ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಸರಕಾರ ಅನುಮತಿ ನೀಡುವ ಮುನ್ನವೇ ಗಣೇಶೋತ್ಸವ ಆಚರಣೆಗೆ ಸಿದ್ಧತೆ

Update: 2022-08-27 14:54 GMT

ಬೆಂಗಳೂರು, ಆ.27: ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸರಕಾರವು ಅನುಮತಿಯನ್ನು ನೀಡುವ ಮುಂಚೆಯೇ ಚಾಮರಾಜಪೇಟೆಯಲ್ಲಿರುವ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡುವುದಾಗಿ ಚಾಮರಾಜಪೇಟೆ ನಾಗರಿಕ ಒಕ್ಕೂಟವು ತಿಳಿಸಿದೆ. 

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಮಾತನಾಡಿ, ‘ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡುವ ಬಗ್ಗೆ ಐದು ಪ್ರತ್ಯೇಕ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಮೂರು ಅರ್ಜಿಗಳನ್ನು ವಜಾ ಮಾಡಿದ್ದು, ಉಳಿದ ಎರಡು ಅರ್ಜಿಗಳನ್ನು ವಿಚಾರಣೆ ನಡೆಸಿ ಅನುಮತಿ ನೀಡಬಹುದು. ಇನ್ನು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಬಹುದು. ಯಾರಿಗೆ ಅನುಮತಿ ನೀಡಿದರೂ, ಒಗ್ಗಟ್ಟಿನಿಂದ ಆಚರಣೆ ಮಾಡುತ್ತೇವೆ ಎಂದರು.

ಮುಖಂಡ ಲಹರಿ ವೇಲು ಮಾತನಾಡಿ, ‘ಚಾಮರಾಜಪೇಟೆಯಲ್ಲಿರುವ ಸಂಘಟನೆಗಳ ನಡುವೆ ಯಾವುದೇ ಮನಸ್ತಾಪ ಈಗ ಇಲ್ಲ. ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡದೆ, ಎಲ್ಲಾ ಧರ್ಮದವರು ಹಬ್ಬದಲ್ಲಿ ಭಾಗಿಯಾಗಬಹುದು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅವರ ಫೋಟೋವನ್ನು ಇಟ್ಟು, ಹಬ್ಬವನ್ನು ಮಾಡುತ್ತೇವೆ’ ಎಂದು ಬಹಿರಂಗಪಡಿಸಿದರು. 

ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರ ಎಂದು ಕೇಳಿದ ಪ್ರಶ್ನೆಗೆ ಅವರು, ‘ಮೈದಾನದ ಮಾಲಕತ್ವದ ಕುರಿತು ಮುಸ್ಲಿಮ್ ಸಂಘಟನೆಗಳು ಸುಪ್ರೀಂ ಕೋರ್ಟ್‍ಗೆ ಬೇಕಾದರೂ ಹೋಗಲಿ, ನಾವು ಭಯಪಡುವುದಿಲ್ಲ. ನಾವು ಆಶಾವಾದಿಗಳಾಗಿದ್ದಾರೆ. ಮಾಧ್ಯಮಗಳೇ ನಮ್ಮ ಮಾಸ್ಟರ್ ಪ್ಲಾನ್ ಆಗಿವೆ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News