ಪಿಎಚ್‌ಡಿ ವಿದ್ಯಾರ್ಥಿಗಳು ತೊಂದರೆಯಲ್ಲಿ: ಫೆಲೋಶಿಪ್ ಹಣ ಕಡಿತಗೊಳಿಸಿದ ಬೊಮ್ಮಾಯಿ ಸರಕಾರ

Update: 2022-08-20 18:05 GMT

ಬೆಂಗಳೂರು,ಆ.20: ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಪಿಎಚ್ಡಿ ಮತ್ತು ಎಂ.ಫಿಲ್(Phd and M.phil) ವಿದ್ಯಾರ್ಥಿಗಳಿಂದ ಫೆಲೋಶಿಪ್ ಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ಕರ್ನಾಟಕ ಸರಕಾರದ ನೂತನ ಆದೇಶದಲ್ಲಿ ಈ ವಿದ್ಯಾರ್ಥಿಗಳಿಗೆ ನೀಡಲಾಗುವ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಲಾಗಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸೇರ್ಪಡೆಗೊಂಡ ಪಿಎಚ್ಡಿ ಮತ್ತು ಎಂ.ಫಿಲ್ ವಿದ್ಯಾರ್ಥಿಗಳಿಗೆ ಫೆಲೋಶಿಪ್(Fellowship) ಮೊತ್ತವನ್ನು ಶೇ.66ರಷ್ಟು ಹಾಗೂ 2020-21 ಮತ್ತು 2021-22ನೇ ಶೈಕ್ಷಣಿಕ ವರ್ಷಗಳಲ್ಲಿ ಸೇರ್ಪಡೆಗೊಂಡ ಪಿಎಚ್ಡಿ ವಿದ್ಯಾರ್ಥಿಗಳಿಗೆ ಈ ಮೊತ್ತವನ್ನು ಶೇ.33ರಷ್ಟು ಕಡಿತಗೊಳಿಸಲಾಗಿದೆ.

‌ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು(Minority welfare department) 2022, ಆ.5ರಂದು ಈ ಆದೇಶವನ್ನು ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ರಾಜ್ಯ ಸರಕಾರದ ಆದಾಯವು ಕುಸಿದಿರುವುದರಿಂದ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂದು ಇಲಾಖೆಯು ಹೇಳಿದೆ.

ಆದೇಶದಲ್ಲಿ ಏನಿದೆ?

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಗಳು ಸಹಿ ಮಾಡಿರುವ ಆದೇಶದಲ್ಲಿ ಫೆಲೋಶಿಪ್ ವಿತರಣೆಗಾಗಿರುವ ಅಸ್ತಿತ್ವದಲ್ಲಿರುವ ನಿಯಮಗಳಿಗೆ ನಾಲ್ಕು ಹೊಸ ಅಂಶಗಳನ್ನು ಸೇರಿಸಿದೆ.

2020-21ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದಿರುವ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮೊದಲ ವರ್ಷವನ್ನು ಹೊರತುಪಡಿಸಿ 25,000 ರೂ.ಗಳ ಶಿಷ್ಯವೇತನವನ್ನು ಒದಗಿಸಲು ಇಲಾಖೆಯು ಒಪ್ಪಿಕೊಂಡಿದೆ, ಅಂದರೆ ಪಿಎಚ್ಡಿ ವಿದ್ಯಾರ್ಥಿಗಳಿಗೆ ಎರಡು ಮತ್ತು ಮೂರನೇ ವರ್ಷಕ್ಕಾಗಿ ಮಾತ್ರ ಫೆಲೋಶಿಪ್ ನೀಡಲಾಗುತ್ತದೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ನೂತನ ಆದೇಶದಂತೆ ವಾಸ್ತವದಲ್ಲಿ ಮೂರು ವರ್ಷಗಳಲ್ಲಿ ಒಂಭತ್ತು ಲಕ್ಷ ರೂ.ಗಳ ಶಿಷ್ಯವೇತನಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳು ಈಗ ಕೇವಲ ಆರು ಲಕ್ಷ ರೂ.ಗಳನ್ನು ಪಡೆಯುತ್ತಾರೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಪಿಎಚ್ಡಿಗಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೂ ಈ ಆದೇಶವು ಪ್ರಮುಖ ಹಿನ್ನಡೆಯಾಗಿದೆ.

2022-23ನೇ ಸಾಲಿನ ಪಿಎಚ್ಡಿ ಮತ್ತು ಎಂ.ಫಿಲ್ ತಂಡಗಳ ವಿದ್ಯಾರ್ಥಿಗಳು ಶಿಷ್ಯವೇತನವಾಗಿ ಅನುಕ್ರಮವಾಗಿ 10,000 ರೂ. ಮತ್ತು 8,000 ರೂ.ಗಳ ಪರಿಷ್ಕೃತ ಮೊತ್ತವನ್ನು ಪಡೆಯಲಿದ್ದಾರೆ. ಅಂದರೆ ನೂತನ ಪಿಎಚ್ಡಿ ವಿದ್ಯಾರ್ಥಿಗಳಿಗಾಗಿ ಫೆಲೋಶಿಪ್ ಹಣವನ್ನು ಶೇ.66ರಷ್ಟು ಕಡಿತಗೊಳಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಫೆಲೋಶಿಪ್ ಪಡೆಯುತ್ತಿರುವ ವಿದ್ಯಾರ್ಥಿಗಳು ಯುಜಿಸಿ ನೀಡುವ ಎಸ್ಆರ್ಎಫ್ ಮತ್ತು ಜೆಆರ್ಎಫ್ನಂತಹ ಇತರ ಫೆಲೋಶಿಪ್ಗಳಿಗೆ ಅರ್ಜಿ ಸಲ್ಲಿಸುವುದನ್ನೂ ನಿಷೇಧಿಸಲಾಗಿದೆ. ಸರಕಾರದ ಈ ನಿರ್ಧಾರವು ತಮ್ಮ ಸಂಶೋಧನೆಯನ್ನು ನಡೆಸಲು,ತಮ್ಮ ಶುಲ್ಕಗಳನ್ನು ಪಾವತಿಸಲು ಮತ್ತು ಹಾಸ್ಟೆಲ್ನಲ್ಲಿ ವಸತಿಗಾಗಿ ಫೆಲೋಶಿಪ್ ಅನ್ನೇ ಅವಲಂಬಿಸಿರುವ ರಾಜ್ಯದ 250ಕ್ಕೂ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ.
  
ವಿದ್ಯಾರ್ಥಿಗಳ ಮನವಿಗೆ ಕಿವುಡಾಗಿರುವ ಅಲ್ಪಸಂಖ್ಯಾತರ ಇಲಾಖೆ

ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಪ್ರತಿ ತಿಂಗಳು 25,000 ರೂ.ಗಳ ಫೆಲೋಶಿಪ್ ಮತ್ತು ಸಂಶೋಧನೆಗಾಗಿ ಪ್ರತಿ ವರ್ಷ 10,000 ರೂ.ಗಳನ್ನು ಬೋನಸ್ ರೂಪದಲ್ಲಿ ಪಡೆಯಲು ಅರ್ಹರಾಗಿದ್ದಾರೆ. 2017ರಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಈ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ನೂತನ ಆದೇಶದಿಂದಾಗಿ ಪಿಎಚ್ಡಿ ವಿದ್ಯಾರ್ಥಿಗಳು ಸಂಕಷ್ಟದ ಸ್ಥಿತಿಯಲ್ಲಿದ್ದು, ಬೆಂಗಳೂರಿನಂತಹ ದುಬಾರಿ ನಗರದಲ್ಲಿ ವಾಸದ ಕುರಿತು ಕಳವಳಗೊಂಡಿದ್ದಾರೆ.

ಬೆಂಗಳೂರಿನ ಸಂಶೋಧನಾ ವಿದ್ಯಾರ್ಥಿಗಳ ಗುಂಪೊಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿದೆ ಮತ್ತು ತಮ್ಮ ಮನವಿಯನ್ನು ಪರಿಗಣಿಸುವಂತೆ ಹಾಗೂ ಫೆಲೋಶಿಪ್ ಹಣದ ಸೂಕ್ತ ವಿತರಣೆಯನ್ನು ಖಚಿತಪಡಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರವನ್ನು ಬರೆದಿದೆ. ಆದಾಗ್ಯೂ ನೊಂದ ವಿದ್ಯಾರ್ಥಿಗಳು ನ್ಯಾಯವನ್ನು ಕೋರಿ ಇಲಾಖೆಗೆ ಹಲವಾರು ಪತ್ರಗಳನ್ನು ಬರೆದಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ.

ವಿವಿಗಳ ವಾರ್ಷಿಕ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಕ್ಷೇತ್ರ ಸಂಶೋಧನೆಯನ್ನು ಕೈಗೊಳ್ಳಲು ಅಗತ್ಯವಿರುವ ಇತರ ಶುಲ್ಕಗಳನ್ನು ಪಾವತಿಸುವಲ್ಲಿ ತಾವು ವಿಫಲರಾಗುತ್ತೇವೆ ಎಂದು ವಿದ್ಯಾರ್ಥಿಗಳು ಈಗ ಆತಂಕದಲ್ಲಿದ್ದಾರೆ.

‘ಸಾಂಕ್ರಾಮಿಕದಿಂದಾಗಿ ಇಲಾಖೆಯು ಗಂಭೀರ ಆದಾಯ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಎಲ್ಲ ಮಾನದಂಡಗಳನ್ನು ಪರಿಗಣಿಸಿ ಫೆಲೋಶಿಪ್ ಮೊತ್ತದಲ್ಲಿ ಕಡಿತವನ್ನು ಮಾಡಲಾಗಿದೆ. ಮೂರು ವರ್ಷಗಳಲ್ಲಿ ತಮ್ಮ ಪಿಎಚ್ಡಿ ಮುಗಿಸಲು ವಿಫಲಗೊಂಡರೆ ಫೆಲೋಶಿಪ್ ಹಣವನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಮರಳಿಸುವಂತೆಯೂ ನಾವು ವಿದ್ಯಾರ್ಥಿಗಳಿಗೆ ಸೂಚಿಸಿದ್ದೇವೆ ’ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೂಲಗಳು ಬಹಿರಂಗಗೊಳಿಸಿವೆ.

ಪಿಎಚ್ಡಿಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕೆಂಬ ಈ ಆದೇಶಕ್ಕೆ ಪ್ರತಿಕ್ರಿಯಿಸಿದ ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪಿಎಚ್ಡಿ ವಿದ್ಯಾರ್ಥಿಯೋರ್ವರು,‘ಯಾವುದೇ ವಿಭಾಗದಲ್ಲಿ ಪ್ರವೇಶ ಪಡೆದಿದ್ದರೂ ಪಿಎಚ್ಡಿಯನ್ನು ಪೂರ್ಣಗೊಳಿಸಲು ಕನಿಷ್ಠ ಐದು ವರ್ಷಗಳು ಬೇಕಾಗುತ್ತವೆ. ಈಗ ಹೊಸದಾಗಿ ನಿಗದಿಗೊಳಿಸಿರುವ ಈ ಗಡುವು ನಾವು ನಮ್ಮ ಸಂಶೋಧನೆಯನ್ನು ಪೂರ್ಣಗೊಳಿಸುವುದನ್ನು ಕಷ್ಟಕರವಾಗಿಸುತ್ತದೆ ’ ಎಂದು ಅಳಲು ತೋಡಿಕೊಂಡರು.

 "10,000 ರೂ.ಗಳ ಶಿಷ್ಯವೇತನ ತುಂಬ ಸಣ್ಣ ಮೊತ್ತವಾಗಿದೆ. ನಾನು ನನ್ನ ಜೀವನ ಮತ್ತು ಸಂಶೋಧನೆಯನ್ನು ನಿಭಾಯಿಸುವುದರೊಂದಿಗೆ ಊರಿನಲ್ಲಿರುವ ನನ್ನ ಕುಟುಂಬಕ್ಕೆ ಸ್ವಲ್ಪ ಹಣವನ್ನೂ ಕಳುಹಿಸಬೇಕಿದೆ. ನಮ್ಮ ಮನೆಯಲ್ಲಿ ನಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದೇನೆ. ಎರಡು ಎಕರೆ ಕೃಷಿ ಭೂಮಿಯಿದ್ದರೂ ಎರಡು ತಿಂಗಳ ಹಿಂದೆ ಭಾರೀ ಮಳೆಯಿಂದಾಗಿ ಬೆಳೆದಿದ್ದ ಫಸಲನ್ನೂ ಕಳೆದುಕೊಂಡಿದ್ದೇವೆ. ಕಳೆದ ಎರಡು ವರ್ಷಗಳು ತುಂಬ ಕಷ್ಟದ್ದಾಗಿದ್ದವು. ಸರಕಾರವು ನಮ್ಮ ಮೊರೆಯನ್ನು ಆಲಿಸುತ್ತದೆ ಮತ್ತು ಶಿಷ್ಯವೇತನವನ್ನು ಹಿಂದಿದ್ದಂತೆ ಪರಿಷ್ಕರಿಸುತ್ತದೆ ಎಂದು ಆಶಿಸಿದ್ದೇನೆ".

-ಓರ್ವ ಪಿಎಚ್ಡಿ ವಿದ್ಯಾರ್ಥಿ

ಕೃಪೆ: Thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News