ಬೆಂಗಳೂರಿನಲ್ಲಿ ಡೆಂಘಿ ಉಲ್ಬಣ: ಹೆಚ್ಚಿದ ಆತಂಕ

Update: 2022-08-17 18:13 GMT

ಬೆಂಗಳೂರು, ಆ.17: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಮಳೆಯ ವಾತಾವರಣ ಉಲ್ಬಣಗೊಂಡಿದ್ದ ಹಿನ್ನೆಲೆ ಶೀತ, ಜ್ವರದ ಪ್ರಕರಣಗಳು ಏರಿಕೆಯಾಗಿದ್ದು, ಇದರ ನಡುವೆ ಎಚ್1ಎನ್1 ಮತ್ತು ಡೆಂಘಿ ಹೆಚ್ಚಳಗೊಂಡಿದೆ ಎನ್ನುವ ಆತಂಕಕಾರಿ ಮಾಹಿತಿ ವರದಿಯಾಗಿದೆ. 

ಬೆಂಗಳೂರು ವ್ಯಾಪ್ತಿಯ ಸರಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಸೇರುವ ರೋಗಿಗಳ ಪೈಕಿ ಜ್ವರದಿಂದ ಬಳಲುತ್ತಿರುವ ಮಂದಿ ಅಧಿಕವಾಗಿದ್ದು, ಅದರಲ್ಲೂ ಎಚ್1ಎನ್1 ಮತ್ತು ಡೆಂಘಿ ರೋಗಿಗಳ ಸಂಖ್ಯೆಯೂ ಕಂಡುಬಂದಿದೆ. ಕೋವಿಡ್ ಲಕ್ಷಣಗಳನ್ನೇ ಹೋಲುವ ಈ ವೈರಾಣು ಜ್ವರ ಜನರಲ್ಲಿ ಆತಂಕ ಮೂಡಿಸಿದೆ. 

ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಬಹುಬೇಗ ವೈರಾಣು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ವೈರಾಣು ಜ್ವರ ಒಬ್ಬರಿಂದೊಬ್ಬರಿಗೆ ಹರಡುವುದರಿಂದ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

ನಗರದಲ್ಲಿ ಮಳೆಯಿಂದಾಗಿ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಳೆಯ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಮನೆಗಳು, ಕಟ್ಟಡಗಳ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಂತಾದ ಸಾಮಾನ್ಯ ಮುನ್ನೆಚ್ಚರಿಕೆಗಳು ಡೆಂಘಿ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News