ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆನ್‍ಲೈನ್ ಹೆಸರು ನೋಂದಣಿ ವ್ಯವಸ್ಥೆ, ತಾಲೂಕು ಆಸ್ಪತ್ರೆಗಳಲ್ಲೂ ಜಾರಿ: ಸಚಿವ ಸುಧಾಕರ್

Update: 2022-08-22 14:01 GMT
photo credit- twitter@mla_sudhakar
 

ಬೆಂಗಳೂರು, ಆ. 22: ‘ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್ ಹೆಸರು ನೋಂದಣಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ತರಲಾಗುವುದು. ಬಳಿಕ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗುವುದು' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‍ಗೆ ಭೇಟಿ ನೀಡಿದ ಅವರು, ರೋಗಿಗಳನ್ನು ಮಾತನಾಡಿಸಿ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಇದೇ ವೇಳೆ ಆಸ್ಪತ್ರೆ ಅಭಿವೃದ್ಧಿಗೆ 5ಕೋಟಿ ರೂ.ಅನುದಾನ ಒದಗಿಸುವುದು ಎಂದು ಪ್ರಕಟಿಸಿದರು.

ಬಳಿಕ ಮಾತನಾಡಿದ ಅವರು, ‘ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‍ಲೈನ್‍ನಲ್ಲಿ ಅಥವಾ ಮೊಬೈಲ್ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಜನರ ಉದ್ದದ ಸಾಲು ಕಡಿಮೆ ಮಾಡಲು ಈ ಕ್ರಮ ವಹಿಸಲಾಗುತ್ತಿದೆ. ವೈದ್ಯರ ಭೇಟಿ ಸಮಯ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‍ಗೆ ಸಂದೇಶ ಕಳುಹಿಸುವ ವ್ಯವಸ್ಥೆ ತರಲಾಗುತ್ತಿದೆ. ಆಸ್ಪತ್ರೆಗೆ ಯಾರೂ ಬಂದು ಕಾಯುವ ಅಗತ್ಯವಿಲ್ಲ. ಹಾಗೆಯೇ ರಾಜ್ಯದ ಎಲ್ಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮುನ್ನವೇ ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಹಾಗೂ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು' ಎಂದು ನುಡಿದರು. 

‘ಜಯನಗರ ಸರಕಾರಿ ಆಸ್ಪತ್ರೆ ಎನ್‍ಕ್ಯೂಎಸ್ ಗುಣಮಟ್ಟವನ್ನು ಹೊಂದುವಂತೆ ಕ್ರಮ ವಹಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಸರಕಾರಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಈಗ ಪರಿಶೀಲನೆ ನಡೆಸಿದ ಬಳಿಕವೂ ಮತ್ತೊಮ್ಮೆ ಬಂದು ಪರಿಶೀಲನೆ ನಡೆಸಿ ಗುರಿ ತಲುಪಲಾಗಿದೆಯೇ ಎಂದು ಗಮನಿಸಲಾಗುವುದು ಎಂದು ಹೇಳಿದರು.

‘51 ಹಾಸಿಗೆಗಳ ಐಸಿಯು ಇಲ್ಲಿದೆ. ಕೋವಿಡ್ ಬಳಿಕ ಇಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸಿಬ್ಬಂದಿಯನ್ನು ನೀಡಲಾಗುವುದು. ಖಾಯಂ ಸಿಬ್ಬಂದಿ ನೇಮಕಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ನೀಡಲಾಗುವುದು. 4 ಆರ್ಥೊಪೆಡಿಕ್ ತಜ್ಞರು ಈ ಆಸ್ಪತ್ರೆಯಲ್ಲಿದ್ದರೂ 40 ಪ್ರೊಸೀಜರ್ ಮಾತ್ರ ನಡೆಯುತ್ತಿದೆ. ಈ ಸಂಖ್ಯೆಯನ್ನು 100ಕ್ಕೆ ಏರಿಸಿಕೊಳ್ಳಬೇಕು. ಹಾಗೆಯೇ ಸಭೆ ನಡೆಸಿ ವಿವಿಧ ವಿಭಾಗಗಳ ನಡುವೆ ಸಮನ್ವಯತೆ ತರಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

5 ಕೋಟಿ ರೂ.ಅನುದಾನ: ‘ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ರೋಗಿಗಳನ್ನು ಮಾತನಾಡಿಸಿದ್ದು, ಒಬ್ಬರು ಗುಣಮಟ್ಟದಲ್ಲಿ ಲೋಪ ಆಗಿದೆ ಎಂದು ಹೇಳಿಲ್ಲ. 5 ವರ್ಷದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಯೊಬ್ಬರು, ಯಾವುದೇ ಹಣ ನೀಡದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಾವಣಿ ಸೇರಿದಂತೆ ಕೆಲವೆಡೆ ದುರಸ್ತಿ ಕಾರ್ಯಗಳು ನಡೆಯಬೇಕಿದೆ. ಸುಮಾರು 5 ಕೋಟಿ ರೂ.ನಷ್ಟು ಅನುದಾನ ಬೇಕಿದ್ದು, ಅದನ್ನು ನೀಡಲಾಗುವುದು' ಎಂದು ಅವರು ಪ್ರಕಟಿಸಿದರು.

‘ರೋಗಿಗಳಿಗೆ ಚಿಕಿತ್ಸೆ ವಿಚಾರದಲ್ಲಿ ಸಮಾಧಾನ ಇದೆ. ಪ್ರಸೂತಿ ವಿಭಾಗದಲ್ಲಿ ಕೆಲ ದೂರುಗಳಿದ್ದು, ಅದಕ್ಕಾಗಿ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರತಿ ವಿಭಾಗಗಳ ಮುಖ್ಯಸ್ಥರಿಗೆ ನಿಗದಿತ ಗುರಿ ನೀಡಲಾಗಿದೆ. ಜನರು ಖಾಸಗಿ ಆಸ್ಪತ್ರೆಗೆ ಹೋಗದೆ ಇಲ್ಲಿಯೇ ಬರುವಂತೆ ಕ್ರಮ ವಹಿಸಬೇಕು. ಈ ಹಿಂದೆ ಲಂಚ ಪಡೆದ ಹೊರಗುತ್ತಿಗೆ ವೈದ್ಯರೊಬ್ಬರ ವಿರುದ್ಧ ತನಿಖೆ ನಡೆಯುತ್ತಿದೆ. ಈಗ ತಕ್ಷಣ ಕೆಲಸದಿಂದ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ' ಎಂದರು. ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಯನಗರ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಈ ವೇಳೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News