ʼ10 ರೂ. ನಾಣ್ಯ ಬಳಕೆ ವಿಚಾರದಲ್ಲಿ ಅಪಪ್ರಚಾರ ಶಿಕ್ಷಾರ್ಹ ಅಪರಾಧʼ
ಪುತ್ತೂರು: 10 ರೂ. ಕಾಯಿನ್ ಚಲಾವಣೆಗೆ ಸಂಬಂಧಿಸಿದಂತೆ ಅಪಚಾರ ಮಾಡುವುದು ಮತ್ತು ಸ್ವೀಕರಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರಸ್ತುತ ದೇಶದಾದ್ಯಂತ ಚಲಾವಣೆಯಲ್ಲಿರುವ 10 ರೂ. ಮೌಲ್ಯದ ನಾಣ್ಯ RBI ಸಂಯೋಜಿತ ಅಧಿಕೃತ ಚಲಾವಣೆಯಾಗಿದ್ದು, ಯಾರೂ ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ದೈನಂದಿನ ಹಣಕಾಸು ವ್ಯವಹಾರದಲ್ಲಿ ಬಳಸಬೇಕು ಎಂದು ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ಮ್ಯಾನೇಜರ್ ನರೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಅವರು 10 ರೂ. ನಾಣ್ಯವನ್ನು ಚಲಾವಣೆ ಮಾಡುವಲ್ಲಿ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಶುಕ್ರವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಹಣಕಾಸು ವ್ಯವಹಾರ ಕ್ಷೇತ್ರವನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್, ವ್ಯಾಪಾರ ಕ್ಷೇತ್ರಗಳಲ್ಲಿಸೇರಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ 10 ರೂ. ನಾಣ್ಯಗಳನ್ನು ಮುಕ್ತವಾಗಿ ಬಳಸುವ ಮೂಲಕ ಬೆಂಬಲಿಸಬೇಕು ಎಂದು ತಿಳಿಸಿದರು.
ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಜೋ ಡಿಸೋಜ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಶ್ರೀನಿವಾಸ್ ನಾಯಕ್, ವರ್ತಕ ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಿಣಿ, ಮೆನೇಜರ್ ಉಲ್ಲಾಸ್ ಪೈ ಉಪಸ್ಥಿತರಿದ್ದರು.