×
Ad

ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ: ಬಿಜೆಪಿ ಮಹಿಳಾ ಮೋರ್ಚಾ

Update: 2022-08-26 21:46 IST

ಬೆಂಗಳೂರು, ಆ.26: ಮಹಿಳೆಯರೆಲ್ಲರಿಗೆ ತಮ್ಮ ಹೇಳಿಕೆ ಮೂಲಕ ಅವಮಾನ ಮಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಎಚ್ಚರಿಸಿದರು. 

ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ 17 ಜಿಲ್ಲೆಗಳಲ್ಲಿ ಈಗಾಗಲೇ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಆದರೆ, ಪ್ರಿಯಾಂಕ್ ಖರ್ಗೆ ಮನಃಪೂರ್ವಕವಾಗಿ ಕ್ಷಮೆ ಕೇಳಿಲ್ಲ. ಇದನ್ನು ರಾಜ್ಯ ಮತ್ತು ದೇಶದ ಮಹಿಳೆಯರೆಲ್ಲರ ಪರವಾಗಿ ಖಂಡಿಸುವುದಾಗಿ ತಿಳಿಸಿದರು. 

ಸರಕಾರಿ ನೌಕರಿ ಪಡೆಯಲು ಮಹಿಳೆಯರು ಮಂಚ ಏರಬೇಕು ಹಾಗೂ ಯುವಕರು ಲಂಚ ಕೊಡಬೇಕೆಂದು ಪ್ರಿಯಾಂಕ್ ಖರ್ಗೆ ಮೂಲಕ ಕಾಂಗ್ರೆಸ್ ಪಕ್ಷದ ಕೀಳು ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಅತ್ಯಂತ ಖಂಡನಾರ್ಹ ಎಂದು ಅವರು ತಿಳಿಸಿದರು. 

ಪ್ರಿಯಾಂಕ್ ಖರ್ಗೆ ತಮ್ಮನ್ನು ಚಾಲ್ತಿಯಲ್ಲಿ ಇಡಲು ಇಂತ ಹೇಳಿಕೆ ನೀಡುತ್ತಿದ್ದಾರೆ. ಅವರು ಮಹಿಳೆಯರ ಕುರಿತ ಗೌರವದಿಂದ ಮಾತನಾಡಬೇಕು. ಈ ರೀತಿಯ ಅಸಭ್ಯ ಪದ ಬಳಸಿದ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಉಗ್ರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡಿಲ್ಲ ಎಂದು ಗೀತಾ ವಿವೇಕಾನಂದ ಆಕ್ಷೇಪ ವ್ಯಕ್ತಪಡಿಸಿದರು. 

ಮಹಿಳಾ ಸರಕಾರಿ ನೌಕರರೆಲ್ಲರೂ ಉತ್ತಮ ಕುಟುಂಬದ ಹಿನ್ನೆಲೆಯನ್ನೇ ಹೊಂದಿದ್ದಾರೆ. ಅಲ್ಲದೇ ಪರಿಶ್ರಮದ ಮೂಲಕ ಕೆಲಸ ಪಡೆದು ಉನ್ನತ ಹುದ್ದೆಗಳನ್ನೇರಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ತಿಳಿಸಿದರು. 

ಕಾಂಗ್ರೆಸ್ ಪಕ್ಷದ ಮುಖಂಡ ಅಧೀರ್ ರಂಜನ್ ಚೌಧರಿ ಕೆಲವೇ ದಿನಗಳ ಹಿಂದೆ ರಾಷ್ಟ್ರಪತಿಗಳನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿ ಅವಮಾನ ಮಾಡಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಅದೇ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದವರ ಕೀಳು ಅಭಿರುಚಿಯನ್ನು ಮುಂದುವರೆಸುತ್ತಿರುವುದು ಅತ್ಯಂತ ಬೇಸರ ತಂದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರ ಎಸ್.ಹರೀಶ್, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾ ರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News