ಶಿಕ್ಷಣ ಇಲಾಖೆಯಲ್ಲಿನ 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ರಾಜ್ಯದ ಮಕ್ಕಳು ಬೆಲೆ ತೆರುತ್ತಿದ್ದಾರೆ: ಆಪ್ ಆಕ್ರೋಶ
ಬೆಂಗಳೂರು, ಆ.27: ಕಳೆದ ಹಲವು ತಿಂಗಳುಗಳಿಂದ ರಾಜ್ಯ ಗುತ್ತಿಗೆದಾರರ ಸಂಘವು ರಾಜ್ಯ ಬಿಜೆಪಿ ಸರಕಾರ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದೆ. ಇದೀಗ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟವು 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಿಂದಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ದುರವಸ್ಥೆಗೆ ತಲುಪಿದೆಯೆಂದು ಇತ್ತೀಚೆಗೆ ಪ್ರಧಾನಮಂತ್ರಿಗೆ ಪತ್ರವನ್ನು ಬರೆದಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನ್ಯತೆ ನವೀಕರಣ, ಆರ್‍ಟಿಇ, ಶುಲ್ಕ ಮರುಪಾವತಿ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಸಾಕ್ಷ್ಯಾಧಾರ ಸಮೇತ ಆರೋಪವನ್ನು ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟವು ಮಾಡಿದೆ ಎಂದರು.
ಕಣ್ಣು ಕಾಣದ, ಕಿವಿ ಕೇಳಿಸದ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರದಿಂದಾಗಿ ಇಂದು ರಾಜ್ಯದ ಅಮಾಯಕ ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ದುಬಾರಿ ಬೆಲೆಯನ್ನು ತೆರುತ್ತಿರುವುದು ದುರಂತದ ವಿಷಯ ಎಂದು ಕುಶಲಾ ಸ್ವಾಮಿ ಹೇಳಿದರು.
ರಾಜ್ಯ ಸರಕಾರ ವ್ಯವಸ್ಥಿತವಾಗಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದೆ. ವಿಧಿ ಇಲ್ಲದೆ ರಾಜ್ಯದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಶಾಲಾ ಶುಲ್ಕಗಳನ್ನು ವರ್ಷ ವರ್ಷವೂ ಕಟ್ಟಿ ಕಟ್ಟಿ ಸರಕಾರದ ಭ್ರಷ್ಟಾಚಾರ ನೀತಿಯಿಂದಾಗಿ ಜನಸಾಮಾನ್ಯನ ಬದುಕೇ ದುರ್ಬರವಾಗುತ್ತಿರುವುದು ಕಟುವಾಸ್ತವ ವಿಚಾರವಾಗಿದೆ. ಬಿಜೆಪಿ ಸರಕಾರದ ಲಂಚಕೋರತನ, ದುರಾಡಳಿತಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಕುಶಲಾ ಸ್ವಾಮಿ ಮಾರ್ಮಿಕವಾಗಿ ತಿಳಿಸಿದರು.
ಬಿಜೆಪಿಯವರು ರಾಜ್ಯದಲ್ಲಿ ಅನೈತಿಕ ಸರಕಾರವನ್ನು ನಡೆಸಿ ರಾಜ್ಯದ ಖಜಾನೆಯನ್ನು ಲೂಟಿ ಹೊಡೆಯುವ ಪ್ರಕ್ರಿಯೆಯಲ್ಲಿ ಇದೀಗ ಶಿಕ್ಷಣ ಕ್ಷೇತ್ರವನ್ನು ಬಿಡದೆ ರಾಜ್ಯದ ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಶಲಾ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಈ ಬಗ್ಗೆ ಆಮ್ ಆದ್ಮಿ ಪಕ್ಷವು ತೀವ್ರ ಚಿಂತನೆಯನ್ನು ನಡೆಸಿ ಸರಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ನಡೆಸುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟುವ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗುತ್ತಿದ್ದೇವೆ ಹಾಗೂ ರಾಜ್ಯದ ಮನೆಮನೆಗೂ ಸರಕಾರದ ಭ್ರಷ್ಟಾಚಾರ ನೀತಿಯನ್ನು ತಲುಪಿಸುತ್ತೇವೆ ಎಂದು ಪಕ್ಷದ ಮಾಧ್ಯಮ ವಕ್ತಾರೆ ಉಷಾ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮಹಿಳಾ ನಾಯಕಿ ಮರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.