‘ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ'; ಆ.19ರಿಂದ ಸಾಮೂಹಿಕ ಸಹಿ ಸಂಗ್ರಹ ಅಭಿಯಾನ: ತಾಹಿರ್ ಹುಸೇನ್

Update: 2022-08-18 16:47 GMT

ಬೆಂಗಳೂರು, ಆ.18: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ಆ.19 ರಿಂದ 21ರವರೆಗೆ ದೇಶದಾದ್ಯಂತ ‘ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ’ ಎಂದು ಒತ್ತಾಯಿಸಿ ಸಾಮೂಹಿಕ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ತಿಳಿಸಿದರು.

ಗುರುವಾರ ಶಿವಾಜಿನಗರದಲ್ಲಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ ಸಾಮೂಹಿಕ ಸಹಿಗಳನ್ನು ಸಂಗ್ರಹಿಸಲಾಗುವುದು, ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ತಕ್ಷಣದ ಮಧ್ಯಸ್ಥಿಕೆಗೆ ಒತ್ತಾಯಿಸಿ ಸಹಿಗಳ ಜೊತೆಗೆ ಎಲ್ಲ ಜಿಲ್ಲೆಗಳಿಂದ ರಾಷ್ಟ್ರಪತಿಗೆ ಜ್ಞಾಪಕ ಪತ್ರವನ್ನು ಕಳುಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಗಳು, ವಿಚಾರ ಸಂಕಿರಣಗಳು, ಮಾನವ ಹಕ್ಕುಗಳ ಇಲಾಖೆಗೆ ಜ್ಞಾಪಕ ಪತ್ರಗಳು ಈ ಅಭಿಯಾನದ ಇತರ ಕಾರ್ಯಕ್ರಮಗಳಾಗಿವೆ. ರಾಜಕೀಯ ಕೈದಿಗಳ ಬಿಡುಗಡೆಯೇ ಅಭಿಯಾನದ ಪ್ರಮುಖ ಗುರಿಯಾಗಿದೆ. ದೇಶದ ಜೈಲುಗಳಲ್ಲಿ ಲಕ್ಷಗಟ್ಟಲೆ ವಿಚಾರಣಾಧೀನ ಕೈದಿಗಳಿದ್ದಾರೆ. ಅವರಲ್ಲಿ ಸಾವಿರಾರು ಮಂದಿ ರಾಜಕೀಯ ಕೈದಿಗಳಾಗಿದ್ದಾರೆ ಎಂದು ಅವರು ತಿಳಿಸಿದರು. 

ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ಯುಎಪಿಎ, ಎನ್‍ಎಸ್‍ಎ, ದೇಶದ್ರೋಹದಂತಹ ಕಠೋರ ಕಾನೂನುಗಳ ಅಡಿಯಲ್ಲಿ ಕೇಸುಗಳು ದಾಖಲಿಸಿ ಜೈಲಿನಲ್ಲಿ ಇರಿಸಲಾಗುತ್ತದೆ ಮತ್ತು ವರ್ಷಗಟ್ಟಲೆ ಅವರು ಜೈಲಿನಲ್ಲಿಯೇ ಇದ್ದಾರೆ. ಅವರ ಜಾಮೀನು ಅರ್ಜಿಗಳನ್ನು ಮತ್ತೆ ಮತ್ತೆ ತಿರಸ್ಕರಿಸಲಾಗುತ್ತದೆ. ಉಮರ್ ಖಾಲಿದ್, ಸಿದ್ದಿಕ್ ಕಪ್ಪನ್, ತೀಸ್ತಾ ಸೆಟಲ್ವಾಡ್, ಸಂಜೀವ್ ಭಟ್, ಜಾವೀದ್ ಮುಹಮ್ಮದ್, ಖಾಲಿದ್ ಸೈಫಿ, ವರವರ ರಾವ್ ಹೀಗೆ ಮುಂದುವರಿಯುತ್ತದೆ ಎಂದು ತಾಹಿರ್ ಹುಸೇನ್ ಹೇಳಿದರು.

ಬೇಡಿಕೆಗಳು: ದೇಶಾದ್ಯಂತ ಬಂಧಿತರಾಗಿರುವ ರಾಜಕೀಯ ಕೈದಿಗಳ ಮೇಲೆ ಶ್ವೇತಪತ್ರ ಹೊರತರುವುದು. ಯಾವುದೇ ಅಪರಾಧ ಮಾಡದೆ ಜೈಲಿನಲ್ಲಿದ್ದ ಅಮಾಯಕ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದು. ರಾಜಕೀಯ ಖೈದಿಗಳಿಗೆ ಕಾನೂನು ಸೌಲಭ್ಯಗಳು ಮತ್ತು ಜಾಮೀನು, ಪೆರೋಲ್, ತ್ವರಿತ ನ್ಯಾಯಾಲಯಗಳಲ್ಲಿ ನ್ಯಾಯೋಚಿತ ತ್ವರಿತ ಜಾಡು ಸೇರಿದಂತೆ ಮಾನವೀಯ ಚಿಕಿತ್ಸೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು. 

ಜೈಲಿನಲ್ಲಿರುವ ದಿನಗಳ ಸಂಖ್ಯೆಯನ್ನು ಆಧರಿಸಿ ಕಂಬಿಗಳ ಹಿಂದೆ ಇರಿಸಲಾಗಿರುವ ಅಮಾಯಕ ರಾಜಕೀಯ ಕೈದಿಗಳಿಗೆ ಪರಿಹಾರವನ್ನು ಒದಗಿಸುವುದು. ನಿರಪರಾಧಿಗಳನ್ನು ತಪ್ಪಾಗಿ ಸಿಲುಕಿಸುವುದಕ್ಕಾಗಿ ತಪ್ಪಿತಸ್ಥ ತನಿಖಾ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು. ಯುಎಪಿಎ, ದೇಶದ್ರೋಹ ಕಾನೂನು (124ಎ), ಎನ್‍ಎಸ್‍ಎ, ಆಫ್ಸಾ, ಮೊಕಾ, ಗುಜ್‍ಕೊಕಾ ಮತ್ತು ಇತರ ಕಠಿಣ ಕಾನೂನುಗಳನ್ನು ರದ್ದುಗೊಳಿಸುವುದು. 

ವಿಚಾರಗೋಷ್ಠಿ: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆ.20ರಂದು ಬೆಳಗ್ಗೆ 11 ಗಂಟೆಗೆ ‘ರಾಜಕೀಯ ಕೈದಿಗಳ ದುಸ್ಥಿತಿ-ಮಾನವ ಹಕ್ಕು ಬಿಕ್ಕಟ್ಟು’ ವಿಷಯಕ್ಕೆ ಸಂಬಂಧಿಸಿ ವಿಚಾರಗೋಷ್ಠಿ ನಡೆಯಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ವಿ.ಗೋಪಾಲ ಗೌಡ ಮುಖ್ಯ ಭಾಷಣ ಮಾಡಲಿದ್ದಾರೆ, ಅಂಕಣಕಾರ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಸುಂದರ್, ಎಪಿಸಿಆರ್ ರಾಜ್ಯಾಧ್ಯಕ್ಷ ಪಿ.ಉಸ್ಮಾನ್ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ತಾಹಿರ್ ಹುಸೇನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗೀರ್ದಾರ್, ಎಫ್‍ಐಟಿಯು ರಾಷ್ಟ್ರೀಯ ಖಜಾಂಚಿ ಅಡ್ವೊಕೇಟ್ ಅಬ್ದುಲ್ ಸಲಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News