ಸಂಸದೀಯ ಮಂಡಳಿಗೆ ಯಡಿಯೂರಪ್ಪರ ನೇಮಕದಿಂದ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಲಾಭ: ಅರುಣ್ ಸಿಂಗ್ ವಿಶ್ವಾಸ

Update: 2022-08-18 06:34 GMT

ಬೆಂಗಳೂರು, ಆ. 18: 'ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ಹಾಗೂ ಕೇಂದ್ರ ಚುನಾವಣೆ ಸಮಿತಿಯ ನೂತನ ಸದಸ್ಯರಾಗಿ ನೇಮಕವಾಗಿರುವ ಹಿರಿಯ ಸಂಘಟಕ ಬಿ.ಎಸ್. ಯಡಿಯೂರಪ್ಪ (B. S. Yediyurappa)  ಅವರಿಗೆ ಶುಭಾಶಯ ಕೋರಿದ್ದೇನೆ. ಯಡಿಯೂರಪ್ಪ ಅವರು 4 ಬಾರಿ ಮುಖ್ಯಮಂತ್ರಿಯಾಗಿ, 3 ಬಾರಿ ವಿರೋಧ ಪಕ್ಷದ ನಾಯಕರಾಗಿ ಮತ್ತು 8 ಬಾರಿ ಶಾಸಕರಾಗಿ, ಕಾರ್ಯ ನಿರ್ವಹಿಸಿದವರು, ದಕ್ಷಿಣದ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆಗೆ ಇದು ಲಾಭವನ್ನು ತಂದು ಕೊಡಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ಅವರನ್ನು ಭಟಿ ಮಾಡಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಡಿಯೂರ ಅನುಭವದ ಲಾಭವೂ ಪಕ್ಷಕ್ಕೆ ಸಿಗಲಿದೆ ಎಂದು ವಿಶ್ವಾಸ ಸೂಚಿಸಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ತಿಳಿಸಿದರು.

'ಯಡಿಯೂರಪ್ಪ ಅವರು ಅತ್ಯಂತ ಅನುಭವಿಗಳಾಗಿದ್ದಾರೆ. ಅವರು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮತ್ತು ಉತ್ಸಾಹವನ್ನು ತುಂಬುವವರು. ಅವರ ಮಾರ್ಗದರ್ಶನ ಅತ್ಯಂತ ಮಹತ್ವದ್ದು. ಪಕ್ಷವು ಅವರ ಮಾರ್ಗದರ್ಶನದಲ್ಲಿ ಬಹುಮತ ಪಡೆಯಲಿದೆ' ಎಂದರು. 

'ಪಕ್ಷದ ಕಾರ್ಯಕರ್ತರು ಕೂಡ ಈ ನಿರ್ಧಾರದಿಂದ ಸಂತಸಭರಿತರಾಗಿದ್ದಾರೆ ಎಂದ ಅವರು, ಇಂದಿನ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ 2023ರ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಾಗುವುದು ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕಾಂಗ್ರೆಸ್ ಪಕ್ಷವು ಒಡೆದ ಮನೆಯಾಗಿದೆ. ಬಿಜೆಪಿ ಸಂಘಟಿತ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಬಿಜೆಪಿ 2023ರಲ್ಲಿ ಗೆಲುವು ಸಾಧಿಸಲಿದೆ' ಎಂದು ನುಡಿದರು.

ಇದನ್ನೂ ಓದಿ... ಕೊಡಗು: ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿದ BJP ಯುವ ಮೋರ್ಚಾ ಕಾರ್ಯಕರ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News