ಇ-ವಿಧಾನ್ ಅನುಷ್ಠಾನದಲ್ಲಿ ನಿರ್ಲಕ್ಷ್ಯ; ಬ್ರಿಟಿಷ್ ಆಡಳಿತದ ಪರಿಣಾಮ ವ್ಯವಸ್ಥೆಯಲ್ಲಿ ಇನ್ನೂ ಇದೆ ಎಂದ ಸ್ಪೀಕರ್ ಕಾಗೇರಿ

Update: 2022-08-18 13:44 GMT

ಬೆಂಗಳೂರು, ಆ.18: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ್ದೇವೆ. ಆದರೆ, ಬ್ರಿಟಿಷ್ ಆಡಳಿತದ ಪರಿಣಾಮ ನಮ್ಮ ಕಾರ್ಯಾಂಗದ ವ್ಯವಸ್ಥೆಯಲ್ಲಿ ಇನ್ನೂ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸೌಧದಲ್ಲಿ ತಾವು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಮೂರು ವರ್ಷಗಳಲ್ಲಿ ಮಾಡಿರುವ ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಾಂಗಕ್ಕೆ ತಾನು ಜನ ಪರವಾಗಿ, ಅಭಿವೃದ್ಧಿ ಪರವಾಗಿ, ಸರಕಾರ ಮಾಡಬಯಸುವ ಕಾರ್ಯವನ್ನು ಅನುಷ್ಠಾನ ಮಾಡಬೇಕು, ನಿಯಮಾವಳಿಗಳನ್ನು ರೂಪಿಸುವಾಗ, ಅನುಷ್ಠಾನದಲ್ಲಿ ನಮ್ಮದೆ ಜವಾಬ್ದಾರಿ ಅನ್ನೊ ಭಾವ ಕಾರ್ಯಾಂಗಕ್ಕೆ ಇರಬೇಕು ಎಂದರು.

ಇಲ್ಲದಿದ್ದರೆ, ನಾವು ‘ಇ-ವಿಧಾನ್’ ಅನುಷ್ಠಾನದ ಬಗ್ಗೆ ಕಷ್ಟ ಅನುಭವಿಸುತ್ತಿರುವುದು ಮುಂದುವರೆಯುತ್ತದೆ. 2014ರಿಂದಲೂ ಇ-ವಿಧಾನ್ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ನನ್ನನ್ನು ಒಳಗೊಂಡಂತೆ ಎಲ್ಲ ಅಧ್ಯಕ್ಷರು ಪ್ರಯತ್ನ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ. ಆದರೆ, ಅಧಿಕಾರಶಾಹಿಯಲ್ಲಿರುವ ಬ್ರಿಟಿಷ್ ಗುಲಾಮಗಿರಿಯ ಮಾನಸಿಕತೆ ಇನ್ನೂ ಬಲವಾಗಿ ಬೇರೂರಲ್ಪಟ್ಟಿದೆ ನಮ್ಮ ವ್ಯವಸ್ಥೆಯಲ್ಲಿ ಎಂದು ಅವರು ಕಿಡಿಗಾರಿದರು.

ಕಾರ್ಯಾಂಗದ ಮುಖ್ಯಸ್ಥರು ತಾನು ಅಭಿವೃದ್ಧಿ, ಜನಪರವಾದ ನಿಲುವು ತೆಗೆದುಕೊಳ್ಳುವುದಕ್ಕೆ ಸಂವಿಧಾನಬದ್ಧ, ಕಾರ್ಯಾಂಗದ ಜವಾಬ್ದಾರಿ ಇದೆ ಅನ್ನೋದನ್ನು ಮರೆತು, ಅವರು ಆಡಳಿತ ನಡೆಸುತ್ತಿರುವ ಶೈಲಿಯ ಪರಿಣಾಮ ಜನ ಈಗ ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ‘ಇ-ವಿಧಾನ್’ ಬಗ್ಗೆ ಕಾರ್ಯಾಂಗದಲ್ಲಿರುವ ನಿರ್ಲಕ್ಷ್ಯ ಭಾವ, ಉದಾಸೀನತೆ, ಅವರಿಗೆ ಹೊಂದಾಣಿಕೆ ಆಗದೆ ಇರುವಂತಹ ವಿಷಯಗಳು, ನೂರಾರು ಸಂಗತಿಗಳು ಸೇರಿಕೊಂಡಿವೆ ಎಂದು ಸ್ಪೀಕರ್ ಹೇಳಿದರು.

ಈ ಸಂಬಂಧ ನಾನು ಮೂರು ಮಂದಿ ಮುಖ್ಯ ಕಾರ್ಯದರ್ಶಿಗಳನ್ನು ಕರೆದು ಮಾತನಾಡಿಸಿದ್ದೇನೆ. ಆರ್ಥಿಕ ಇಲಾಖೆ ಕಾರ್ಯದರ್ಶಿ ಬಹಳ ವರ್ಷಗಳಿಂದ ಅವರೇ ಇದ್ದಾರೆ. ನಿರಂತರವಾಗಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಚರ್ಚೆಯಲ್ಲಿ ಯಾರೊಬ್ಬರೂ ಇಲ್ಲ ಎಂದು ಹೇಳುವುದಿಲ್ಲ. ಆಡಳಿತ ಶೈಲಿಯಲ್ಲಿ ಇಲ್ಲ ಎಂದು ಹೇಳುವಂತಿಲ್ಲ, ಆದರೆ, ಆಗೋದಿಲ್ಲ ಎಂದು ಅವರು ಕಿಡಿಗಾರಿದರು. 

ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ ಒಳಗೊಂಡಂತೆ ಎಲ್ಲ ಉನ್ನತಮಟ್ಟದ ಅಧಿಕಾರಿಗಳು ಇದ್ದಂತಹ ಸಮಿತಿಗಳು, ಸಚಿವ ಸಂಪುಟದಲ್ಲಿ ಒಪ್ಪಿಗೆ ಆಗಿರುವಂತಹ ಸಂಗತಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರೆ, ಇದು ಅಧಿಕಾರಶಾಹಿತನದ ನಾಚಿಕೆಗೇಡಿನ ಪ್ರಸಂಗ ಎಂದು ಭಾವಿಸಬೇಕಾಗುತ್ತದೆ. ಇಂತಹ ವಿಳಂಬ ನೀತಿಗೆ ಕಾರಣ ಏನು ಅನ್ನೋದನ್ನು ಅವರೆ ಅರ್ಥ ಮಾಡಿಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು.

ಅಧಿಕಾರಿಗಳಿಗೆ ಯಾವ ರೀತಿ ತೃಪ್ತಿಪಡಿಸಬೇಕು ಎಂದು 25 ವರ್ಷಗಳಿಂದ ಶಾಸಕ, ಸಚಿವ ಹಾಗೂ ಈಗ ಸಭಾಧ್ಯಕ್ಷನಾಗಿರುವ ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ಬೇಜವಾಬ್ದಾರಿ, ನಿರ್ಲಕ್ಷತನದ ಪರಮಾವಧಿ. ಬಹಳ ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಕೇರಳ ಸೇರಿದಂತೆ ದೇಶದ ಇನ್ನೂ ಹತ್ತಾರು ರಾಜ್ಯಗಳು ಇದನ್ನು ಜಾರಿಗೊಳಿಸಿವೆ. ಇಡೀ ಜಗತ್ತಿನಲ್ಲಿ ಕರ್ನಾಟಕ, ಬೆಂಗಳೂರು ಐಟಿ ಹಬ್, ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳುತ್ತದೆ. ಆದರೆ, ನಮ್ಮ ವಿಧಾನಸಭೆಯಲ್ಲಿ ಒಂದು ಇ ವಿಧಾನ್ ಜಾರಿಗೊಳಿಸಲು ನಮ್ಮಿಂದ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News