ಡಿಜಿಟಲ್ ಸಾಲವೆಂಬ ಮೋಹಕ ಕುಣಿಕೆ!

Update: 2022-08-24 05:17 GMT

ಇದು ಡಿಜಿಟಲ್ ಯುಗ. ಜೀವನದ ಹೆಚ್ಚಿನ ಚಟುವಟಿಕೆಗಳು ಡಿಜಿಟಲ್ ಆಗಿರುವಾಗ ಸಾಲದ ವ್ಯವಹಾರ ಇದಕ್ಕೆ ಅಪವಾದವಾಗಿರುತ್ತದೆಯೇ? ಜನರ ಹಣದ ಅವಶ್ಯಕತೆಯನ್ನು ಮನಗಂಡು ನೂರಾರು ಫೋನ್ ಆ್ಯಪ್‌ಗಳು ಸುಲಭವಾಗಿ ಸಾಲ ನೀಡಲು ಮುಂದಾಗಿವೆ. ಸುಲಭವಾಗಿ ಹಣ ಸಿಗುವಾಗ ಯಾರಾದರೂ ಬೇಡ ಎನ್ನುತ್ತಾರೆಯೇ?

ಸುಲಭವಾಗಿ ಹಣ ಸಿಗುತ್ತದೆಯೇನೋ ಹೌದು. ಸಾಲದ ಕಂತುಗಳನ್ನು ನಿಯಮಿತವಾಗಿ ಮರುಪಾವತಿಸುವವರೆಗೆ ಸಮಸ್ಯೆಯಿಲ್ಲ. ಮರುಪಾವತಿಸಲು ಅಸಾಧ್ಯವಾದರೆ ಈ ಡಿಜಿಟಲ್ ಸಾಲ ನೀಡುವ ಆ್ಯಪ್‌ಗಳ ಅಸಲಿ ಮುಖ ಒಂದೊಂದಾಗಿ ತೆರೆದುಕೊಳ್ಳುತ್ತದೆ. ಅವರ ಖಾಸಗಿ ವಿಷಯಗಳನ್ನೇ ಈ ಡಿಜಿಟಲ್ ಸಾಲ ಕಂಪೆನಿಗಳು ಮೊದಲು ಗುರಿ ಮಾಡುತ್ತವೆ. ಖಾಸಗಿ ವಿಷಯಗಳನ್ನು ಬಹಿರಂಗಪಡಿಸಿ ಗ್ರಾಹಕರು ಮುಜುಗರ ಅನುಭವಿಸುವಂತೆ ಮಾಡುತ್ತವೆ.

ಇಂತಹ ಕಿರುಕುಳ ತಾಳಲಾರದೆ ದೇಶಾದ್ಯಂತ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಿಜಿಟಲ್ ಸಾಲದಾತರ ಕಿರುಕುಳ ತಾಳಲಾರದೆ ಬೆಂಗಳೂರಿನಲ್ಲಿ 52 ವರ್ಷದ ಸಹಕಾರಿ ಬ್ಯಾಂಕೊಂದರ ನೌಕರರೊಬ್ಬರು ಕಳೆದ ತಿಂಗಳು ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಅವರ ಸುಮಾರು 40,000 ರೂಪಾಯಿ ಸಾಲ ಮರುಪಾವತಿಗೆ ಬಾಕಿಯಿತ್ತು. ಅವರಿಗೆ ಫೋನ್‌ನಲ್ಲಿ ಬೆದರಿಕೆ ಕರೆಗಳು ಬಂದವು. ಅಷ್ಟೇ ಅಲ್ಲದೆ, ಅವರ ಮುಖವನ್ನು ನೀಲಿಚಿತ್ರಗಳ ಪಾತ್ರಗಳಿಗೆ ಜೋಡಿಸಿ ಎಲ್ಲೆಡೆ ಹರಿಯಬಿಡಲಾಯಿತು.

ಜುಲೈ ತಿಂಗಳಲ್ಲೇ ಆನ್‌ಲೈನ್ ಸಾಲದಾತರ ಕಿರುಕುಳ ತಾಳಲಾರದೆ ಆಂಧ್ರಪ್ರದೇಶದ ಗುಂಟೂರಿನ 23 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಅವರ ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸುವ ಬೆದರಿಕೆಯನ್ನು ಸಾಲದಾತರು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿಯ ಸಾಲ ವಸೂಲಿ ತಂತ್ರಗಳನ್ನು ಡಿಜಿಟಲ್ ಸಾಲ ಕಂಪೆನಿಗಳು ಭಾರತದಾದ್ಯಂತ ಅನುಸರಿಸುತ್ತಿವೆ.

ಎಷ್ಟು ಸಾಲ ಆ್ಯಪ್‌ಗಳು ಯಾವುದಕ್ಕೆ ಫೋನ್‌ನಲ್ಲಿ ಪ್ರವೇಶ ಕೇಳುತ್ತವೆ?

ಫೋನ್‌ನಲ್ಲಿರುವ ಫೋನ್ ನಂಬರ್‌ಗಳು: ಶೇ. 21 

ಸ್ಥಳ (ಲೊಕೇಶನ್): ಶೇ. 30

ಕ್ಯಾಮರಾ: ಶೇ. 30

 ಫೋನ್ ಕರೆಗಳನ್ನು ಮಾಡಲು

ಅನುಮತಿ: ಶೇ. 11

ಆಡಿಯೊ ರೆಕಾರ್ಡ್ ಮಾಡಲು ಅನುಮತಿ: ಶೇ. 11

ಕರ್ನಾಟಕ ಮೊದಲ ಸ್ಥಾನದಲ್ಲಿ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ-ಸಂಖ್ಯೆಗಳ ಪ್ರಕಾರ, 2020ರಲ್ಲಿ ಸೈಬರ್ ಠಾಣೆಗಳಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 9,680 ಇಂತಹ ಪ್ರಕರಣಗಳು ದಾಖಲಾದವು. ನಂತರದ ಸ್ಥಾನಗಳಲ್ಲಿ ಉತ್ತರಪ್ರದೇಶ (4,674) ಮತ್ತು ತೆಲಂಗಾಣ (4,436)ಗಳಿದ್ದವು. ಈ ಸೈಬರ್ ಪ್ರಕರಣಗಳ ಪೈಕಿ ಹೆಚ್ಚಿನವು ಆನ್‌ಲೈನ್ ಸಾಲಕ್ಕೆ ಸಂಬಂಧಿಸಿದ್ದವು.

ಸುಲಭ ಸಾಲದಿಂದ ಸಾವಿನವರೆಗೆ

ಆ್ಯಪ್ ಆಧಾರಿತ ಡಿಜಿಟಲ್ ಸಾಲ ಈಗ ಎಲ್ಲೆಡೆ ಹೆಸರು ಮಾಡಿದೆ. ಈ ಡಿಜಿಟಲ್ ಸಾಲ ಕಂಪೆನಿಗಳು ಫೋನ್ ಆ್ಯಪ್‌ಗಳ ಮೂಲಕ ಹೆಚ್ಚಿನ ದಾಖಲೆಗಳನ್ನು ಕೇಳದೆ ಸುಲಭ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಈ ಪ್ರಕ್ರಿಯೆಯಲ್ಲಿ, ಸಾಲ ನೀಡುವ ಆ್ಯಪ್‌ಗಳು ಸಾಲ ಪಡೆಯುವವರ ಫೋನ್‌ಗಳಲ್ಲಿ ಶೇಖರವಾಗಿರುವ ದತ್ತಾಂಶಗಳಿಗೆ ಪ್ರವೇಶ ಪಡೆಯುತ್ತವೆ.

ಸಾಲ ವಿಚಾರಿಸುವ ಹಂತದಲ್ಲಿ ಈ ಕಂಪೆನಿಗಳು ಕಡಿಮೆ ಬಡ್ಡಿಯ ಆಮಿಷ ಒಡ್ಡುತ್ತವೆ. ಆದರೆ, ಒಮ್ಮೆ ಸಾಲ ಕೊಟ್ಟ ಬಳಿಕ ಬಡ್ಡಿ ದರವನ್ನು ಗಣನೀಯವಾಗಿ ಏರಿಸುತ್ತವೆ. ಸಾಲ ಮರುಪಾವತಿಯಲ್ಲಿ ವಿಳಂಬವಾದರೆ ಆಕ್ರಮಣಕಾರಿ ಸಾಲ ವಸೂಲಿ ತಂತ್ರಗಳನ್ನು ಅನುಸರಿಸಲಾಗುತ್ತದೆ. ಖಾಸಗಿ ವಿಷಯಗಳನ್ನು ಬಹಿರಂಗಪಡಿಸಿ ಸಾರ್ವಜನಿಕವಾಗಿ ಅವಮಾನಕ್ಕೆ ಗುರಿಪಡಿಸುವುದೂ ಈ ತಂತ್ರಗಾರಿಕೆಗಳಲ್ಲಿ ಸೇರಿದೆ.

ಖಾಸಗಿತನ ಮತ್ತು ಡೇಟಾ ಸುರಕ್ಷತೆ

ಡಿಜಿಟಲ್ ಸಾಲ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದರೆ ಡೇಟಾ ಸುರಕ್ಷತೆಗೆ ಅಪಾಯ ಎದುರಾಗಬಹುದು. ಯಾಕೆಂದರೆ ಈ ಆ್ಯಪ್‌ಗಳು... *ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳು ಸೇರಿದಂತೆ ಬಳಕೆದಾರರ ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಳ್ಳುತ್ತವೆ.

*ಬಳಕೆದಾರರ ಫೋನ್‌ಗಳಿಗೆ ಪ್ರವೇಶ ಪಡೆಯಲು ಅತಿ-ಅಪಾಯಕಾರಿ ಅನುಮತಿಗಳನ್ನು ಕೋರುತ್ತವೆ ಹಾಗೂ ಬಳಕೆದಾರರ ಫೋನ್‌ಗಳಲ್ಲಿರುವ ಇತರ ಎಲ್ಲಾ ಸೇವೆಗಳಿಗೆ ಪ್ರವೇಶ ಪಡೆಯುತ್ತವೆ.

*ಬಳಕೆದಾರರ ದೌರ್ಬಲ್ಯಗಳನ್ನು ಅರಿಯಲು ಅವರು ಮಾಡುವ ಖರ್ಚು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತವೆ.

*ಬಳಕೆದಾರರಿಂದ ಸಂಗ್ರಹಿಸಿದ ಅತ್ಯಂತ ಖಾಸಗಿ ಮಾಹಿತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ. ಈ ಬಗ್ಗೆ ಹಲವಾರು ಬಳಕೆದಾರರು ದೂರು ಸಲ್ಲಿಸಿದ್ದಾರೆ.

*ಮರುಪಾವತಿಯಲ್ಲಿ ವಿಳಂಬವಾದರೆ, ಸಾಲ ಪಡೆದವರ ಫೋನ್‌ಗಳಿಂದ ಪಡೆದ ಫೋನ್ ಸಂಖ್ಯೆಗಳು, ಚಿತ್ರಗಳು, ವೀಡಿಯೊಗಳನ್ನು ಬಳಸಿಕೊಂಡು ಸಾಲ ಪಡೆದವರು ಮತ್ತು ಅವರ ಫೋನ್‌ಗಳಲ್ಲಿ ಶೇಖರವಾಗಿರುವ ಫೋನ್ ಸಂಖ್ಯೆಗಳ ಒಡೆಯರಿಗೆ ಕಿರುಕುಳ ನೀಡುತ್ತವೆ.

ಪೊಲೀಸ್ ಮಧ್ಯಪ್ರವೇಶವೂ ಕಷ್ಟ

ಡಿಜಿಟಲ್ ಸಾಲಕ್ಕೆ ಸಂಬಂಧಿಸಿದ ಪರಸ್ಪರ ಸಂಬಂಧವಿಲ್ಲದ ಪ್ರಕರಣಗಳು ದೇಶಾದ್ಯಂತ ವ್ಯಾಪಕವಾಗಿ ದಾಖಲಾಗುತ್ತಿವೆ. ಅದೂ ಅಲ್ಲದೆ, ಇಂತಹ ಅನಿಯಂತ್ರಿತ ಸಾಲದಾತ ಸಂಸ್ಥೆಗಳ ಮಾಲಕತ್ವದ ಬಗ್ಗೆ ಪಾರದರ್ಶಕತೆಯೂ ಇಲ್ಲ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಪೊಲೀಸ್ ಮಧ್ಯಪ್ರವೇಶವು ಕಷ್ಟವಾಗುತ್ತಿದೆ.

ಇಂತಹ ಡಿಜಿಟಲ್ ಕಂಪೆನಿಗಳ ನಿರ್ದೇಶಕರು ಸ್ಥಳೀಯವಾಗಿ ಲಭ್ಯರಿಲ್ಲ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಅವರು ಚೀನಿ ಪ್ರಾಯೋಜಕರ ಸ್ಥಳೀಯ ಮುಖ ಮಾತ್ರ ಆಗಿರುತ್ತಾರೆ. ಈ ಕಂಪೆನಿಗಳ ನೆಲೆಗಳು ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿವೆ. ಹಾಗಾಗಿ, ಅವುಗಳ ಮೇಲೆ ನಿಗಾ ಇಡುವ ಅವಕಾಶಗಳು ಕಡಿಮೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಇವುಗಳು ನಿಮಗೆ ತಿಳಿದಿರಲಿ

ಡಿಜಿಟಲ್ ಸಾಲ ನೀಡುವ ಮೊಬೈಲ್ ಆ್ಯಪ್‌ಗಳ ಗ್ರಾಹಕರ ಸಂಖ್ಯೆಯು ಜಾಗತಿಕ ಮಟ್ಟದಲ್ಲಿ 2022ರ ಮೊದಲಾರ್ಧದಲ್ಲಿ ಶೇ. 46 ಏರಿಕೆಯಾಗಿದೆ.

2017 ಮತ್ತು 2020ರ ನಡುವಿನ ಅವಧಿಯಲ್ಲಿ ಡಿಜಿಟಲ್ ಸಾಲ ನೀಡಿಕೆಯು 12 ಪಟ್ಟು ಏರಿಕೆಯಾಗಿದೆ.

ಭಾರತದಲ್ಲಿರುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯು 2014ರಲ್ಲಿದ್ದ 10 ಕೋಟಿಯಿಂದ 2021ರಲ್ಲಿ 70 ಕೋಟಿಗೆ ಏರಿದೆ.

2020ರಲ್ಲಿ ಫಿನ್‌ಟೆಕ್ (ಆನ್‌ಲೈನ್ ಮೂಲಕ ವ್ಯವಹಾರ ಮಾಡುವ ಹಣಕಾಸು ಕಂಪೆನಿಗಳು) ಕಂಪೆನಿಗಳ ಒಟ್ಟು ಬಂಡವಾಳದ ಶೇ. 44 ಭಾಗವನ್ನು ಡಿಜಿಟಲ್ ಸಾಲ ನೀಡುವ ಕಂಪೆನಿಗಳು ಬಳಸಿಕೊಂಡಿವೆ.

ಭಾರತೀಯ ಫಿನ್‌ಟೆಕ್ ಮಾರುಕಟ್ಟೆಯ ವಾರ್ಷಿಕ ಬೆಳವಣಿಗೆ ದರ ಸುಮಾರು ಶೇ. 25 ಎಂಬುದಾಗಿ ಅಂದಾಜಿಸಲಾಗಿದೆ.

ಆರ್‌ಬಿಐ ಮಧ್ಯಪ್ರವೇಶ

ಡಿಜಿಟಲ್ ಲೇವಾದೇವಿಯ ಅನುಚಿತ ವಿಧಾನಗಳಿಗೆ ಸಂಬಂಧಿಸಿದ ವಿವಿಧ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ತಿಂಗಳ ಆದಿ ಭಾಗದಲ್ಲಿ ಹಲವಾರು ನಿಯಮಾವಳಿಗಳನ್ನು ಘೋಷಿಸಿತು.

ಆದರೆ, ಅದೇ ವೇಳೆ, ಅನಾಮಧೇಯರಿಂದ ಪ್ರಾಯೋಜಿಸಲ್ಪಡುವ ಡಿಜಿಟಲ್ ಸಾಲ ನೀಡುವ ಆ್ಯಪ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಈ ಆ್ಯಪ್‌ಗಳು ನೀಡುವ ಸುಲಭ ಸಾಲಗಳ ಗಾತ್ರವೂ ಅಗಾಧ ಪ್ರಮಾಣದಲ್ಲಿ ಏರಿದೆ. ಹಾಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ನಿಯಮಗಳ ಅನುಷ್ಠಾನವು ಸುದೀರ್ಘ ಪ್ರಕ್ರಿಯೆಯಾಗಬಹುದು.

ಸಾಲ ಆ್ಯಪ್‌ಗಳು ಕೇಳುವ ಫೋನ್ ಅನುಮತಿ

ಡಿಜಿಟಲ್ ಸಾಲ ಕುರಿತ ಆರ್‌ಬಿಐ ಕ್ರಿಯಾ ಗುಂಪೊಂದು ತನ್ನ ವರದಿಯನ್ನು 2021 ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿತು. ಡಿಜಿಟಲ್ ಸಾಲ ನೀಡುವ ಆ್ಯಪ್‌ಗಳ ಪೈಕಿ ಶೇ. 30 ಭಾಗವು ಗ್ರಾಹಕರಿರುವ ಸ್ಥಳವನ್ನು ತಿಳಿಯಲು ಮತ್ತು ಕ್ಯಾಮರಾಕ್ಕೆ ಪ್ರವೇಶ ಪಡೆಯಲು ಅನುಮತಿ ಕೋರಿವೆ ಹಾಗೂ ಶೇ. 21 ಆ್ಯಪ್‌ಗಳು ಗ್ರಾಹಕರ ಫೋನ್‌ನಲ್ಲಿ ದಾಖಲಾಗಿರುವ ಫೋನ್ ಸಂಖ್ಯೆಗಳಿಗೆ ಪ್ರವೇಶವನ್ನು ಕೋರಿವೆ ಎಂದು ವರದಿ ಹೇಳಿದೆ.

ಅದೂ ಅಲ್ಲದೆ, ಆ ಸಮಯದಲ್ಲಿ ಆ್ಯಂಡ್ರಾಯ್ಡಾ ಬಳಕೆದಾರರಿಗೆ ಲಭ್ಯವಿದ್ದ 1,100 ಡಿಜಿಟಲ್ ಸಾಲ ನೀಡುವ ಆ್ಯಪ್‌ಗಳ ಪೈಕಿ ಸುಮಾರು 600 ‘ಅಕ್ರಮ’ವಾಗಿದ್ದವು ಹಾಗೂ ಬಳಕೆದಾರರ ಫೋನ್‌ಗಳಲ್ಲಿ ಶೇಖರವಾಗಿರುವ ಫೋನ್ ಸಂಖ್ಯೆಗಳನ್ನು ದುರುಪಯೋಗಪಡಿಸಿಕೊಳ್ಳುವ ಹಾಗೂ ಅವುಗಳನ್ನು ಹ್ಯಾಕ್ ಮಾಡುವ ಅಪಾಯಗಳನ್ನು ಒಡ್ಡಿದ್ದವು ಎಂದು ವರದಿ ಹೇಳಿದೆ.

ಕೃಪೆ: ಡೆಕ್ಕನ್ ಹೆರಾಲ್ಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News