ಕೆಪಿಟಿಸಿಎಲ್ ನೇಮಕಾತಿ ಅಕ್ರಮದ ಹೊಣೆ ಸಚಿವ ಸುನೀಲ್ ಕುಮಾರ್ ಹೊರಬೇಕು: ಸಿದ್ದರಾಮಯ್ಯ

Update: 2022-08-26 09:42 GMT

ಬೆಂಗಳೂರು, ಆ.26: ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕರು,  ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣಗಳ ಬೆನ್ನಲ್ಲೇ ಕೆಪಿಟಿಸಿಎಲ್(KPTCL EXAM) ಪರೀಕ್ಷಾ ಅಕ್ರಮಗಳು ನಡೆದಿದ್ದು  ಒಂದೇ ಒಂದು ಪರೀಕ್ಷೆಯನ್ನೂ ಅಕ್ರಮಗಳಿಲ್ಲದಂತೆ, ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗದಂತೆ ನಡೆಸಲು ಈ ಸರಕಾರಕ್ಕೆ ಸಾಧ್ಯವೇ ಆಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ  ಸುನೀಲ್ ಕುಮಾರ್ ಕೆಪಿಟಿಸಿಎಲ್ ನೇಮಕಾತಿ ಹಗರಣದ ಹೊರೆ ಹೊರಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಗೆ ಹಿರಿಯ ನಾಯಕ ಗುಲಾಂ ನಬಿ ಆಝಾದ್ ರಾಜೀನಾಮೆ

ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಈ ಪ್ರಕರಣದ ಹಿರಿ ತಲೆಗಳನ್ನು ಇನ್ನೂ ಬಂಧಿಸಿಲ್ಲ, ಆಗಲೇ ಕೆಪಿಟಿಸಿಎಲ್ ಕಿರಿಯ ಅಭಿಯಂತರರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು, ಲಕ್ಷಗಟ್ಟಲೆ ಹಣ ಕೈಬದಲಾಗಿರುವುದು ಸರ್ಕಾರದ ಯೋಗ್ಯತೆಗೆ ಕನ್ನಡಿ ಹಿಡಿದಂತಿದೆ ಎಂದು ಟೀಕಿಸಿರುವ ಸಿದ್ದರಾಮಯ್ಯ, ಸರ್ಕಾರದ 40 ಪರ್ಸೆಂಟ್ ಅಕ್ರಮಗಳಿಗೆ ನಾಡಿನ ಜನ ಛೀಮಾರಿ ಹಾಕುತ್ತಿದ್ದಾಗ ಬಿಜೆಪಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಚರ್ಚೆಯನ್ನು ಹುಟ್ಟು ಹಾಕಿ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿತು. ಪಿಎಸ್‌ಐ ನೇಮಕಾತಿ ಹಗರಣ ಹೊರಗೆ ಬರುತ್ತಿದ್ದಂತೆ ಹಿಜಾಬ್ ಮುಂತಾದ ವಿವಾದವನ್ನು ಸೃಷ್ಟಿಸಿ ಜನರನ್ನು ಮತ್ತೊಂದು ಸುತ್ತು ಬಕ್ರಾ ಮಾಡಬಹುದು ಎಂದು ನಂಬಿಕೊಂಡು ತಮ್ಮ ಗಲಭೆ ಸ್ಕ್ವಾಡ್‌ಗಳನ್ನು ಬೀದಿಗಿಳಿಸಿತು ಎಂದು ಆರೋಪಿಸಿದರು.

ಭ್ರಷ್ಟಾಚಾರದ ವಿಚಾರದಲ್ಲಿ ಡೋಂಟ್‌ಕೇರ್ ಎನ್ನುವ ಭಂಡತನವನ್ನು ಆಪರೇಷನ್ ಕಮಲದ ಸರ್ಕಾರ ಆರಂಭದಿಂದಲೇ ಪ್ರದರ್ಶಿಸುತ್ತಿದೆ. ಸರ್ಕಾರದ ಅಕ್ರಮಗಳು, ಭ್ರಷ್ಟಾಚಾರ ಬೆಳಕಿಗೆ ಬಂದಾಗಲೆಲ್ಲಾ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಜನರ ಗಮನ ಬೇರೆಡೆ ಸೆಳೆಯುವ ಕಳಪೆ ಮತ್ತು ಬೈಪಾಸ್ ಮಾರ್ಗವನ್ನು ಅನುಸರಿಸಿದ್ದರಿಂದ ಅಕ್ರಮ ನಡೆಸುವವರಿಗೆ ಸರ್ಕಾರದ ಬಗ್ಗೆ ಯಾವುದೇ ಭಯ ಇಲ್ಲದಂತಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಕೆಪಿಟಿಸಿಎಲ್ ನೇಮಕಾತಿ ಹಗರಣ ಹೊರಗೆ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲೂಟೂತ್ ಸೇರಿದಂತೆ ಇನ್ನಿತರೆ ತಂತ್ರಜ್ಞಾನ ಬಳಸಿಕೊಂಡು ಪರೀಕ್ಷಾ ಅಕ್ರಮಗಳನ್ನು ನಡೆಸುವುದು ರಾಜ್ಯದಲ್ಲಿ ಅತ್ಯಂತ ಸಾಮಾನ್ಯ ಸಂಗತಿ ಎನ್ನುವಂತಾಗಿಬಿಟ್ಟಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಇಂಧನ ಸಚಿವ ಸುನಿಲ್‌ಕುಮಾರ್ ಅವರು, ಅಕ್ರಮದ ವರದಿ ಇನ್ನೂ ತಮ್ಮ ಕೈ ಸೇರಿಲ್ಲ ಎನ್ನುವುದನ್ನೇ ನೆಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಈ ಅಕ್ರಮಕ್ಕೆ ಕಾರಣರಾದ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ಅಕ್ರಮಕ್ಕೆ ಯಾರನ್ನೂ ಹೊಣೆಗಾರರನ್ನಾಗಿಸಿಲ್ಲ. ಹೀಗಾಗಿ ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆಯಂತೆಯೇ ಕೆಪಿಟಿಸಿಎಲ್ ನೇಮಕಾತಿ ಅಕ್ರಮವೂ ಕೇವಲ ಅಭ್ಯರ್ಥಿಗಳ ಮತ್ತು ಕೆಳ ಹಂತದ ಕೆಲವರ ಬಂಧನ ನಡೆಸಿ ಹಿರಿತಲೆಗಳನ್ನು ರಕ್ಷಿಸುವ ಸ್ಪಷ್ಟ ಲಕ್ಷಣ ಕಾಣಿಸುತ್ತಿದೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸರ್ಕಾರದ ಯಾವ್ಯಾವ ಮಂತ್ರಿಗಳು ಫಲಾನುಭವಿಗಳಾಗಿದ್ದಾರೆ ಎನ್ನುವುದನ್ನಾಗಲೀ, ಪರೀಕ್ಷಾ ಅಕ್ರಮದಲ್ಲಿ ಸುಲಿಗೆಯಾದ ಕೋಟಿ ಕೋಟಿ ಹಣ ಯಾವ ಮಂತ್ರಿಗಳ ಸಹವರ್ತಿಗಳ ಜೇಬು ಸೇರಿದೆ ಎನ್ನುವುದನ್ನಾಗಲೀ ತನಿಖಾ ತಂಡ ಇಲ್ಲಿಯವರೆಗೂ ಬಹಿರಂಗಗೊಳಿಸದೆ ಗುಟ್ಟಾಗಿಯೇ ಇಟ್ಟಿದೆ. ಇದೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸೇರಿದಂತೆ ಇನ್ನಿತರರ ಮೇಲೆ ಪೂರ್ಣ ಪ್ರಮಾಣದ ಆರೋಪ ಪಟ್ಟಿಯನ್ನು ಇದುವರೆಗೂ ಸಲ್ಲಿಸದೇ ಇರುವುದು ಸರ್ಕಾರದ ಬಚ್ಚಿಟ್ಟ ಉದ್ದೇಶವನ್ನು ಹೇಳುತ್ತಿದೆ ಎಂದ ಸಿದ್ದರಾಮಯ್ಯ, ಹೀಗಾಗಿ ಈ ಕೂಡಲೇ ಸಚಿವ ಸುನಿಲ್ ಕುಮಾರ್ ಕೆಪಿಟಿಸಿಎಲ್ ನೇಮಕಾತಿ ಹಗರಣದ ಹೊರೆ ಹೊರಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News