×
Ad

ಸಿಎಂ, ಸಚಿವರು, ಶಾಸಕರಿಂದ ಶೇ.40 ಕಮಿಷನ್ ಗೆ ಬೇಡಿಕೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ

Update: 2022-08-24 16:58 IST

ಬೆಂಗಳೂರು, ಆ. 24: ‘ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಈ ಸರಕಾರದಲ್ಲಿ ಎಲ್ಲರೂ ಭ್ರಷ್ಟರಾಗಿದ್ದು ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ರೂ.ಬಾಕಿ ಬರಬೇಕಿದೆ. ಇನ್ನು 15 ದಿನದಲ್ಲಿ ಗುತ್ತಿಗೆದಾರರಿಂದ ಕಮಿಷನ್ ಬೇಡಿಕೆ ಕುರಿತು ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗುವುದು' ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದ ಕುಮಾರ ಪಾರ್ಕ್‍ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗ ಭೇಟಿ ಬಳಿಕ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಶೇ.40ರಷ್ಟು ಕಮಿಷನ್ ವಿಚಾರವಾಗಿ ಸಿದ್ದರಾಮಯ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ. ಕಮಿಷನ್ ಸಂಗ್ರಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಈ ಕುರಿತು ನಮ್ಮ ಬಳಿ ದಾಖಲೆಗಳಿವೆ' ಎಂದು ಹೇಳಿದರು.

ಇದನ್ನೂ ಓದಿ... ಮಂಗಳೂರು ಸಹಿತ10 ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

‘ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ನ್ಯಾಯಾಂಗ ತನಿಖೆ ಮಾಡಿದರೆ, ಸೂಕ್ತ ದಾಖಲೆಗಳನ್ನು ನಾವು ಒದಗಿಸುತ್ತೇನೆ. ಇಲ್ಲವಾದರೆ ನಮ್ಮ ಆರೋಪ ಸುಳ್ಳೆಂದು ಸಾಬೀತು ಮಾಡಿದರೆ ಏನು ಬೇಕಾದರೂ ಶಿಕ್ಷೆ ಕೊಡಿ, ಅನುಭವಿಸಲು ನಾವು ಸಿದ್ಧ. ನಮ್ಮ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು ಸಿಎಂ ಮಾತನ್ನು ಕೇಳದ ಸ್ಥಿತಿಯಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು. ಆದರೆ, ಅಧಿಕಾರಿಗಳು ಸಿಎಂ ಮಾತೇ ಕೇಳುತ್ತಿಲ್ಲ' ಎಂದು ದೂರಿದರು.

‘ಎಲ್ಲ ಶಾಸಕರು ಶೇ.10ರಿಂದ 15ರಷ್ಟು ಕಮಿಷನ್ ಕೇಳುತ್ತಾರೆ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಒಬ್ಬರಿಗೆ ಅಂತ ರ್ಯಾಂಕಿಂಗ್ ಕೊಡಲು ಆಗುವುದಿಲ್ಲ. ಭ್ರಷ್ಟಾಚಾರದಲ್ಲಿ ಮಂತ್ರಿ, ಶಾಸಕರು ನಂಬರ್ 1 ಸ್ಥಾನದಲ್ಲಿದ್ದಾರೆ. ಇದಕ್ಕೆ ಸಿಎಂ ಅವರು ಹೊರತಾಗಿಲ್ಲ. ಕೆಲವು ಕಡೆಶೇ.100ರಷ್ಟು ಭ್ರಷ್ಟಾಚಾರವಿದೆ. ಒಂದು ನಯಾಪೈಸೆ ಕೆಲಸ ಮಾಡದೇ ಶೇ.100ರಷ್ಟು ಹಣವನ್ನು ತಿಂದಿದ್ದಾರೆ' ಎಂದು ಅವರು ದೂರಿದರು.

‘ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಲೆಕ್ಷನ್ ಮಾಡಿಕೊಡಲು ಹೇಳಿದ್ದಾರೆ. ನಮಗೆ ಈಗ ಬಂದಿರುವ ವರದಿ ಪ್ರಕಾರ ಕಮಿಷನ್ ಕೇಳಿದ್ದಾರೆ. ಪರೋಕ್ಷವಾಗಿ ಸಚಿವರಿಂದ ಬೆದರಿಕೆ ಇದೆ. ಉಸ್ತುವಾರಿ ಸಚಿವರೇ ಹಣ ಸಂಗ್ರಹ ಮಾಡುತ್ತಿದ್ದಾರೆ. 3 ವರ್ಷದಿಂದ ಬಾಕಿ ಪಾವತಿಯಾಗಿಲ್ಲ. ರಾಜರಾಜೇಶ್ವರಿ ನಗರದಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಕೆಲಸ ಮಾಡಿಸಿದ್ದಾರೆ. ಆದರೆ, ಏನು ಅಭಿವೃದ್ಧಿ ಆಗಿದೆ' ಎಂದು ಕೆಂಪಣ್ಣ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News