ಅಜ್ಜನನ್ನು ಕೊಲೆಗೈದ ಪ್ರಕರಣ: ಮೊಮ್ಮಗ ಸೆರೆ
Update: 2022-08-20 21:13 IST
ಬೆಂಗಳೂರು, ಆ.20: ಆಸ್ತಿ ಹಂಚಿಕೆ ವಿಚಾರವಾಗಿ ಅಜ್ಜನನ್ನು ಕೊಲೆಗೈದ ಆರೋಪ ಪ್ರಕರಣ ಸಂಬಂಧ ಮೊಮ್ಮಗ ಸೇರಿ ಇಬ್ಬರನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಕುವೆಂಪು ನಗರದ ಜಯಂತ್(20), ಹಾಸನ ಜಿಲ್ಲೆಯ ಗೊರೂರಿನ ಯಾಸೀನ್ ಬಂಧಿತ ಆರೋಪಿಗಳೆಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಯಲಹಂಕದ ಸುರಭಿ ಲೇಔಟ್ 2ನೆ ಮುಖ್ಯರಸ್ತೆಯ 6ನೆಕ್ರಾಸ್ ಮನೆಯಲ್ಲಿ ವಾಸವಾಗಿದ್ದ ಸಿ.ಪುಟ್ಟಯ್ಯ(70) ಅವರನ್ನು ಮೈಮೇಲಿನ ಚಿನ್ನಾಭರಣ ದೋಚುವಂತೆ ಬಿಂಬಿಸಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೊಮ್ಮಗ ಆರೋಪಿ ಜಯಂತ್‍ನನ್ನು ಬಂಧಿಸಿದ್ದಾರೆ. ಆಸ್ತಿ ಹಂಚಿಕೆ ಮಾಡುತ್ತಿಲ್ಲ ಎನ್ನುವ ವಿಚಾರವಾಗಿ ಈತ ಕೃತ್ಯವೆಸಗಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.