ಮುಲ್ಕಿ; ಸರಕಾರ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದ್ದು, ಅಭಿವೃದ್ಧಿ ಪರ್ವ ಆರಂಭವಾಗಿದೆ: ಸಚಿವ ವಿ. ಸೋಮಣ್ಣ

Update: 2022-08-27 15:00 GMT

ಮುಲ್ಕಿ: ರಾಜ್ಯ ಸರಕಾರವು ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅಭಿವೃದ್ಧಿ ಪರ್ವ ಆರಂಭವಾಗಿದೆ. ಅಭಿವೃದ್ಧಿ ಮೂಲಕ ರೈತರಲ್ಲದ ಬಡವರಿಗೂ ವಿದ್ಯಾಸಿರಿ ಯೋಜನೆಯನ್ನು ರೂಪಿಸಲಾಗಿದೆ ಇಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಮುಲ್ಕಿ ತಾಲೂಕು ಘೊಷಣೆಯಾಗಿ ಕೇವಲ ಒಂದುವರೆ ವರ್ಷದಲ್ಲಿ ತಾಲೂಕು ಆಡಳಿತ ಸೌಧ ಶಂಕುಸ್ಥಾಪನೆ ನಡೆದಿದೆ. ಮುಂದಿನ ಜ.26ರಂದು ಈ ಸೌಧ ಲೋಕಾರ್ಪಣೆಯಾಗಬೇಕು ಎಂದರು. ಅವರು ಮುಲ್ಕಿ ತಾಲೂಕು ಆಡಳಿತ ಸೌಧ, ಪ್ರವಾಸಿ ಮಂದಿರ ಹಾಗೂ ಕ್ಷೇತ್ರ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಭಿವೃದ್ಧಿ ಕನಸಿನಲ್ಲಿ ಬಡವರಿಗೆ ಸೂರು ನೀಡುವ ಕಾರ್ಯಕ್ರಮವಿದ್ದು ರಾಜ್ಯದಲ್ಲಿ 24 ಸಾವಿರ ಮನೆಗಳನ್ನು ನೀಡಲಾಗುತ್ತಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಈಗಾಗಲೇ 19 ಸಾವಿರ ಮನೆ ನೀಡಲಾಗಿದೆ. ಇನ್ನೂ 11ಸಾವಿರ ಮನೆಗಳ ಹಕ್ಕುಪತ್ರ ನೀಡಲಾಗುವುದು. ಮುಲ್ಕಿ ಮೂಡಬಿದ್ರಿ ಕ್ಷೇತ್ರದ ವಿವಿಧ ವಸತಿ ಯೋಜನೆಗಾಗಿ ಹೆಚ್ಚುವರಿಯಾಗಿ 5 ಕೋಟಿ ನೀಡಲಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಯಾತ್ರಿಕರ ಉಪಯೋಗಕ್ಕಾಗಿ ಸುಮಾರು 100 ಎಕ್ರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಹಾಗೂ ಹೆಲಿ ಪ್ಯಾಡ್ ನಿರ್ಮಾಣ ಯೋಜನೆಯ ಬಗ್ಗೆ ಚಿಂತನೆ ನಡೆದಿದೆ ಎಂದರು.

ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ ಪಾಟಿಲ್ ಮಾತನಾಡಿ, ಮುಲ್ಕಿ ಮೂಡಬಿದ್ರಿ ಕ್ಷೇತ್ರದ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದು ರಾಜ್ಯ ಮಟ್ಟದಲ್ಲಿ ಹೆದ್ದಾರಿ ಮರು ಡಾಮರೀಕರಣ ಹಾಗೂ ಅಭಿವೃದ್ಧಿಗಾಗಿ 10ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಲ್ಕಿ ಮೂಡಬಿದ್ರಿ ಕ್ಷೇತ್ರದ ವಿವಿಧ ಕಾಮಗಾರಿಗಾಗಿ 20 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಮುಖವಾಹಿನಿ ವ್ಯಕ್ತಿಗಳು 40% ಸರಕಾರ ಎಂದು ದೂರಿದ್ದಾರೆ.  ಆದರೆ ಸಿದ್ದರಾಮಯ್ಯ ನವರ ಮನೆಯಲ್ಲಿ ಮೀಟಿಂಗ್ ಮಾಡಿ ಹೊರಬಂದು ಅವರನ್ನೂ ಸೇರಿಸಿ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಜನತೆ ಇಂತವರ ಮಾತನ್ನು ನಂಬಬಾರದು, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸರಕಾರ ಯಾವತ್ತೂ ಪ್ರಾಮಾಣಿಕ  ಮತ್ತು ಪಾರದರ್ಶಕ ಅಭಿವೃದ್ಧಿಯಲ್ಲಿ ನಂಬಿಕೆ ಇರಿಸಿ ಮುಂದುವರಿಯುತ್ತದೆ ಎಂದರು.

ಇಂಧನ ಸಚಿವ ಸುನಿಲ್ ಕುಮಾರ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತ ಹಾಗೂ ಪ್ರಸ್ತಾವನೆ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮುಲ್ಕಿ ಮತ್ತು ಮೂಡಬಿದ್ರೆ ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಚುಣಾವಣೆ ಸಂದರ್ಭ ಹೇಳಿದ್ದೆ ಜನರ ಆಶೀರ್ವಾದದಂತೆ ಕ್ಷೇತ್ರದಲ್ಲಿ ಸುವಾರು 1.5 ಸಾವಿರ ಕೋಟಿರೂ  ವೆಚ್ಚದ ಯೋಜನೆಗಳು ನಡೆದಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು  ರತ್ನಾಕರ ಹೆಗ್ಡೆ, ಮೇಘನಾದ ಶೆಟ್ಟಿ, ಕೆ.ಪ್ರತಾಪಚಂದ್ರ ನಾಯಕ್, ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಎಡಿಸಿ ಅಭಿಶೇಕ್,ಮೂಲ್ಕಿ ನ ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಉದ್ಯಮಿ ಅರವಿಂದ ಪೂಂಜ, ಮೂಡಬಿದ್ರಿ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಕರ್ನಾಟಕ ಗೃಹ ಮಂಡಳಿ ಮುಖ್ಯ ಇಂಜಿನಿಯರ್  ನಂಜುಂಡಪ್ಪ ಮತ್ತಿತರರಿದ್ದರು.

ನವೀನ್ ಶೆಟ್ಟಿ ಎಡ್ಮೇಮಾರ್ ನಿರೂಪಿಸಿದರು. ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಆಳ್ವ  ವಂದಿಸಿದರು.‌ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News