×
Ad

ಮೂರು ಸಾವಿರ ಕೋಟಿ ರೂ. ಅಭಿವೃದ್ಧಿಯ ಗುರಿ : ಶಾಸಕ ರಾಜೇಶ್ ನಾಯ್ಕ್

Update: 2022-08-23 18:39 IST

ಬಂಟ್ವಾಳ: ನಾಲ್ಕು ವರ್ಷಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 1,800 ಕೋಟಿ ರೂ. ಅನುದಾನದಲ್ಲಿ 1,400 ರಸ್ತೆಗಳು ಅಭಿವೃದ್ಧಿಗೊಂಡಿದ್ದು, ಐದು ವರ್ಷ ಪೂರ್ತಿಯಾಗುವಾಗ ಕ್ಷೇತ್ರದಲ್ಲಿ ರಸ್ತೆ ಸಹಿತ ಇತರ ಅಭಿವೃದ್ಧಿ ಕಾಮಗಾರಿಗಳ ಅನುದಾನದ ಒಟ್ಟು ಮೊತ್ತ ಮೂರು ಸಾವಿರ ಕೋಟಿ ರೂ.‌ ತಲುಪಬೇಕೆಂಬ ಗುರಿಯನ್ನು ಹೊಂದಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು. 

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 102.5 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. 

ನನ್ನ ನಾಲ್ಕು ವರ್ಷಗಳಲ್ಲಿ ಕ್ಷೇತ್ರದ 1,400 ರಸ್ತೆಗಳ ಅಭಿವೃದ್ಧಿಗೆ 1,800 ಕೋಟಿ ರೂ. ಅನುದಾನ ನೀಡಲಾಗಿದೆ. ಅವುಗಳಲ್ಲಿ ಹೆಚ್ಚಿನ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಕೆಲವು ರಸ್ತೆಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿ ಇದೆ. ಇನ್ನು ಕೆಲವು ರಸ್ತೆಗಳ ಕಾಮಗಾರಿ ಆದಷ್ಟು ಬೇಗ ಆರಂಭಗೊಂಡು ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. 

ವಸತಿ ಶಾಲೆಗಳು, ಕಿಂಡಿ ಅಣೆಕಟ್ಟು, ತಡೆಗೋಡೆ, ಆಸ್ಪತ್ರೆ, ಕುಡಿಯುವ ನೀರು, ರಸ್ತೆ, ಒಳಚರಂಡಿ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ನಡೆದಿವೆ. ಕೆಲವು ಪ್ರಗತಿಯಲ್ಲಿ ಇವೆ. ಇನ್ನು ಕೆಲವು ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು. 

ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಉಂಟಾದರೂ ಅಭಿವೃದ್ಧಿಗೆ ಯಾವುದೇ ಸಮಸ್ಯೆ ಆಗಿಲ್ಲ. ಬಂಟ್ವಾಳ ಕ್ಷೇತ್ರದಲ್ಲಿ ಐತಿಹಾಸಿಕ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಭಿವೃದ್ಧಿ ಜೊತೆಯಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ಕಾರ್ಯ ನಡೆದಿದೆ. ಸಾಧನೆಯ ಹೊಗಲಿಕೆಯನ್ನೂ, ನನ್ನ ವಿರುದ್ಧ ಬರುವ ಟೀಕೆ ಟಿಪ್ಪಣಿಯನ್ನೂ ನಾನು ಸಮಾನವಾಗಿ ಸ್ವೀಕರಿಸುತ್ತೇನೆ. ಕ್ಷೇತ್ರದ ಪ್ರಗತಿಗಾಗಿ ಹಗಲಿರುವ ಶ್ರಮಪಡುತ್ತಿದ್ದೇ‌ನೆ. ಸುಳ್ಳು, ಅನಗತ್ಯ ಟೀಕೆಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತಡೆಯಾಗದು ಎಂದು ಹೇಳಿದರು. 

ಕ್ಷೇತ್ರದಲ್ಲಿ ನಡೆದ ಪ್ರತಿಯೊಂದು ಅಭಿವೃದ್ಧಿ ಕೆಲಸದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಗುಣಮಟ್ಟದಲ್ಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಕಳಪೆ ಗುಣಮಟ್ಟ ಕಂಡು ಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ತಮ್ಮ ತಮ್ಮ ಊರಿನಲ್ಲಿ ನಡೆಯುವ ಕಾಮಗಾರಿಗಳ ಗುಣ ಮಟ್ಟವನ್ನು ಸ್ಥಳೀಯರು ಪರಿಶೀಲನೆ ನಡೆಸಬೇಕು. ಯಾವುದಾದರೂ ಸಂಶಯ ಬಂದರೆ ಸಂಬಂಧಿಸಿದವರಿಗೆ ತಿಳಿಸಬೇಕು. ಜೊತೆಗೆ ಕಾಮಗಾರಿ ನಡೆಸುವವರಿಗೆ ಸಹಕಾರವನ್ನೂ ನೀಡಬೇಕು. ಹೀಗಾದರೆ ಕಾಮಗಾರಿಯ ಗುಣಮಟ್ಟ ಕಾಪಾಡಲು ಸಾಧ್ಯ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ತುಂಗಪ್ಪ ಬಂಗೇರ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಗಣೇಶ್ ಸುವರ್ಣ, ವೆಂಕಟೇಶ್ ನಾವುಡ, ಯಶವಂತ ಪೂಜಾರಿ, ರಾಮದಾಸ ಬಂಟ್ವಾಳ, ಸೋಮಪ್ಪ ಕೋಟ್ಯಾನ್, ಪ್ರಭಾಕರ ಪ್ರಭು, ರತ್ನ ಕುಮಾರ್ ಚೌಟ ಹಾಗೂ ವಿವಿಧೆಡೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಪ್ರಮುಖ ಮೊದಲಾದವರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಶಿಲಾನ್ಯಾಸ ನಡೆದ ರಸ್ತೆಗಳು 

ಶ್ರೀ ಕ್ಷೇತ್ರ ಪೊಳಲಿಯಲ್ಲಿ 40 ಲಕ್ಷ ರೂ. ವೆಚ್ಚದ ಒಳಚರಂಡಿ, 10 ಲಕ್ಷ ರೂ. ವೆಚ್ಚದ ಶ್ರೀ ರಾಮಕೃಷ್ಣ ತಪೋವನ ಸಂಪರ್ಕ ರಸ್ತೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 28 ಕೋಟಿ ರೂ.ಗಳ ವಿವಿಧ ರಸ್ತೆಗಳ ಅಭಿವೃದ್ಧಿ, ಮೂಲರಪಟ್ಣ ಸೊರ್ನಾಡ್ ರಸ್ತೆ 4.10 ಕೋಟಿ ರೂ., ಅರಳ ಗರುಡಮಹಾಕಾಳಿ ದೇವಸ್ಥಾನ ರಸ್ತೆ 1.25 ಕೋಟಿ ರೂ., ರಾಯಿ ಅಣ್ಣಳಿಕೆ ರಸ್ತೆ 2 ಕೋಟಿ ರೂ., ಮಣಿಹಳ್ಳ ಸರಪಾಡಿ ಬಜ ರಸ್ತೆ 7 ಕೋಟಿ ರೂ., ಸರಪಾಡಿ ಪೆರ್ಲ ಬಿಯಪಾದೆ ರಸ್ತೆ 3 ಕೋಟಿ ರೂ., ಕುಂಟಾಲಪಲ್ಕೆ ಉಳಿ ರಸ್ತೆ 7 ಕೋಟಿ ರೂ., ಮಾರ್ನಬೈಲ್ ಮಂಚಿ ಸಾಲೆತ್ತೂರು ರಸ್ತೆ 3 ಕೋಟಿ ರೂ., ಬೊಳ್ಳಾಯಿ ಕಂಚಿಲ ಮಂಚಿ ರಸ್ತೆ 2 ಕೋಟಿ ರೂ., ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆ 2 ಕೋಟಿ ರೂ., ಕಲ್ಲಡ್ಕ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ 3 ಕೋಟಿ ರೂ., ಕೊಡಪದವು ಮಂಗಳಪದವು ರಸ್ತೆ 1.50 ಕೋಟಿ ರೂ., ಮಾಣಿ ಶ್ರೀ ಉಳ್ಳಾಲ್ತಿ ಮಾಡ ರಸ್ತೆ 2 ಕೋಟಿ ರೂ., ಸುಧೆಕಾರು ಕಕ್ಕೆಮಜಲು ಕಾಪಿಕಾಡು ರಸ್ತೆ 4.95 ಕೋಟಿ ರೂ., ನರಿಕೊಂಬು ದಾಸಕೋಡಿ ರಸ್ತೆ 4.95 ಕೋಟಿ ರೂ., ಬೆಂಜನಪದವು ಪಿಲಿಬೊಟ್ಟು ರಸ್ತೆ 2.50 ಕೋಟಿ ರೂ., ಶ್ರೀ ಕ್ಷೇತ್ರ ನಂದಾವರ ನೂತನ ಸೇತುವೆ ಮತ್ತು ರಸ್ತೆ 9.75 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News