×
Ad

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ: ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ

Update: 2022-08-19 19:59 IST

ಉಡುಪಿ : ಉಡುಪಿ ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಆಯೋಜಿಸಲಾದ ಕೃಷ್ಣವೇಷ ಸ್ಪರ್ಧೆಯಿಂದಾಗಿ ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಗಮನ ಸೆಳೆಯಿತು.

ಮಧ್ವಾಂಗಣದಲ್ಲಿ ನಡೆದ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಯಲ್ಲಿ 140ಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದರೆ, ಭೋಜನ ಶಾಲೆ ಮಾಳಿಗೆಯಲ್ಲಿ ನಡೆದ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆಯಲ್ಲಿ 100 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅನ್ನಬ್ರಹ್ಮದಲ್ಲಿ ನಡೆದ 7ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆಯಲ್ಲಿ  ೮೦ಕ್ಕೂ ಅಧಿಕ ಮಕ್ಕಳು  ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಯಿತು.

ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕೃಷ್ಣಾಷ್ಟಮಿ ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಈ ಬಾರಿ ವೈಭವದಿಂದ ಕೃಷ್ಣಾಷ್ಟಮಿ ಆಚರಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸಹಿತ ವಿವಿಧ ರಾಜ್ಯಗಳ ಭಕ್ತರೂ ಉಡುಪಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ದೇವರ ದರ್ಶನಕ್ಕೆ ಗೀತಾಮಂದಿರದವರೆಗೆ ಸರತಿ ಸಾಲು ಕಂಡು ಬಂತು. ರಥಬೀದಿಯಲ್ಲಿಯೂ ಅಷ್ಟಮಿ ಖರೀದಿ ಭರಾಟೆ ಜೋರಾಗಿದೆ.

ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ ವಿವಿಧ ವೇಷಧಾರಿಗಳು ಕಣ್ಮನ ಸೆಳೆಯುತ್ತಿದ್ದು, ರಥಬೀದಿ ಸೇರಿದಂತೆ ನಗರದಲ್ಲೆಡೆ ಬಾಲಕೃಷ್ಣರ, ಯಕ್ಷ, ಹುಲಿವೇಷ ಸೇರಿದಂತೆ ವಿವಿಧ ಬಗೆಯ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ. ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಕ್ಷಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಗುತ್ತಿವೆ. ನಗರದೆಲ್ಲೆಡೆ ಸುಮಾರು ೩೦ಕ್ಕೂ ಹೆಚ್ಚು ಹುಲಿವೇಷಧಾರಿಗಳ ತಂಡಗಳು ಕಂಡುಬಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News