VIDEO-BBMP ಮೀಸಲಾತಿ ಪಟ್ಟಿ ವಿರೋಧಿಸಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಯತ್ನ, ನಾಯಕರು ವಶಕ್ಕೆ

Update: 2022-08-18 15:34 GMT

ಬೆಂಗಳೂರು, ಆ.18: ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಗುರುವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ನಾಯಕರಾದ ರಾಮಲಿಂಗರೆಡ್ಡಿ, ಬಿ.ಕೆ.ಹರಿಪ್ರಸಾದ್, ಕೃಷ್ಣಭೈರೇಗೌಡ, ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರು ಬಿಬಿಎಂಪಿ ವಾರ್ಡ್ ಮೀಸಲಾತಿ ವಿರುದ್ಧ ಎರಡು ಸಾವಿರಕ್ಕೂ ಅಧಿಕ ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾದರೂ, ಅದಕ್ಕೆ ಮನ್ನಣೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ನಿವಾಸ ಮುತ್ತಿಗೆಗೆ ಯತ್ನಿಸಿದರು. ಈ ವೇಳೆ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.

ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಪ್ರಕಾರವಿಲ್ಲ. ವಾರ್ಡ್‍ಗಳ ಮರು ವಿಂಗಡಣೆಯನ್ನು ಬಿಜೆಪಿ ಶಾಸಕರು ಮತ್ತು ಸಂಸದರ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಆಯುಕ್ತರೇ ಸಂಘ ಪರಿವಾರದ ಅಣತಿಯಂತೆ ಕೇಶವಕೃಪಾದಲ್ಲಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದರು.

ಚಾಮರಾಜಪೇಟೆಯ ಆರಕ್ಕೆ ಆರೂ ವಾರ್ಡ್‍ಗಳಲ್ಲಿ ಮಹಿಳಾ ಮೀಸಲಾತಿ ನಿಗದಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು 350 ರಿಂದ 400 ಜನ ಇರಬಹುದು. ಅವರಿಗೆ ಎಸ್‍ಟಿ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯನ್ನು ಜಾಲಿ ಮೊಹಲ್ಲಾಗೆ ಸೇರಿಸಿದ್ದಾರೆ. ಹೀಗೆ, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಒಂದು ಸ್ಥಾನವೂ ಗೆಲ್ಲಬಾರದು ಎಂಬ ಕಾರಣಕ್ಕೆ ಈ ರೀತಿ ಕುತಂತ್ರ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣಭೈರೇಗೌಡ, ಬಿಜೆಪಿಯೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. ಧೈರ್ಯವಾಗಿ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಜನ ಸೋಲಿಸುತ್ತಾರೆ ಎಂಬ ಆತಂಕಕ್ಕೆ ಹೆದರಿ ಮೀಸಲಾತಿ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News