ ನೌಕರರಿಗೆ ಸೇವಾ ಭದ್ರತೆ ನೀಡಬೇಕು. ಕನಿಷ್ಠ ವೇತನ, ಪಿಂಚಣಿ, ಗ್ರಾಚ್ಯುಟಿ ನೀಡಬೇಕು ಎಂದು ಇದೇ ವೇಳೆ ನೌಕರರು ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News