ರೋಗಿಗಳಿಗೆ ನೆರವಾಗಿ ಎಂದು ಕಲೆಕ್ಷನ್ ದಂಧೆ ನಡೆಸುತ್ತಿವೆಯೇ ದೇಣಿಗೆ ಸಂಗ್ರಹ ವೆಬ್ ಸೈಟ್ ಗಳು ?

Update: 2022-08-21 15:17 GMT

ಹೊಸದಿಲ್ಲಿ: ಕ್ರೌಡ್‌ ಫಂಡಿಂಗ್‌ (Crowd Funding) ಮೂಲಕ ನಿಧಿ ಸಂಗ್ರಹಣೆಯಲ್ಲಿ ವಂಚನೆಯಾಗುತ್ತಿದೆಯೇ ಎಂಬ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ರೋಗಿಗಳಿಗೆ ಸಹಾಯ ಮಾಡುತ್ತೇವೆಂದು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ, ನಿಧಿ ಸಂಗ್ರಹಿಸುವ ಕೆಲವು ಸಂಸ್ಥೆಗಳು ಒಮ್ಮೆ ದಾನ ಮಾಡಿದರೆ ಪದೇ ಪದೇ ಕರೆ ಮಾಡಿ ದಾನ ಮಾಡುವಂತೆ ಪೀಡಿಸುತ್ತಿದೆ ಎಂದು ಹಲವು ನೆಟ್ಟಿಗರು ಆರೋಪ ಹೊರಿಸಿದ್ದಾರೆ. ಖ್ಯಾತ ತನಿಖಾ ಪತ್ರಕರ್ತೆ ಸುಚೇತಾ ದಲಾಲ್‌ ಕೂಡಾ ಕ್ರೌಡ್‌ ಫಂಡಿಂಗ್‌ ಜಾಲದ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಹೂಡುವಂತೆ ಕರೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಡಾ. ಪ್ರಶಾಂತ್‌ ಮಿಶ್ರಾ (@drprashantmish6) ನಿಧಿ ಸಂಗ್ರಹಗಾರರು ಕೆಲವೊಂದು ಚಿಕಿತ್ಸೆಗಳಿಗೆ ಹೇಳಿರುವ ಚಿಕಿತ್ಸಾ ವೆಚ್ಚದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

“ಕಿಡ್ನಿ ಸ್ಟೋನ್(Kidney Stone) ಸಂಬಂಧಿಸಿದ ವೆಚ್ಚದ ಬಗ್ಗೆ ನನಗೆ ಏನೂ ತಿಳಿದಿಲ್ಲ. 10-15 ಲಕ್ಷದಲ್ಲಿ ಆದರೆ ಮೂತ್ರಪಿಂಡದ ಕಸಿಯನ್ನೇ ಮಾಡಲಾಗುತ್ತದೆ ಎಂದು ನಾನು ಕೇಳಿದ್ದೇನೆ. ಆದರೆ, ಇಲ್ಲಿ ಕೇವಲ ಮೂತ್ರಪಿಂಡದ ಕಲ್ಲಿನ ಚಿಕಿತ್ಸೆಗೆ 10 ಲಕ್ಷ ಬೇಡಿಕೆಯನ್ನು ಇಡಲಾಗಿದೆ, ಒಟ್ಟು 22 ಲಕ್ಷ ಸಂಗ್ರಹವಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಡಾ. ನೀಲೇಶ್‌ ಗಜ್ಜಾರ್‌ ಎಂಬವರು, “ಕಿಡ್ನಿ ಕಲ್ಲು ಚಿಕಿತ್ಸೆಗೆ ಸುಮಾರು 1-1.8 ಲಕ್ಷ ವೆಚ್ಚವಾಗಬಹುದು. ಈ ಆನ್‌ಲೈನ್ ದೇಣಿಗೆ ಸೈಟ್ ನಿಜವಾದ ಹಗರಣ. ಆನ್‌ಲೈನ್ ದೇಣಿಗೆಯನ್ನು ಮಾಡುವುದಕ್ಕಿಂತ ಬದಲಾಗಿ ಬಡ ರೋಗಿಗೆ ರಿಯಾಯಿತಿ ನೀಡುವುದು ಅಥವಾ ನಮ್ಮ ಅಗತ್ಯವಿರುವ ಬಡ ಸಂಬಂಧಿಗೆ ಕಾಯಿಲೆ ಅಥವಾ ಶಿಕ್ಷಣದಲ್ಲಿ ಸಹಾಯ ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಡಾ. ಮಿಶ್ರಾ ಟ್ವೀಟ್‌ ಅನ್ನು ಮರುಟ್ವೀಟ್‌ ಮಾಡಿರುವ ಹಿರಿಯ  ಪತ್ರಕರ್ತೆ ಸುಚೇತಾ ದಲಾಲ್‌, “ಯಾರಾದರೂ ಇದನ್ನು ಒಟ್ಟುಗೂಡಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಬೇಕು! ಈ ಬಗ್ಗೆ ತನಿಖೆ ನಡೆಸುವ  ಅಗತ್ಯ ಖಂಡಿತ ಇದೆ! ಜನರ ಒಳ್ಳೆಯತನದ ಶೋಷಣೆ!” ಎಂದು ಬರೆದಿದ್ದಾರೆ. 

ಇನ್ನೊಂದು ಟ್ವೀಟಿನಲ್ಲಿ, Calf Abscess (ಕಾಲಿನ ಸ್ನಾಯುವಿನ ಹುಣ್ಣು) ಚಿಕಿತ್ಸೆಗೆ 15 ಲಕ್ಷ ವೆಚ್ಚ ಎಂದು 22 ಲಕ್ಷ ನಿಧಿ ಸಂಗ್ರಹಿಸಲಾಗಿದೆ, ಈ ಚಿಕಿತ್ಸೆಯ ಗರಿಷ್ಠ ವೆಚ್ಚ 2-3 ಲಕ್ಷಕ್ಕಿಂತ ಹೆಚ್ಚಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಡಾ. ಮಿಶ್ರಾ ಬರೆದಿದ್ದಾರೆ.

ಪದೇ ಪದೇ ದಾನ ಮಾಡುವಂತೆ ಪೀಡನೆ

ವಿವಿಧ ಆನ್‌ಲೈನ್‌ ಸೈಟ್‌ಗಳ ಮೂಲಕ ಒಂದು ಬಾರಿ ದಾನ ಮಾಡಿದರೆ, ಅವರು ಪದೇ ಪದೇ ಕರೆ ಮಾಡಿ ಇತರೆ ರೋಗಿಗಳಿಗೆ ದೇಣಿಗೆ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಹಲವರು ಆರೋಪ ಹೊರಿಸಿದ್ದಾರೆ. ಯಾವುದೇ ನೈಜ ಸಂಸ್ಥೆಯು ದೇಣಿಗೆದಾರರ ಬಳಿ ಪದೇ ಪದೇ ದೇಣಿಗೆ ಕೇಳಿ ಹಿಂಸೆ ನೀಡಲಾರದು ಎಂದ ಹಲವರು ಕಮೆಂಟ್‌ ಮಾಡಿದ್ದಾರೆ. 

“ನಾನು ಕೆಲವು ಬಾರಿ ಕೆಟ್ಟೋ (Ketto) ಮೂಲಕ ದಾನ ಮಾಡಿದ್ದೇನೆ. ನಂತರ ಅವರಿಂದ ದೇಣಿಗೆ ಕೇಳಲು ಕರೆಗಳು ಬರಲಾರಂಭಿಸಿದವು. ಈಗ ಸಂಪೂರ್ಣವಾಗಿ ನಿಲ್ಲಿಸಿದ್ದೇನೆ” ಎಂದು ನೆಟ್ಟಿಗರೊಬ್ಬರು ಡಾ. ಮಿಶ್ರಾ ಟ್ವೀಟ್‌ ಗೆ ಪ್ರತಿಕ್ರಿಯಿಸಿದ್ದಾರೆ.

ಲೂಟಿಯಲ್ಲಿ ಆಸ್ಪತ್ರೆಗಳು ಶಾಮೀಲು?

ಇಂತಹ ದೇಣಿಗೆ ಸಂಸ್ಥೆಗಳು ಕೆಲವು ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಮಾಡಿಸುತ್ತಾರೆ ಅನ್ನುವ ಆರೋಪಗಳೂ ಕೇಳಿಬಂದಿವೆ. 

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯದ್ದೆನ್ನಲಾದ ದಾಖಲೆಯೊಂದನ್ನು Milaap ಎಂಬ ದೇಣಿಗೆ ಸಂಗ್ರಹ ಸಂಸ್ಥೆಯು ಹಂಚಿಕೊಂಡಿದ್ದು, ಅದನ್ನು ಉಲ್ಲೇಖಿಸಿ ಡಾ. ಮಿಶ್ರಾ ಅವರು, ಇಂದ್ರಪ್ರಶ್ಥ ಅಪೋಲೊದ ಶೇರು ಕೊಂಡರೆ ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ. “ಮಿಲಾಪ್ ನೀಡಿದ ದಾಖಲೆ ಪ್ರಕಾರ VSD (ventricular septal defect) ಗಾಗಿ ಅವರು (ಅಪೋಲೋ) 12 ಲಕ್ಷ ಬಿಲ್‌ ಮಾಡಿದ್ದಾರೆ. ನಾರಾಯಣ ಮತ್ತು ಕೊಕಿಲಬೆನ್‌ ನಲ್ಲಿ ಈ ಚಿಕಿತ್ಸೆ 2.5 ಲಕ್ಷ ರುಪಾಯಿಯಲ್ಲಿ ಮುಗಿಯುತ್ತದೆ, ಸತ್ಯಸಾಯಿಯಲ್ಲಿ ಉಚಿತವಾಗಿ ಮಾಡಲಾಗುತ್ತದೆ, ಒಳ್ಳೆಯ ಲಾಭವಿದೆ” ಎಂದು ಡಾ. ಮಿಶ್ರಾ ಟ್ವೀಟ್‌ ಮಾಡಿದ್ದಾರೆ. 

ಅಪೋಲೋ ಕುರಿತು ಡಾ. ಮಿಶ್ರಾ ಅವರು ಟ್ವೀಟ್‌ ಮಾಡಿದ ಬೆನ್ನಲ್ಲೇ ಮಿಲಾಪ್‌ ದಾಖಲೆಯನ್ನು ಡಿಲಿಟ್ ಮಾಡಿದ್ದು, ಹಂಚಿಕೊಂಡಿದ್ದ ದಾಖಲೆಯನ್ನು ಅಳಿಸಿ ಹಾಕಿದೆ. ಇದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಡಾ. ಮಿಶ್ರಾ ಬರೆದಿದ್ದಾರೆ. 


ಮಿಲಾಪ್‌ ಮೂಲಕ ವಂಚನೆ: ಕೇರಳದಲ್ಲಿ ಬಯಲು

ಇನ್ನು, ಇತ್ತೀಚೆಗೆ ಕೇರಳದ ತಿರುವನಂತಪುರಂ ನಲ್ಲಿ ವರದಿಯಾದ ಸುದ್ದಿಯೊಂದು ಈ ಎಲ್ಲಾ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ. 12 ನೇ ತರಗತಿಯ ವಿದ್ಯಾರ್ಥಿಯ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಗಾಗಿ ಹಣವನ್ನು ಸಂಗ್ರಹಿಸಲು ಕ್ರೌಡ್‌ಫಂಡಿಂಗ್ ವೇದಿಕೆಯಲ್ಲಿ ತನ್ನ ಮಗನ ಫೋಟೋ ಮತ್ತು ಇತರ ವಿವರಗಳನ್ನು ಬಳಸಲಾಗುತ್ತಿದೆ ಎಂದು ಕೇರಳದ ತಿರುವನಂತಪುರಂನ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.  'www.milaap.org' ಎಂಬ ಪೋರ್ಟಲ್ ನಲ್ಲಿ ತಮ್ಮ ಮಗನ ಭಾವಚಿತ್ರ ಬಳಸಿ 1.4 ಲಕ್ಷದ ನಿಧಿ ಅಗತ್ಯ ಇದೆ ಎಂದು ಬರೆಯಲಾಗಿದೆ ಎಂದು ತಂದೆ ಪೊಲೀಸರ ಗಮನಕ್ಕೆ ತಂದಿದ್ದರು. 

ಉತ್ತರ ಪ್ರದೇಶ ಮೂಲದವರು ದಂಧೆಯಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ತಿರುವನಂತಪುರದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತಂಡವು ಪ್ರೊಫೈಲ್‌ನಲ್ಲಿ ಒದಗಿಸಲಾದ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿದ್ದು, ಅದು ಆಗ್ರಾದ ಪ್ರತೀಕ್ಷಾ ಶರ್ಮಾ ಎಂಬಾಕೆಗೆ ಸೇರಿದ್ದು, ಆಕೆ ವಂಚಕರಲ್ಲಿ ಒಬ್ಬಳು ಎಂದು ಗುರುತಿಸಿದೆ. ಹೆಚ್ಚಿನ ತನಿಖೆಯು ಇತರ ಇಬ್ಬರು ಆರೋಪಿಗಳಾದ ಮುಖೇಶ್ ಚೌಧರಿ ಮತ್ತು ಕಾರ್ತಿಕೇಯನ್ ಮಲ್ಹೋತ್ರಾ ಅವರನ್ನು ತಲುಪಲು ಪೊಲೀಸರಿಗೆ ನೆರವಾಯಿತು ಎಂದು TheNewIndianExpress.com ವರದಿ ಮಾಡಿದೆ. 

“ವಿವರವಾದ ತನಿಖೆ ನಡೆಯುತ್ತಿದೆ. ನಾವು ಸಮನ್ಸ್ ಕಳುಹಿಸಿದ್ದೇವೆ ಮತ್ತು ಆರೋಪಿಗಳನ್ನು ವಿಚಾರಣೆ ಮಾಡುತ್ತೇವೆ. ವಿದ್ಯಾರ್ಥಿಯ ಛಾಯಾಚಿತ್ರವನ್ನು ಬಳಸಿಕೊಂಡು ಪ್ರಚಾರ ನಡೆಸಲು ಚೌಧರಿ ಅವರು ಮಲ್ಹೋತ್ರಾ ಅವರ PAN ಸಂಖ್ಯೆಯನ್ನು ಬಳಸಿದ್ದಾರೆ. ಮಲ್ಹೋತ್ರಾ ಮತ್ತು ಶರ್ಮಾ ಹೆಸರಿನಲ್ಲಿ ಎರಡು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಸಂಗ್ರಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News