ಬೆಂಗಳೂರು | ಇಬ್ಬರು ಸರಗಳ್ಳರ ಬಂಧನ: 1.5 ಕೋಟಿ ಮೌಲ್ಯದ ಚಿನ್ನ, ವಾಹನಗಳ ವಶ
ಬೆಂಗಳೂರು, ಆ.26: ಹೆಲ್ಮೆಟ್ ಧರಿಸಿ ವಿವಿಧ ಬೈಕ್‍ಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು ಕೃತ್ಯಕ್ಕೆ ಬಳಸಿಕೊಂಡು ಮಹಿಳೆಯರ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ 51 ಪ್ರಕರಣಗಳನ್ನು ಪತ್ತೆಹಚ್ಚಿ 1.5 ಕೋಟಿ ರೂ.ಮೌಲ್ಯದ ಚಿನ್ನದ ಸರಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ತಮಿಳುನಾಡು ಮೂಲದ ಸಂತೋಷ್(35) ಮತ್ತು ಬೆಂಗಳೂರಿನ ರವಿ(37) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2.5 ಕೆಜಿ ತೂಕದ 51 ವಿವಿಧ ಚಿನ್ನದ ಸರಗಳು, ಎರಡು ದ್ವಿಚಕ್ರ ವಾಹನಗಳು, ಎರಡು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬ್ಯಾಡರಹಳ್ಳಿ, ಮಹಾಲಕ್ಷ್ಮಿಪುರಂ ಸೇರಿ ನಗರದ ಒಟ್ಟು 32 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 51 ಸರಗಳನ್ನು ಅಪಹರಣ ಮಾಡಿರುವುದು ತನಿಖಾ ಕಾಲದಲ್ಲಿ ತಿಳಿದು ಬಂದಿದೆ.
ಸರಗಳ್ಳತನ ನಡೆದ ಸ್ಥಳಗಳಿಂದ ಸುಮಾರು 300 ಕಿ.ಮೀ.ವರೆಗೆ ಪೊಲೀಸರು ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ, ಆರೋಪಿ ಸಂತೋಷ್‍ನನ್ನು ಬಂಧಿಸಿದ್ದಾರೆ. ಸಂತೋಷ್ ಸತತ ನಾಲ್ಕು ವರ್ಷಗಳಿಂದ ಸರಗಳ್ಳತನಕ್ಕಿಳಿದು ಪೊಲೀಸರ ಕಣ್ತಪ್ಪಿಸಿ ಅಲೆದಾಡುತ್ತಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ.