ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಈ ತಾರತಮ್ಯ ನ್ಯಾಯವೇ?

Update: 2022-08-25 07:27 GMT

ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸಂಪೂರ್ಣ ನಿರ್ಲಕ್ಷಿಸಿ, ಆ ಇಲಾಖೆಯ ಯಾವ ಯೋಜನೆಯೂ ಸಮುದಾಯದ ಜನರಿಗೆ ತಲುಪದ ಹಾಗೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿರುವುದು ಸಂವಿಧಾನದ ಮೇಲೆ ಪ್ರಮಾಣ ಮಾಡಿ ನಡೆಯುವ ಸರಕಾರದ ಕೆಲಸವಲ್ಲ. ವಿಶೇಷವಾಗಿ ಮುಖ್ಯಮಂತ್ರಿಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿರುವಾಗ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲವೆಂದರೆ, ಇನ್ನುಳಿದ ಇಲಾಖೆಗಳ ಪಾಡೇನು ಎನ್ನುವ ಪ್ರಶ್ನೆ ಮೂಡದೇ ಇರಲು ಸಾಧ್ಯವಿಲ್ಲ. ಕನಿಷ್ಠ ಕೇಂದ್ರ ಸರಕಾರದ ಪ್ರಾಯೋಜಕತ್ವದಲ್ಲಿರುವ ಯೋಜನೆಗಳನ್ನಾದರೂ ಸರಿಯಾಗಿ ಅನುಷ್ಠಾನ ಮಾಡದೆ ಇರುವುದು ಅಕ್ಷಮ್ಯ ಅಪರಾಧ.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಈ ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ನ್ಯಾ.ರಾಜೇಂದ್ರ ಸಾಚಾರ ವರದಿಯ ಶಿಫಾರಸಿನ ಮೇರೆಗೆ ‘ಪ್ರಧಾನ ಮಂತ್ರಿ ಜನವಿಕಾಸ ಯೋಜನೆ’ (ಎಂ.ಎಸ್.ಡಿ.ಪಿ.)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಸದರಿ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕುಡಿಯುವ ನೀರು ಇತ್ಯಾದಿ ಸೌಲಭ್ಯ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಗೆ ಯಾವುದೇ ಕ್ರಿಯಾ ಯೋಜನೆ ತಯಾರಿಸಿದರೂ ಕೇಂದ್ರ ಸರಕಾರ ಶೇ. 70ರಷ್ಟು ಅನುದಾನ ಹಾಗೂ ರಾಜ್ಯ ಸರಕಾರ ಶೇ. 30ರಷ್ಟು ಅನುದಾನ ನೀಡುವುದರ ಮೂಲಕ ಅನುಷ್ಠಾನ ಮಾಡಲಾಗುತ್ತದೆ. ಈ ಯೋಜನೆಗೆ ಕ್ರಿಯಾ ಯೋಜನೆಯನ್ನು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್, ತಾಲೂಕು ಅಥವಾ ಇಡೀ ಜಿಲ್ಲೆ ಒಂದು ಘಟಕವಾಗಿ ಆಯ್ಕೆ ಮಾಡಲಾಗಿದೆ, ಈ ಪ್ರದೇಶಗಳಲ್ಲಿ ಅವಶ್ಯಕತೆಯಿರುವ ಸೌಲಭ್ಯವನ್ನು ಒದಗಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಪ್ರಧಾನ ಮಂತ್ರಿಗಳ ಅಲ್ಪಸಂಖ್ಯಾತರ ಕಾರ್ಯಕ್ರಮ ಅನುಷ್ಠಾನ ಸಮಿತಿಯಲ್ಲಿ ಅನುಮೋದನೆ ಪಡೆದು, ಆನಂತರ ರಾಜ್ಯ ಮಟ್ಟದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇರುವ ಸಮಿತಿಯಲ್ಲಿ ಅನುಮೋದನೆ ಪಡೆದು ಕೇಂದ್ರ ಸರಕಾರಕ್ಕೆ ಕಳುಹಿಸಬೇಕಿದೆ. ಕೇಂದ್ರ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಸದರಿ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅನುಮೋದನೆ ನೀಡಿದ ನಂತರ ತನ್ನ ಪಾಲಿನ ಅನುದಾನವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡುತ್ತದೆ, ಅದನ್ನು ರಾಜ್ಯ ಸರಕಾರ ಅನುಷ್ಠಾನ ಮಾಡಬೇಕಿದೆ.

 ಆದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕಚೇರಿಯಲ್ಲಿ ಅಸಾಂವಿಧಾನಿಕವಾಗಿ ಒಬ್ಬ ವ್ಯಕ್ತಿಯನ್ನು ಸಂಯೋಜಕರೆಂದು ನೇಮಕ ಮಾಡಿಕೊಂಡು ಇಡೀ ಇಲಾಖೆಯನ್ನೇ ಮೂರನೇ ವ್ಯಕ್ತಿಯ ಹಿಡಿತಕ್ಕೆ ನೀಡಲಾಗಿದೆ. ಆ ವ್ಯಕ್ತಿಯನ್ನು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜನವಿಕಾಸ ಯೋಜನೆ (ಎಂ.ಎಸ್.ಡಿ.ಪಿ.)ಯ ರಾಜ್ಯಮಟ್ಟದ ಸಂಯೋಜಕರೆಂದು (ಆ ಯೋಜನೆಯಲ್ಲಿ ರಾಜ್ಯಮಟ್ಟದ ಸಂಯೋಜಕರೆಂದು ನೇಮಿಸಲು ಅವಕಾಶವಿಲ್ಲ) ಹೇಳಲಾಗಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಎಂ.ಎಸ್.ಡಿ.ಪಿ. ಯೋಜನೆಯ ಕೆಲಸ ಮಾಡಿರುವ ಉದಾಹರಣೆ ಇಲ್ಲ, ಸರಕಾರದಲ್ಲಿ ಪ್ರಬಲ ಅಧಿಕಾರಿಯೆಂದೇ ಭಾವಿಸಲಾದ ಇಲಾಖೆಯ ಕಾರ್ಯದರ್ಶಿಯ ಕಚೇರಿಯಲ್ಲಿ ಈ ರೀತಿ ಮೂರನೇ ವ್ಯಕ್ತಿ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯಕರವಾಗಿದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಜನವಿಕಾಸ ಯೋಜನೆ (ಎಂ.ಎಸ್.ಡಿ.ಪಿ.)ಯಡಿಯಲ್ಲಿ ಸುಮಾರು 25 ವಸತಿ ನಿಲಯಗಳು/ವಸತಿ ಶಾಲೆಗಳು/ವಸತಿ ಪಿಯು ಕಾಲೇಜುಗಳ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡರೂ ಇಲಾಖೆ ಇಂತಹ ಕಟ್ಟಡಗಳನ್ನು ಉಪಯೋಗಿಸಲು ಅನುಮತಿ ನೀಡದೆ ಇರುವುದು ಈ ಮೂರನೇ ವ್ಯಕ್ತಿಯ ದಕ್ಷತೆಯ ಬಗ್ಗೆ ಅನುಮಾನ ಮೂಡುತ್ತಿದೆ. ಸರಕಾರದ ನೂರಾರು ಕೋಟಿ ರೂಪಾಯಿ ಅನುದಾನ ಬಳಸಿ ಕಟ್ಟಡಗಳನ್ನು ಕಟ್ಟಿ, ಅದನ್ನು ಬಳಕೆ ಮಾಡಲು ಅನುಮತಿ ನೀಡದೇ ಇರುವುದು ಅತ್ಯಂತ ಆಶ್ಚರ್ಯಕರವಾಗಿದೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ನಡೆಸಲಾಗುತ್ತಿರುವ ವಸತಿ ನಿಲಯಗಳು/ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವುದು ಒಂದು ಕಡೆಯಾದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣ ಕಟ್ಟಡ ಕಟ್ಟಿದ್ದರೂ ಪ್ರಾರಂಭಿಸಲು ಅನುಮತಿ ನೀಡದೆ ಇರುವುದು ಸರಕಾರದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ.

ಅದಲ್ಲದೆ ಇಲಾಖೆ ಹಲವಾರು ವರ್ಷಗಳಿಂದ ಅನುಷ್ಠಾನ ಮಾಡಿಕೊಂಡು ಬರುತ್ತಿರುವ ಹತ್ತಾರು ಯೋಜನೆಗಳನ್ನು ಅರ್ಧಕ್ಕೆ ಕೈಬಿಟ್ಟಿರುವುದು ಅತ್ಯಂತ ಅನ್ಯಾಯ ಮತ್ತು ಅಭಿವೃದ್ಧಿಗೆ, ಕಲ್ಯಾಣಕ್ಕೆ, ಶ್ರೇಯೋಭಿವೃದ್ಧಿಗೆ, ಸಮಾನತೆಗೆ ವಿರುದ್ಧವಾದದ್ದು, ಪ್ರಧಾನ ಮಂತ್ರಿ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್’ ಎಂದು ಹೇಳುತ್ತಿದ್ದರೂ ಕರ್ನಾಟಕದಲ್ಲಿ ಮಾತ್ರ ವ್ಯತಿರಿಕ್ತವಾಗಿದೆ. ಕೆಲವು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

1. 2021-22ನೇ ಸಾಲಿನಲ್ಲಿ ಸರಕಾರದ ಆದೇಶ ಸಂಖ್ಯೆ: MWD 61 MDS 2021, ಬೆಂಗಳೂರು, ದಿನಾಂಕ: 29-09-2021 ಆದೇಶದಂತೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಶೇ. 50ರಷ್ಟು ಕಡಿತಗೊಳಿಸಿ ಆದೇಶಿಸಲಾಗಿದೆ, ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಶೈಕ್ಷಣಿಕ ಸಾಲ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿ ಮುಗಿದ ನಂತರ ಇಲಾಖೆಗೆ ಮರುಪಾವತಿಸಬೇಕಿತ್ತು. ಇದರಡಿಯಲ್ಲಿ ಲಕ್ಷಾಂತರ ಮಕ್ಕಳು ತಮ್ಮ ಉನ್ನತ ಶಿಕ್ಷಣದ ಕನಸು ಈಡೇರಿಸಲು ಅನುಕೂಲವಾಗುತ್ತಿತ್ತು, ಅದನ್ನು ಮೊಟಕುಗೊಳಿಸುವುದರಿಂದ ಸಮುದಾಯದ ಮಕ್ಕಳ ಭವಿಷ್ಯಕ್ಕೆ ಅಡಚಣೆಯಾಗಿದೆ.

2. ಹಾಗೆಯೇ ಸರಕಾರದ ಆದೇಶ ಸಂಖ್ಯೆ: MWD 364 MDS 2021, ಬೆಂಗಳೂರು, ದಿನಾಂಕ:01-10-2021ರ ಆದೇಶದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿರುವ ವಿದ್ಯಾರ್ಥಿವೇತನವನ್ನು ಕಡಿತಗೊಳಿಸಿ ಪಿಯುಸಿ ವಿದ್ಯಾರ್ಥಿಗಳಿಗೆ ರೂ. 9,000, ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂ.ಫಿಲ್., ಪಿಎಚ್.ಡಿ. ಪಡೆಯುವ ವಿದ್ಯಾರ್ಥಿಗಳಿಗೆ ಕೇವಲ ರೂ. 3,000 ವಿದ್ಯಾರ್ಥಿವೇತನ ನಿಗದಿಗೊಳಿಸಿ ಆದೇಶಿಸಲಾಗಿದೆ. ಇದರಿಂದ ಸಮುದಾಯದ ವಿದ್ಯಾರ್ಥಿಗಳು ಆರ್ಥಿಕ ತೊಂದರೆಯನ್ನು ಅನುಭವಿಸುವುದಲ್ಲದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಹುದು. ಯಾವುದೇ ಸರಕಾರ ವಿದ್ಯಾರ್ಥಿ ವೇತನವನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಮೊತ್ತವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಆದರೆ ಇಲ್ಲಿ ಸರಕಾರ ಅದನ್ನು ಕಡಿತಗೊಳಿಸಿರುವುದು ಯಾವ ಪುರುಷಾರ್ಥಕ್ಕೆ?

3. ಕರ್ನಾಟಕ ರಾಜ್ಯದಲ್ಲಿ ಎಂ.ಫಿಲ್., ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸರಕಾರದ ಆದೇಶ ಸಂ: MWD 462 MDS 2016, ಬೆಂಗಳೂರು ದಿನಾಂಕ: 24.01.2017 ಆದೇಶದಂತೆ ಪಿ.ಎಚ್.ಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 25,000 ಫೆಲೋಶಿಪ್ ನೀಡುತ್ತಿರುವುದನ್ನು, ಈಗ ಸರಕಾರದ ಆದೇಶ ಸಂ: MWD 198 MDS 2022, ಬೆಂಗಳೂರು ದಿನಾಂಕ: 28-06-2022ರಂತೆ ಅಂತಹ ವಿದ್ಯಾರ್ಥಿಗಳಿಗೆ ಕೇವಲ ರೂ. 10,000 ನೀಡುವಂತೆ ಆದೇಶಿಸಲಾಗಿದ್ದು, ಈ ಯೋಜನೆಯಲ್ಲಿ ಇಡೀ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 200ರ ಆಸುಪಾಸು ಮಾತ್ರ, ಇದರಿಂದ ಸರಕಾರಕ್ಕೆ ಭಾರೀ ಹೊರೆಯೇನು ಆಗದು.

4. ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಸರಕಾರದ ಆದೇಶ ಸಂ. MWD ZTBMDS 2022, ಬೆಂಗಳೂರು ದಿನಾಂಕ: 07-07-2022 ಮಾರ್ಪಡಿಸಿ, ವಿದೇಶದಲ್ಲಿ ಜಾಗತಿಕವಾಗಿ ಟಾಪ್ 200 ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಲ್ಲಿ ಮಾತ್ರ ವಿದ್ಯಾರ್ಥಿ ವೇತನ ನೀಡುವುದಾಗಿ ಆದೇಶಿಸಿರುವುದು ಸರಿಯಾದ ಕ್ರಮವಲ್ಲವೆಂದು ಭಾವಿಸಬಹುದಾಗಿದೆ, ಯಾಕೆಂದರೆ ಯಾವುದೇ ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ನಮ್ಮ ದೇಶದ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಸಾಕು ಎನ್ನುವುದು ಸರಕಾರದ ಇತರ ಇಲಾಖೆಗಳ ವಾಖ್ಯಾನ, ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಮಾತ್ರ ವ್ಯತಿರಿಕ್ತ.

5. ಹಲವು ವರ್ಷಗಳಿಂದ ಜಾರಿಗೊಳಿಸುತ್ತ ಬರಲಾದ ಸ್ವಂತ ನಿವೇಶನ ಹೊಂದಿರುವ ಖಾಸಗಿ ಸಂಘ ಸಂಸ್ಥೆಗಳು ಶಾದಿ ಮಹಲ್/ಸಮುದಾಯ ಭವನ ನಿರ್ಮಾಣಕ್ಕೆ ಸರಕಾರ ನಿರ್ಮಾಣ ವೆಚ್ಚದ ಶೇ. 50 ಅಥವಾ ನಗರ ಪ್ರದೇಶದಲ್ಲಿ 1.0 ಕೋ.ರೂ. ಹಾಗೂ ತಾಲೂಕು/ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರೂ. ಅನುದಾನ ನೀಡುತ್ತ ಬರಲಾಗಿತ್ತು. ಈಗ ಸರಕಾರ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಈ ಯೋಜನೆಯಲ್ಲಿ ಹಿಂದೆ ಮಂಜೂರಾದ ಕಾಮಗಾರಿಗಳು ಅಪೂರ್ಣಗೊಂಡಿದೆ.

Similar News