ಜಾಗತಿಕ ಹಸಿವೆ ಸೂಚ್ಯಂಕದಲ್ಲಿ ಕುಸಿಯುತ್ತಿರುವ ಭಾರತ

Update: 2022-08-18 10:39 GMT

ಭಾರತವು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಆಹಾರ ಉತ್ಪಾದಕ ದೇಶವಾಗಿದೆ ಮತ್ತು ಹಾಲು, ದ್ವಿದಳ ಧಾನ್ಯಗಳು, ಅಕ್ಕಿ, ಮೀನು, ತರಕಾರಿ ಮತ್ತು ಗೋಧಿ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದರ ಹೊರತಾಗಿಯೂ, ದೇಶದ ದೊಡ್ಡ ಸಂಖ್ಯೆಯ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2019ರ ಕೊರೋನ ಅವಧಿಯ ಬಳಿಕ ಬದುಕುಳಿಯುವುದಕ್ಕಾಗಿನ ಜನರ ಹೋರಾಟ ತೀವ್ರವಾಗಿ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ‘ಜಗತ್ತಿನಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಸ್ಥಿತಿಗತಿ ವರದಿ 2022’ ಹೇಳಿದೆ. 2021ರಲ್ಲಿ, ಜಗತ್ತಿನ 76.8 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಈ ಪೈಕಿ 22.4 ಕೋಟಿ (ಶೇ. 29) ಮಂದಿ ಭಾರತೀಯರು. ಅಂದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಾಗತಿಕ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಮಂದಿ ಭಾರತೀಯರು.

ಇಂದು ಭಾರತದ ಅತಿ ಗಂಭೀರ ಸಮಸ್ಯೆಗಳ ಪೈಕಿ ಒಂದು ಅಪೌಷ್ಟಿಕತೆ. ಆದರೆ, ಅದು ದೇಶದ ಗಮನವನ್ನು ಸೆಳೆದೇ ಇಲ್ಲ. ಇಂದು ಭಾರತದಲ್ಲಿ 46.6 ಲಕ್ಷ ಕಡಿಮೆ ತೂಕದ ಮತ್ತು 25.5 ಲಕ್ಷ ಪ್ರಾಯಕ್ಕೆ ತಕ್ಕ ಎತ್ತರ ಹೊಂದಿರದ ಮಕ್ಕಳಿದ್ದಾರೆ. ಇದು ಅತ್ಯಂತ ಆತಂಕದ ವಿಚಾರವಾಗಿದೆ. ದೇಶದಲ್ಲಿ ಅಪೌಷ್ಟಿಕತೆಯ ಮಟ್ಟ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ಹೇಳುತ್ತದೆ. ಆದರೆ ಅತಿ ಕಡಿಮೆ ಆದಾಯ ಹೊಂದಿದ ಗುಂಪಿನ ಕುಟುಂಬಗಳ ಅರ್ಧಕ್ಕಿಂತಲೂ ಹೆಚ್ಚು (ಶೇ. 51) ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಮತ್ತು ಶೇ. 49 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.

ಭಾರತದ ಅಪೌಷ್ಟಿಕತೆ ಬಿಕ್ಕಟ್ಟು ತೀವ್ರಗೊಂಡಿದೆ ಎನ್ನುವುದನ್ನು ಸ್ವತಃ ಭಾರತ ಸರಕಾರದ ಅಂಕಿಅಂಶಗಳು ಹೇಳುತ್ತಿವೆ. ಈ ಅಂಕಿಸಂಖ್ಯೆಗಳ ಪ್ರಕಾರ, ಪ್ರಸಕ್ತ ಭಾರತದಲ್ಲಿ 33 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಅರ್ಧಕ್ಕೂ ಹೆಚ್ಚು, ಅಂದರೆ 17.7 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಗೆ ಒಳಗಾಗಿದ್ದಾರೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ‘ಜಗತ್ತಿನ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಸ್ಥಿತಿಗತಿ 2022: ಆರೋಗ್ಯಕರ ಆಹಾರಗಳು ಜನರ ಕೈಗೆಟುಕುವಂತೆ ಮಾಡಲು ಆಹಾರ ಮತ್ತು ಕೃಷಿ ನೀತಿಗಳ ಪರಿಷ್ಕರಣೆ’ ಎಂಬ ತಲೆಬರಹದ ವರದಿಯೊಂದನ್ನು ಇತ್ತೀಚೆಗೆ ಸಲ್ಲಿಸಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ 97 ಕೋಟಿಗೂ ಅಧಿಕ ಜನರು, ಅಂದರೆ ದೇಶದ ಜನಸಂಖ್ಯೆಯ ಸುಮಾರು ಶೇ. 71 ಭಾಗದಷ್ಟು ಜನರಿಗೆ ಪೌಷ್ಟಿಕ ಆಹಾರವನ್ನು ಖರೀದಿಸುವ ಸಾಮರ್ಥ್ಯವಿಲ್ಲ.

ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ, ಆರೋಗ್ಯಯುತ ಆಹಾರವು ಕನಿಷ್ಠ ಸಂಸ್ಕರಣೆಗೆ ಒಳಗಾದ ಆಹಾರಗಳನ್ನು ಹೊಂದಿರುತ್ತದೆ. ಉದಾಹರಣೆಗೆ; ಸಮತೂಕದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏಕದಳ ಧಾನ್ಯಗಳು, ಬೀಜಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಮತ್ತು ಸಾಧಾರಣ ಪ್ರಮಾಣದ ಪ್ರೊಟೀನ್. ಭಾರತದಲ್ಲಿ ಆರೋಗ್ಯಯುತ ಆಹಾರಕ್ಕಾಗಿ ದಿನವೊಂದಕ್ಕೆ ಓರ್ವ ವ್ಯಕ್ತಿಗೆ ಸುಮಾರು 2.97 ಡಾಲರ್ (ಸುಮಾರು 235 ರೂಪಾಯಿ) (2020ರಲ್ಲಿ) ಖರ್ಚಾಗುತ್ತದೆ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ವರದಿಯೊಂದು ತಿಳಿಸಿದೆ. ಖರೀದಿ ಸಾಮರ್ಥ್ಯ ತುಲನೆ (purchasing power parity)ಯ ಆಧಾರದಲ್ಲಿ, ಭಾರತದಲ್ಲಿ ನಾಲ್ವರು ಸದಸ್ಯರ ಕುಟುಂಬವೊಂದು ತಿಂಗಳಿಗೆ ಆಹಾರಕ್ಕಾಗಿ 7,600 ರೂ. ಖರ್ಚು ಮಾಡಬೇಕಾಗುತ್ತದೆ. ಖರೀದಿ ಸಾಮರ್ಥ್ಯ ತುಲನೆಯು, ವಸ್ತು ಮತ್ತು ಸೇವೆಗಳ ದರದಲ್ಲಿ ಎರಡು ದೇಶಗಳ ನಡುವಿರುವ ವ್ಯತ್ಯಾಸವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಶೇ. 70.5 ಭಾರತೀಯರಿಗೆ ಆರೋಗ್ಯಯುತ ಆಹಾರ ಎಟಕುವುದಿಲ್ಲ

ವರದಿಯ ಪ್ರಕಾರ, ಶೇ. 70.5 ಭಾರತೀಯರಿಗೆ ಆರೋಗ್ಯಯುತ ಆಹಾರವನ್ನು ಖರೀದಿಸುವ ಸಾಮರ್ಥ್ಯವಿಲ್ಲ. ಭಾರತಕ್ಕೆ ಹೋಲಿಸಿದರೆ ಇತರ ದೇಶಗಳ ಪರಿಸ್ಥಿತಿ ಉತ್ತಮವಾಗಿದೆ. ಚೀನಾದಲ್ಲಿ ಶೇ. 12, ಬ್ರೆಝಿಲ್‌ನಲ್ಲಿ ಶೇ. 19 ಮತ್ತು ಶ್ರೀಲಂಕಾದಲ್ಲಿ ಶೇ. 49 ಜನರಿಗೆ ಈ ಸಾಮರ್ಥ್ಯವಿಲ್ಲ. ಅದೇ ವೇಳೆ, ನೇಪಾಳ (ಶೇ. 84) ಮತ್ತು ಪಾಕಿಸ್ತಾನ (ಶೇ. 83.5) ದೇಶಗಳ ಸ್ಥಾನ ಭಾರತಕ್ಕಿಂತಲೂ ಕೆಳಗಿದೆ.

ಹಸಿವೆ-ನಿಗ್ರಹ ಕ್ಷೇತ್ರದಲ್ಲಿ ಭಾರತವು ನಿಧಾನಗತಿಯ ಪ್ರಗತಿಯನ್ನು ಕಾಣುತ್ತಿದೆ ಎಂಬುದಾಗಿಯೂ ವರದಿ ತಿಳಿಸಿದೆ. ಆದರೆ, ಇನ್ನೊಂದು ಕಡೆ, ಸ್ಥೂಲಕಾಯದ ಸಮಸ್ಯೆಯು ಹೆಚ್ಚುತ್ತಿದೆ. 15ರಿಂದ 49 ವರ್ಷ ವಯೋಗುಂಪಿನ 3.4 ಕೋಟಿ ಜನರು ಸ್ಥೂಲದೇಹಿಗಳಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಈ ಸಂಖ್ಯೆಯು 2.5 ಕೋಟಿ ಆಗಿತ್ತು.

ಆಹಾರ ಅಭದ್ರತೆಯ ತೀವ್ರತೆಯಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಅಂತರವೂ ಹಿಗ್ಗಿದೆ. ಜಗತ್ತಿನ ಮಹಿಳೆಯರ ಪೈಕಿ ಶೇ. 31.9 ಮಂದಿ ಮಧ್ಯಮ ಅಥವಾ ತೀವ್ರ ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ. ಈ ಪ್ರಮಾಣವು ಪುರುಷರಲ್ಲಿ ಶೇ. 27.6. ಅದೇ ರೀತಿ, ಮಹಿಳೆಯರಲ್ಲಿ ಅನೀಮಿಯ ಸಮಸ್ಯೆಯು ಹೆಚ್ಚಿದೆ. ಭಾರತದಲ್ಲಿ, 2021ರಲ್ಲಿ 18.7 ಕೋಟಿ ಮಹಿಳೆಯರು ಅನೀಮಿಯದಿಂದ ಬಳಲುತ್ತಿದ್ದರು. 2019ರಲ್ಲಿ ಈ ಸಂಖ್ಯೆಯು ಸುಮಾರು 17.2 ಕೋಟಿ ಆಗಿತ್ತು. ಅಂದರೆ, ದೇಶದಲ್ಲಿ ಅನೀಮಿಯದಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯು ಎರಡು ವರ್ಷಗಳಲ್ಲಿ ಒಂದೂವರೆ ಕೋಟಿಯಷ್ಟು ಹೆಚ್ಚಿದೆ.

ಈ ವರದಿಯ ಪ್ರಕಾರ, ಸುಮಾರು 80 ಕೋಟಿ ಭಾರತೀಯರು, ಅಂದರೆ ಜನಸಂಖ್ಯೆಯ ಸುಮಾರು ಶೇ. 60 ಭಾರತ ಸರಕಾರವು ಕಡಿಮೆ ದರದಲ್ಲಿ ನೀಡುವ ರೇಶನ್ ಆಹಾರವನ್ನು ಅವಲಂಬಿಸಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ, ವಿಶೇಷ ಸಾಂಕ್ರಾಮಿಕ ನೆರವಿನ ರೂಪದಲ್ಲಿ ಕೊಡಲಾಗುವ 5 ಕೆಜಿ ಉಚಿತ ಆಹಾರ ಧಾನ್ಯದ ಜೊತೆಗೆ, ಓರ್ವ ವ್ಯಕ್ತಿಗೆ ಒಂದು ಕಿಲೋಗೆ ರೂ. 2-3ರಂತೆ 5 ಕೆಜಿ ಆಹಾರಧಾನ್ಯವನ್ನು ನೀಡಲಾಗುತ್ತದೆ. ಆದರೆ, ಈ ಯೋಜನೆಯಲ್ಲಿ ಆಹಾರ ಧಾನ್ಯವನ್ನು ಮಾತ್ರ ಕೊಡುತ್ತಿರುವುದಕ್ಕೆ ಟೀಕೆಯೂ ವ್ಯಕ್ತವಾಗಿದೆ. ಅಂದರೆ, ಈ ಯೋಜನೆಯು ಓರ್ವ ವ್ಯಕ್ತಿಗೆ ಸಾಕಷ್ಟು ಕ್ಯಾಲೊರಿಗಳನ್ನು ನೀಡುತ್ತದೆ, ಆದರೆ ಜನರ ಒಟ್ಟಾರೆ ಪೌಷ್ಟಿಕತೆಗೆ ಯಾವುದೇ ಗಮನ ನೀಡುವುದಿಲ್ಲ ಎಂದು ಟೀಕಾಕಾರರು ಹೇಳುತ್ತಾರೆ.

ಇದೇ ಸಮಯದಲ್ಲಿ, ಜಾಗತಿಕ ಹಸಿವೆ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಮತ್ತಷ್ಟು ಕುಸಿದಿದೆ. ಈ ಸೂಚ್ಯಂಕದಲ್ಲಿ ಭಾರತದ ಸ್ಥಾನ 2020ರಲ್ಲಿ 116 ದೇಶಗಳ ಪೈಕಿ 94 ಆಗಿತ್ತು. ಆದರೆ, 2021ರಲ್ಲಿ ಅದು 101ಕ್ಕೆ ಜಾರಿದೆ. ಭಾರತ ಈಗ ಈ ಸೂಚ್ಯಂಕದಲ್ಲಿ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಿಗಿಂತಲೂ ಕೆಳಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ಆದರೆ ಸಾಮಾನ್ಯ ಭಾರತೀಯರ ಸಂಪತ್ತು ಶೇ. 7ರಷ್ಟು ಕುಸಿಯಿತು. ತುಂಬಾ ಜನರು ತಮ್ಮ ಕೆಲಸಗಳನ್ನು ಮತ್ತು ಅದರ ಜೊತೆಗೆ ಆದಾಯಗಳನ್ನು ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ, ಸರಕಾರದ ನೀತಿಗಳು ಮತ್ತು ಅಭಿವೃದ್ಧಿ ಕುರಿತ ಹೇಳಿಕೆಗಳು ವಾಸ್ತವ ಪರಿಸ್ಥಿತಿಗಿಂತ ತುಂಬಾ ದೂರವಾಗಿದೆ.

ಕಳೆದ 4-5 ವರ್ಷಗಳ ಅವಧಿಯಲ್ಲಿ ಶಿಶು ಪೌಷ್ಟಿಕತೆ ಮಟ್ಟದಲ್ಲಿ ಯಾವುದೇ ಗಮನಾರ್ಹ ಪ್ರಗತಿ ಆಗಿಲ್ಲ ಎಂಬುದಾಗಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ ಹೇಳಿದೆ. ಈ ಪರಿಸ್ಥಿತಿಯು ಲಾಕ್‌ಡೌನ್ ಅವಧಿಯಲ್ಲಂತೂ ತೀರಾ ಹದಗೆಟ್ಟಿತು. ಲಾಕ್‌ಡೌನ್ ಅವಧಿಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಜನರಿಗೆ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಸಿಗಲಿಲ್ಲ, ಹಾಗಾಗಿ, ಆಗ ಅವರ ಆರೋಗ್ಯವು ಹದಗೆಟ್ಟಿತು ಎನ್ನುವುದನ್ನು ಹಂಗರ್-ವಾಚ್ ಸಮೀಕ್ಷೆಗಳೂ ಹೇಳಿವೆ. ಇವುಗಳ ಹೊರತಾಗಿಯೂ, ಹಾಲಿ ಸರಕಾರವು ಮಧ್ಯಾಹ್ನದ ಬಿಸಿಯೂಟ ಮತ್ತು ಐಸಿಡಿಎಸ್‌ನಂತಹ ಯೋಜನೆಗಳನ್ನು ಬಜೆಟ್‌ನಲ್ಲಿ ಕಡೆಗಣಿಸಿದೆ. ಅಪೌಷ್ಟಿಕತೆ ಮತ್ತು ಹಸಿವೆಯ ವಿರುದ್ಧ ಹೋರಾಡುವುದಕ್ಕೆ ಈ ಯೋಜನೆಗಳು ಉಪಯುಕ್ತ ಎನ್ನುವುದನ್ನು ಸರಕಾರ ಮನಗಾಣುತ್ತಿಲ್ಲ.

ವಿಶ್ವಸಂಸ್ಥೆಯ ‘ಜಗತ್ತಿನಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಸ್ಥಿತಿಗತಿ 2022’ ವರದಿಯ ಪ್ರಕಾರ, 2020ರ ವೇಳೆಗೆ ಜಗತ್ತಿನಲ್ಲಿ ಆರೋಗ್ಯಯುತ ಆಹಾರ ಸಿಗದ 307.42 ಕೋಟಿ ಜನರಿದ್ದರು. ಅಂದರೆ, ಜಗತ್ತಿನ ಜನಸಂಖ್ಯೆಯ 42ರಷ್ಟು ಜನರಿಗೆ ಆರೋಗ್ಯಯುತ ಆಹಾರ ತಿನ್ನಲು ಸಾಧ್ಯವಿರಲಿಲ್ಲ. ಅದೇ ವೇಳೆ, ಆರೋಗ್ಯಯುತ ಆಹಾರ ಸಿಗದ 97.33 ಕೋಟಿ ಜನರು ಭಾರತದಲ್ಲಿದ್ದಾರೆ. ಅಂದರೆ ಶೇ. 70 ಭಾರತೀಯರಿಗೆ ಆರೋಗ್ಯಯುತ ಆಹಾರ ಸಿಗುವುದಿಲ್ಲ. ಓರ್ವ ವ್ಯಕ್ತಿ ಪ್ರತೀ ದಿನ ಆರೋಗ್ಯಯುತ ಆಹಾರವನ್ನು ಸೇವಿಸಿದರೆ ಆ ವ್ಯಕ್ತಿ ಎಷ್ಟು ಖರ್ಚು ಮಾಡಬೇಕಾಗುತ್ತದೆ ಎನ್ನುವುದನ್ನು ವರದಿ ಹೇಳುತ್ತದೆ. ಭಾರತದಲ್ಲಿ ವ್ಯಕ್ತಿಯೊಬ್ಬರು ಪ್ರತೀ ದಿನ ಆರೋಗ್ಯಯುತ ಆಹಾರವನ್ನು ಸೇವಿಸಿದರೆ, ಅವರು ದಿನಕ್ಕೆ 2.9 ಡಾಲರ್ (ಸುಮಾರು 235 ರೂಪಾಯಿ) ಖರ್ಚು ಮಾಡಬೇಕಾಗುತ್ತದೆ. ಅದರ ಪ್ರಕಾರ, ಆ ವ್ಯಕ್ತಿಯು ತಿಂಗಳಿಗೆ 7,000 ರೂ.ಗಿಂತಲೂ ಅಧಿಕ ಖರ್ಚು ಮಾಡಬೇಕಾಗುತ್ತದೆ. ಆಹಾರ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಜನರಿಗೆ ಆರೋಗ್ಯಯುತ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಪೌಷ್ಟಿಕ ಆಹಾರವು ಎಷ್ಟು ದುಬಾರಿಯಾಗಿದೆ ಯೆಂದರೆ, 97 ಕೋಟಿ ಜನರಿಗೆ ಅದನ್ನು ಖರೀದಿಸಲು ಸಾಧ್ಯವಿಲ್ಲ. ಭಾರತವು ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಗೋಧಿ ಮತ್ತು ಅಕ್ಕಿ ಉತ್ಪಾದಕ ದೇಶವಾದರೂ, ದೇಶದ ಜನಸಂಖ್ಯೆಯ ಶೇ. 70ಕ್ಕೂ ಅಧಿಕ ಮಂದಿಗೆ ಆರೋಗ್ಯಯುತ ಆಹಾರ ಸಿಗದಿರುವುದು ದುರಂತವೇ ಸರಿ.

ಆದಾಗ್ಯೂ, ಭಾರತದಲ್ಲಿ ಪರಿಸ್ಥಿತಿ ಸುಧಾರಿಸುತ್ತಿತ್ತು, ಆದರೆ ಕೊರೋನ ಸಾಂಕ್ರಾಮಿಕವು ಅದಕ್ಕೆ ತಡೆಯೊಡ್ಡಿತು ಎಂದು ವರದಿ ಹೇಳಿದೆ. 2017ರಲ್ಲಿ, ಶೇ. 75 ಭಾರತೀಯರಿಗೆ ಆರೋಗ್ಯಯುತ ಆಹಾರ ಸಿಗುತ್ತಿರಲಿಲ್ಲ. ಈ ಸಂಖ್ಯೆಯು 2018ರಲ್ಲಿ ಶೇ. 71.5ಕ್ಕೆ ಮತ್ತು 2019ರಲ್ಲಿ ಶೇ. 69.4ಕ್ಕೆ ತಗ್ಗಿತು. ಆದರೆ, 2020ರಲ್ಲಿ ಈ ಸಂಖ್ಯೆ ಮತ್ತೆ ಶೇ. 70ನ್ನು ದಾಟಿತು.

ಭಾರತದಲ್ಲಿ ಈ ಸಮಸ್ಯೆಯ ಭೀಕರತೆಯನ್ನು ಗಮನಿಸಿ. ಚೀನಾದಲ್ಲಿ ನಮಗಿಂತ ಹೆಚ್ಚಿನ ಜನಸಂಖ್ಯೆಯಿದೆ. ಆದರೆ, ಅಲ್ಲಿ ಆರೋಗ್ಯಯುತ ಆಹಾರವನ್ನು ತಿನ್ನಲು ಸಾಧ್ಯವಾಗದ ಜನರ ಸಂಖ್ಯೆ ಭಾರತಕ್ಕಿಂತ 5 ಪಟ್ಟು ಕಡಿಮೆ. ಚೀನಾದಲ್ಲಿ ಆರೋಗ್ಯಯುತ ಆಹಾರವನ್ನು ತಿನ್ನಲು ಸಾಧ್ಯವಾಗದವರ ಸಂಖ್ಯೆ 17 ಕೋಟಿಗಿಂತಲೂ ಕಡಿಮೆಯಿದೆ.

ಇಷ್ಟೇ ಅಲ್ಲ, ಭಾರತದಲ್ಲಿ ತೂಕ ಕಡಿಮೆಯಿರುವ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ ಈಗಲೂ 2 ಕೋಟಿಗಿಂತ ಹೆಚ್ಚಾಗಿದೆ. 5 ವರ್ಷಕ್ಕಿಂತ ಕೆಳಗಿನ 3.6 ಕೋಟಿಗೂ ಅಧಿಕ ಮಕ್ಕಳು ವಯಸ್ಸಿಗೆ ತಕ್ಕ ಎತ್ತರವನ್ನು ಹೊಂದಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್‌ಎಫ್‌ಎಚ್‌ಎಸ್-5) ವರದಿಯು ಕಳೆದ ವರ್ಷದ ನವೆಂಬರ್‌ನಲ್ಲಿ ಬಿಡುಗಡೆಗೊಂಡಿತು. 6ರಿಂದ 23 ತಿಂಗಳು ವಯೋಗುಂಪಿನ ಮಕ್ಕಳ ಪೈಕಿ ಕೇವಲ ಶೇ. 11.3 ಮಕ್ಕಳಿಗೆ ತಿನ್ನಲು ಸರಿಯಾದ ಪ್ರಮಾಣದಲ್ಲಿ ಆಹಾರ ಸಿಗುತ್ತಿದೆ ಎಂದು ವರದಿ ಹೇಳುತ್ತದೆ.

ಭಾರತವು, ಚೀನಾ ಬಳಿಕ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅಮೆರಿಕದ ವಿದೇಶಿ ಕೃಷಿ ಸೇವೆ (ಎಫ್‌ಎಎಸ್) ಹೇಳುತ್ತದೆ. ಭಾರತದ ಕೃಷಿ ಸಚಿವಾಲಯದ ಪ್ರಕಾರ, ಭಾರತವು 2021-22ರ ಅವಧಿಯಲ್ಲಿ 13 ಕೋಟಿ ಟನ್ ಅಕ್ಕಿ ಮತ್ತು 11 ಕೋಟಿ ಟನ್ ಗೋಧಿ ಉತ್ಪಾದಿಸಿದೆ.

ಒಂದನೇ ತರಗತಿಯಿಂದ 8ನೇ ತರಗತಿಯಲ್ಲಿ ಕಲಿಯುತ್ತಿರುವ ಅಥವಾ 6ರಿಂದ 14 ವರ್ಷವರೆಗಿನ ಮಕ್ಕಳಿಗೆ ಎಲ್ಲ ಸರಕಾರಿ ಶಾಲೆಗಳಲ್ಲಿ ಉಚಿತ ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ. ಈಗ ಈ ಯೋಜನೆಯ ಹೆಸರನ್ನು ‘ಮಧ್ಯಾಹ್ನದ ಬಿಸಿಯೂಟ’ದಿಂದ ‘ಪಿಎಮ್-ಪೋಷಣ್’ಗೆ ಬದಲಾಯಿಸಲಾಗಿದೆ. ಪಿಎಮ್-ಪೋಷಣ್ ಯೋಜನೆಯಡಿ 2021-22ರಿಂದ 2025-26ರವರೆಗೆ ರೂ. 1.31 ಲಕ್ಷ ಕೋಟಿ ಖರ್ಚು ಮಾಡಲಾಗುತ್ತದೆ.

ಭಾರತದಲ್ಲಿ ನಿರುದ್ಯೋಗ ದರವು ಪ್ರತೀ ತಿಂಗಳು ಶೇ. 0.68ರಷ್ಟು ಹೆಚ್ಚುತ್ತಿದೆ ಎಂದು ಇತ್ತೀಚೆಗೆ ಪ್ರಕಟವಾಗಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಹೇಳಿದೆ. ನಿರುದ್ಯೋಗ ದರವು ಮೇ ತಿಂಗಳಲ್ಲಿ ಇದ್ದ ಶೇ. 7.12ರಿಂದ ಜುಲೈ ತಿಂಗಳಲ್ಲಿ ಶೇ. 7.80ಕ್ಕೆ ಹೆಚ್ಚಿದೆ ಎಂದು ಅದು ತಿಳಿಸಿದೆ. ಪ್ರಧಾನವಾಗಿ ಗ್ರಾಮೀಣ ನಿರುದ್ಯೋಗ ದರದಲ್ಲಿ ಆಗಿರುವ ಏರಿಕೆಯು ಒಟ್ಟಾರೆ ಏರಿಕೆಯ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ನಿರುದ್ಯೋಗ ದರವು ಪ್ರತೀ ತಿಂಗಳು ಶೇ. 1.41ರಷ್ಟು ಹೆಚ್ಚುತ್ತಿದ್ದು, ಜುಲೈ ತಿಂಗಳಲ್ಲಿ ಅದು ಶೇ. 8.03 ಆಗಿದೆ.

ಈ ತೀವ್ರ ಉದ್ಯೋಗ ಕುಸಿತವು ಆಘಾತಕಾರಿಯಾಗಿದೆ. ಕೃಷಿ ಕ್ಷೇತ್ರದಲ್ಲಿ, ಸುಮಾರು 80 ಲಕ್ಷ ಜನರು ಜೂನ್‌ನಲ್ಲಿ ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಆ ತಿಂಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಮಳೆಯು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು ಇದಕ್ಕೆ ಕಾರಣವಾಗಿತ್ತು. ಕೃಷಿ ಕಾರ್ಮಿಕರನ್ನು ಬಳಸಿಕೊಳ್ಳುವಲ್ಲಿ ಆಗಿರುವ ವಿಳಂಬದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚಿದೆ.

ಕೃಪೆ:countercurrents.org

Similar News