×
Ad

ಪುತ್ತೂರು; 21 ವರ್ಷಗಳ ಹಿಂದೆ ನಡೆದ ಕಾರು ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2022-08-17 17:58 IST
ಸುಧೀರ್ ಪ್ರಭು

ಪುತ್ತೂರು: 21 ವರ್ಷಗಳ ಹಿಂದೆ ನಡೆದ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕದ್ರಿ ನಿವಾಸಿ ಸುಧೀರ್ ಪ್ರಭು ಬಂಧಿತ ಆರೋಪಿ.

ಈತ ತನ್ನ ಸ್ನೇಹಿತ ಹನೀಫ್ ಎಂಬಾತನ ಜೊತೆಗೂಡಿ 2001 ಮಾರ್ಚ್ 8ರಂದು ಮಂಗಳೂರಿನ ಹಂಪನಕಟ್ಟೆಯಿಂದ ಜಯಂತ ಎಂಬವರ ಬಾಡಿಗೆಗೆ ಟಾಟಾ ಸುಮೋ ಕಾರನ್ನು ಪಡೆದುಕೊಂಡು ಸಕಲೇಶಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿದ್ದು,  2001 ಮಾರ್ಚ್ 13ರಂದು ಪುತ್ತೂರಿಗೆ ಆಗಮಿಸಿ ಇಲ್ಲಿನ ಆರಾಧನಾ ಟೂರಿಸ್ಟ್ ಹೋಂನಲ್ಲಿ ತಂಗಿದ್ದು, ಬಾಡಿಗೆ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿಸಿಕೊಂಡಿದ್ದರು. ಬಳಿಕ ಚಾಲಕನಿಗೆ ಬಾಡಿಗೆ ನೀಡದೇ ಆತನನ್ನು ಅಲ್ಲಿಯೇ ತಂಗಲು  ಹೇಳಿ ಅದೇ ದಿನ ಸಂಜೆ ಚಾಲಕ ಇಲ್ಲದ ಸಮಯದಲ್ಲಿ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. 

ಈ ಬಗ್ಗೆ ಕಾರು ಚಾಲಕ ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ  ಸುಧೀರ್ ಪ್ರಭು ಮತ್ತು ಹನೀಫ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 

ನ್ಯಾಯಾಲಯದಲ್ಲಿ ಜಾಮಿನು ಪಡೆದ ಆರೋಪಿಗಳು ಬಳಿಕ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ನ್ಯಾಯಾಲಯ ಅವರಿಗೆ ವಾರಂಟ್ ಜಾರಿಗೊಳಿಸಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಹನೀಫ್‍ನನ್ನು 2018ರಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಇನ್ನೋರ್ವ ಆರೋಪಿ ಸುಧೀರ್ ಪ್ರಭುವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ನಗರ ಠಾಣೆ ಎಎಸ್‍ಐ ಚಂದ್ರ ಮತ್ತು ಎಚ್‍ಸಿ ಪರಮೇಶ್ವರ ಅವರು ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News