ಕಿನ್ನುರಿ ನುಡಿಸೋನಾ...

Update: 2022-08-28 05:18 GMT

 ಕತೆಯನ್ನು ಕತೆಯಾಗಿಸುವ ಸಂಗತಿ ಯಾವುದು? ಒಂದು ಕತೆಗೆ ವ್ಯಕ್ತಿ ವಿಶಿಷ್ಟತೆ ಒದಗುವುದು ಅದರಲ್ಲಿನ ವಿವರಗಳಿಂದಲೇ? ಕಥನಕ್ರಮದಿಂದಲೇ? ಅಥವಾ ಎಲ್ಲವನ್ನು ಬೆಸೆಯುವ ಭಾಷೆಯಿಂದಲೇ? ಹೀಗೆಲ್ಲ ಕ್ರಮಬದ್ಧವಾಗಿ ಯೋಚಿಸಿ, ಯೋಜಿಸಿ ಕತೆ ಬರೆಯಬೇಕೇ ಅಥವಾ ಬರೆಯಬಹುದೇ? ಅಥವಾ ಕತೆಯೆನ್ನುವುದು ಬರೆಯುವ ಪ್ರಕ್ರಿಯೆಯಲ್ಲಿ ತನ್ನಿಚ್ಛೆಯಂತೆ ಆಗುವ ಪವಾಡವೇ? ನನ್ನೊಳಗೆ ಯಾವಾಗಲೂ ಏಳುವ ಇಂತಹ ಪ್ರಶ್ನೆಗಳು ‘ಕಥಾ ಕಿನ್ನುರಿ’ಯ ಕತೆಗಳನ್ನು ಓದುವ ಹೊತ್ತಿನಲ್ಲಿಯೂ ಮತ್ತೆಮತ್ತೆ ಕಾಡಿದವು, ಅದರಲ್ಲೂ ವಿಶೇಷವಾಗಿ ‘ಎಡಗೈ ಯೋಧನ ವೀರಗಲ್ಲು’ ಕತೆ. ಕನ್ನಡದ ಐವತ್ತು ಶ್ರೇಷ್ಠ ಕತೆಗಳನ್ನು ಹೆಸರಿಸುವುದಾದರೆ ಆ ಪಟ್ಟಿಯಲ್ಲಿ ಈ ಕತೆ ಇದ್ದೇ ಇರುತ್ತದೆ ಎಂದು ನನ್ನ ನಂಬಿಕೆ. ತನ್ನ ಶೀರ್ಷಿಕೆಯಿಂದಲೇ ಪ್ರಶ್ನೆ, ಕುತೂಹಲಗಳನ್ನು ಹುಟ್ಟಿಸುವ ಕತೆ ಇದು. ‘ಎಡಗೈ ಯೋಧ’ ಅನ್ನುವುದು ‘ಬಲ’, ‘ಎಡ’ ಪಂಥವನ್ನು ಸೂಚಿಸುತ್ತಿದೆಯೇ? ಕೆಳಸಮುದಾಯದ ಒಳಗೇ ಚಾಲ್ತಿಯಲ್ಲಿರುವ ‘ಬಲ-ಎಡ’ ವಿಂಗಡಣೆಯ ಸೂಚಕವೆ? ಕೇವಲ ದೇಹದ ಭಾಗ/ಅಂಗವೆ? ಎಂಬೆಲ್ಲ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಕತೆಯು ಈ ಯಾವುದಕ್ಕೂ ಉತ್ತರಿಸಲು ಹೋಗದೆ, ಒಂದಲ್ಲ ಒಂದು ಹಂತದಲ್ಲಿ ಇವೆಲ್ಲ ಅನುಮಾನಗಳನ್ನೂ ಮುಟ್ಟಿ ಸಾಗುತ್ತದೆ.

ವೀರಭದ್ರನ ಗುಡಿಗೆ ಹೋಗಿ ಬಂದ ನಂತರ, ಕತೆಯೊಳಗಿನ ನಿರೂಪಕ ತಾನು ಅಲ್ಲಿ ಕಂಡದ್ದರ ಕುರಿತು ಇಂದಿನ ಘಟನೆಗಳನ್ನೆಲ್ಲ ಸೇರಿಸಿ ಒಂದು ಕತೆ ಬರೆಯಬಹುದೆಂದು ಮನಸ್ಸಿನಲ್ಲಿಯೇ ಕತೆಯ ಹಂದರವನ್ನು ರೂಪಿಸಿಕೊಂಡೆ ಎಂದುಕೊಳ್ಳುತ್ತಾನೆ. ಬರೆಯುತ್ತಿರುವ ಕತೆಯೊಳಗೇ ಬರೆಯಬೇಕಾದ ಕತೆಯ ಹಂದರ ರೂಪುಗೊಳ್ಳುವ ವಿಸ್ಮಯ ಇದು!

‘ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು!’

ಕವಿ ಮತ್ತು ಕವಿತೆಯ ಬಿಡುಗಡೆಗೆ ಸಂಕೇತವಾದ ಪಕ್ಷಿಗಳ ಸಾಲು ಕುವೆಂಪು ಅವರಿಗೆ ‘ದೇವರರುಜು’ವಾಯಿತಲ್ಲ, ಹಾಗೇ ಚನ್ನಪ್ಪಕಟ್ಟಿಯವರ ಈ ಕತೆಯಲ್ಲಿಯೂ ಕಲಾವಿದನ ಮೂಲಕ ಚಿತ್ರವೊಂದು ಮೂಡುತ್ತಿದೆ. ಅದು ಮೂಡುತ್ತ ತನ್ನ ಕೃತಿಗೆ ಕಲಾವಿದ ತಾನೇ ಬೆರಗಾಗುತ್ತ ಒಂದು ‘ರುಜು’ವು ಮೂಡುತ್ತಿದೆ. ಈ ‘ರುಜು’ವು ಕಲೆಯ ಭಾಗವೂ ಹೌದು, ಕಲೆಯ ಹೊರಗಿನದೂ ಹೌದು. ಹಕ್ಕಿಯ ನೆವದಲ್ಲಿ ಆದ ‘ರುಜು’ವು ಕವಿ ಬರೆಯುತ್ತಿರುವ ಚಿತ್ರದ ಭಾಗವೇ ಆಗಿ, ಏಕಕಾಲಕ್ಕೆ ಚಿತ್ರವೂ, ಚಿತ್ರವಸ್ತುವೂ ಪರಿಪೂರ್ಣವಾಗುವ ವರ್ಣನೆ ಕವಿತೆಯ ನಡೆಯದ್ದು. ಆರಂಭದಲ್ಲಿ ಬೇರೆಬೇರೆಯಾಗಿ ಕಾಣುವ ಚಿತ್ರ, ಚಿತ್ರಕಾರ ಮತ್ತು ಅವನ ರುಜುವು ಕವಿತೆಯ ಕೊನೆಯಲ್ಲಿ ಒಂದಾಗಿ ಕಾಣುವ ಹಾಗೆ ಚನ್ನಪ್ಪಕಟ್ಟಿಯವರ ಈ ಕತೆಯಲ್ಲಿಯೂ ಕತೆಯೊಳಗಿನ ಕತೆ, ಕತೆಯ ನಿರೂಪಕ-ಕತೆಗಾರ ಮತ್ತು ಅವನ ಈ ಕತೆಯು ಕಾಣುತ್ತದೆ.

ಇಲ್ಲಿ, ಮುತ್ತ್ಯಾನನ್ನು ವರ್ಣಿಸಲು ನಿರೂಪಕನು ಬಳಸುವ ರೂಪಕವೇ ಚನ್ನಪ್ಪನವರ ಒಟ್ಟಾರೆ ಕಥಾಲೋಕದ ನಡೆಯನ್ನು ಸಂಕೇತಿಸುವಂತಹದ್ದು: ‘‘ಜೇಡನ ಹುಳುವಿನಂತೆ ಸದಾ ಕಂಬಳಿ ನೇಯುವುದಲ್ಲದೆ ಒಳಗೊಳಗೆ ಏನೇನೋ ಧ್ಯಾನಿಸುತ್ತ ಹೊಸ ಕತೆ ಹೆಣೆಯುತ್ತಿದ್ದ.’’ ಈ ಮುತ್ತ್ಯಾನಿಗೆ ಮಡದಿ, ಮಕ್ಕಳು ಯಾರಿಲ್ಲ. ಮದುವೆಯಾಗಿ ತಿಂಗಳಲ್ಲಿ ಅವನ ಹೆಂಡತಿ ಬಯಲಿಗೆ ಹೋದವಳು ಹಿಂದಿರುಗಿ ಬರಲಿಲ್ಲವಂತೆ. ಊರಿನ ದೇಸಾಯಿಯ ತಮ್ಮನೂ ಅಂದೇ ಊರು ಬಿಟ್ಟನಂತೆ. ಅವರಿಬ್ಬರನ್ನೂ ಮುತ್ತ್ಯಾನೇ ಕೊಲೆ ಮಾಡಿದ ಎಂದೂ ಊರ ಕೆಲವರು ಹೇಳುತ್ತಾರೆ. ಆದರೆ ಇವೆಲ್ಲ ಮುತ್ತ್ಯಾ ಹೇಳುತ್ತಿದ್ದ ಕತೆಗಳಷ್ಟೇ ರೋಚಕ ಸಂಗತಿಗಳೇ ಹೊರತು ನಿಜವಾದ ಸತ್ಯ ಯಾವುದು ಎಂದು ಯಾರಿಗೂ ಗೊತ್ತಿಲ್ಲ. ಮುತ್ತ್ಯಾ ಎಲ್ಲಿಂದ ಬಂದ? ಯಾರಿಗೂ ಗೊತ್ತಿಲ್ಲ. ಆದರೆ ಊರಿನ ಪ್ರತಿಯೊಬ್ಬರ ಮನೆಯಲ್ಲೂ ಇವನು ನೇಯ್ದುಕೊಟ್ಟ ಕಂಬಳಿಯಿದೆ, ಊರಿನ ಪ್ರತಿಯೊಬ್ಬನ ನೆನಪಿನಲ್ಲೂ ಅವನು ಹೇಳಿದ ಕತೆಗಳಿವೆ. ಮುತ್ತ್ಯಾನ ಮೌನ ನಿಗೂಢ. ಹಾಗೇ ಅವನ ವ್ಯಕ್ತಿತ್ವವೂ. ಕಳೆದ ಅರವತ್ತು ವರ್ಷಗಳಿಂದ ಮುತ್ತ್ಯಾ ಮಾಡಿರುವುದು ಕಂಬಳಿ ನೇಯುವುದು ಮತ್ತು ಕತೆ ಹೇಳುವುದು. ಆ ಕಂಬಳಿಗಾದರೂ ಅವನು ತೆಗೆದುಕೊಳ್ಳುತ್ತಿದ್ದ ದುಡ್ಡು ಉಣ್ಣೆ ಕೊಳ್ಳಲು ತಗಲುವ ವೆಚ್ಚ ಮತ್ತು ಅದನ್ನು ನೇಯಲು ತೆಗೆದುಕೊಂಡ ಸಮಯಕ್ಕೆ ತನ್ನ ಉಪಜೀವನಕ್ಕೆ ತಗಲುವ ವೆಚ್ಚ ಮಾತ್ರ!

ಇಂತಹ ಮುತ್ತ್ಯಾ ಅದೆಷ್ಟು ಸೊಗಸಾಗಿ ಮತ್ತು ಸೊಗಸಾದ ಕತೆ ಹೇಳುತ್ತಾನೆ: ‘‘ನೂರು ಸಾವಿರ ಕೋಟಿ ವರ್ಷಗಳ ಹಿಂದೆ ಹಿಮಾಲಯ ಪರ್ವತದಲ್ಲಿ ಪಾರೋತಿ ಸಮೇತನಾಗಿ ಸುಡುಗಾಡ ಕಾಯ್ಕೋತ ತಪಸ್ಸು ಮಾಡ್ಕೋತ ಕುಳಿತಿದ್ದ ಶಿವಪರಮೇಶ್ವರ ಒಂದಿನ ದಿಗ್ಗನೆ ಎದ್ದು ಕುಣಿಯತೊಡಗಿದ...’’ ಎಂದು ಆರಂಭವಾಗುವ ಕತೆಯಲ್ಲಿ ಶಿವನು ಗುಡದೂರಿನ ಬೆಟ್ಟದಲ್ಲಿ ಉಂಟಾಗಲಿದ್ದ ಧರ್ಮನಾಶವನ್ನು ತಡೆಯಲು ವೀರಭದ್ರನನ್ನು ಸೃಷ್ಟಿಸುತ್ತಾನೆ. ಈ ವೀರಭದ್ರನು ಗುಡದೂರಿಗೆ ಬಂದು ದೊರೆ ದೇಸಾಯಿಯವರ ಮಗಳು ಕಾಳವ್ವನನ್ನು ಪ್ರೀತಿಸಿ ನಿರಾಕರಣೆಗೊಳಪಡುತ್ತಾನೆ. ದೇಸಾಯಿಯವರ ಮಗಳನ್ನು ಹೊತ್ತೊಯ್ಯುವ ಬೆಂಡಿಗೇರಿ ದೇಸಾಯಿಯನ್ನು ಎದುರಿಸಿ ಅವನ ರುಂಡವನ್ನು ಹಾರಿಸುತ್ತಾನೆ. ಕಾಳವ್ವನನ್ನು ಹೊತ್ತುಕೊಂಡು ಊರಿಗೆ ಬಂದು ಬಿಟ್ಟ ನಂತರ ಪ್ರಾಣ ಬಿಡುತ್ತಾನೆ. ಇವನ ಹೆಸರಿನಲ್ಲಿ ದೇಸಾಯಿಯವರು ಒಂದು ಕಲ್ಲು ಕಡೆದು ನಿಲ್ಲಿಸಿ, ಅದರ ಮೇಲೆ ಗುಡಿ ಕಟ್ಟಿಸಿ, ಭೂಮಿಯನ್ನು ಉಂಬಳಿ ಬಿಡುತ್ತಾರೆ. ಇಲ್ಲಿಗೆ ಮುತ್ಯ್ತಾ ಹೇಳುವ ಕತೆ ಮುಗಿಯುತ್ತದೆ. ಆದರೆ ‘ಎಡಗೈ ಯೋಧನ ವೀರಗಲ್ಲು’ ಕತೆಯ ಕತೆಗಾರನ ಕತೆ ಮುಗಿಯುವುದು ಹೀಗೆ: ‘‘ಹೀಗೆ ಹೇಳಿ ಮುಗಿಸುವಾಗ ಬೀರಗೊಂಡಪ್ಪನ ಕಣ್ಣಲ್ಲಿ ನೀರು ತುಂಬಿತ್ತು. ಆದರೆ ಬಾಲಪ್ಪನು ಬೆಂಡಿಗೇರಿ ದೇಸಾಯಿಯ ರುಂಡ ಹಾರಿಸಿದ ಎಂದು ಹೇಳುವಾಗ ಮುತ್ತ್ಯಾನ ಕಣ್ಣಲ್ಲಿ ಹೊತ್ತಿಕೊಂಡಿದ್ದ ಬೆಂಕಿಯ ದೃಶ್ಯ ನನ್ನ ಕಣ್ಣಲ್ಲಿ ಖಾಯಂ ಉಳಿದಿತ್ತು.’’ ಮುತ್ತ್ಯಾ ಹೇಳಿದ್ದು ಸ್ವತಃ ವೀರಭದ್ರನ ಕತೆಯೋ, ತನ್ನದೇ ಬದುಕಿನ ಕತೆಯೋ? ಅದು ಓದುಗರ ಚಿಂತನೆಗೆ ಬಿಟ್ಟ ಕತೆ!

ಹೀಗೆ, ನಮ್ಮ ಓದಿಗೆ ದಕ್ಕಿಯೂ ದಕ್ಕದಿರುವ ಮತ್ತು ಹಾಗಿರುವುದರಿಂದಲೇ ಒಂದು ಅಲೌಕಿಕ, ಅಗೋಚರ ಲೋಕದ ಪರಿಧಿಗೆ ನಮ್ಮನ್ನು ಮುಟ್ಟಿಸಿ ಬರುವ ಕಾರಣದಿಂದಾಗಿ ಈ ಕತೆಯ ಬಗ್ಗೆ ನಾನು ವಿವರವಾಗಿ ಬರೆದೆ. ಇದೇ ಗುಣವನ್ನು ಮೈಪಡೆದು ಆದಂತಿರುವ ಚನ್ನಪ್ಪಕಟ್ಟಿಯವರ ಎಲ್ಲ ಕತೆಗಳೂ ಎಡಗೈ ಯೋಧನ ವೀರಗಲ್ಲು ಕತೆಯಿಂದ ಟಿಸಿಲೊಡೆದಿವೆ. ಹಾಗಾಗಿ ‘ಕಥಾ ಕಿನ್ನುರಿ’ಯ ಎಲ್ಲ ಪಾತ್ರಗಳು ಒಂದು ಮತ್ತೊಂದನ್ನು ಹೊಕ್ಕಿ ಬರುತ್ತವೆ, ಬೆಳೆಯುತ್ತವೆ.

ಅಪ್ರಜ್ಞಾಪೂರ್ವಕವಾಗಿ ವ್ಯವಸ್ಥೆಯೊಳಗೆ ಸಿಲುಕಿರುವ ಮನುಷ್ಯನ ಪಾಡನ್ನು ಹೇಳುತ್ತ ಸಾಗುವ ‘ಕಥಾ ಕಿನ್ನುರಿ’ಯ ಕತೆಗಳು ಯಾವಾಗ ನಮ್ಮ-ನಿಮ್ಮೆಲ್ಲರ ಕತೆಯೂ ಆಗಿಬಿಡುತ್ತದೆಯೋ ಅರಿವಿಗೆ ಬರುವುದಿಲ್ಲ. ಮುಳುಗಡೆ ಕತೆ ಇದಕ್ಕೊಂದು ಒಳ್ಳೆಯ ನಿದರ್ಶನ. ಅಪ್ಪಜತನದಿಂದ ಸಂಪಾದಿಸಿಕೊಟ್ಟ ಭೂಮಿಯು ಮಗನ ಮೂಲಕ ಆಳುವವರ, ಅಸಂಬದ್ಧವಾದ ಹಾಗೂ ಮುಂದಾಲೋಚನೆ, ಕಾಳಜಿಗಳಿಲ್ಲದ ಯೋಜನೆಯಿಂದಾಗಿ ಮುಳುಗಡೆ ಹೊಂದುವುದನ್ನು ಹೇಳುವ ಕತೆಯಿದು. ಸಾಮಾನ್ಯ ಮನುಷ್ಯನ ಹೋರಾಟ, ಕನಸುಗಳು ಇಂತಹ ಯೋಜನೆಗಳೊಳಗೆ ಮುಳುಗಡೆ ಹೊಂದುವುದನ್ನೂ ಕತೆಯು ಧ್ವನಿಸುತ್ತದೆ. ನಿತ್ಯವೂ ಬೆಳೆಯುತ್ತಲೇ ಹೋಗುತ್ತಿರುವ ಮನುಷ್ಯನ ಕೊಳ್ಳುಬಾಕ ಮನಸ್ಥಿತಿ, ರಾಜಕಾರಣದ ಲಜ್ಜೆಗೇಡಿತನ, ಬದುಕಿನ ನಿರರ್ಥಕತೆ, ಅಸಹಾಯಕತೆ, ಇವೆಲ್ಲವುಗಳ ಒಳಗೆ ಸಿಲುಕಿರುವ ಮನುಷ್ಯನ ಸ್ಥಿತಿಯು ಜಾಲದ ಹಾಗೆ ಭಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಚನ್ನಪ್ಪಕಟ್ಟಿಯವರ ಕತೆಗಳಲ್ಲಿ ಮೇಲಿಂದ ಮೇಲೆ ಕಾಣ ಸಿಗುವ ಜೇಡನಹುಳ ಪ್ರತಿಮೆಯ ಹಿಂದಿನ ಕಾಳಜಿ, ಸಂಕೇತ ಅದೆಷ್ಟು ಅರ್ಥಪೂರ್ಣವಾಗಿದೆ! ಹೀಗೆ ಏಕಕಾಲಕ್ಕೆ ಬದುಕಿನ ಹಲವು ಭಾವಗಳನ್ನು, ನಾಗರಿಕತೆಯ ಸಂಕೀರ್ಣ ಪದರಗಳನ್ನು ಒಂದು ಕತೆಯಲ್ಲಿ ಮುಟ್ಟಲು ಸಾಧ್ಯವಾಗುವುದು ಚನ್ನಪ್ಪಕಟ್ಟಿಯವರಂತಹ ಒಬ್ಬ ಹೃದಯವಂತ ಮತ್ತು ಮಾನವೀಯ ಕತೆಗಾರನಿಗೆ ಮಾತ್ರ.

ಕಥನಕ್ರಮದ ಮೇಲೆ ಚನ್ನಪ್ಪಕಟ್ಟಿಯವರಿಗೆ ಇರುವ ಹಿಡಿತ, ಅದು ಶೈಲಿಯ ವೈವಿಧ್ಯದೊಡನೆ ಬೆರೆಯುವ ಪವಾಡವು ಎಲ್ಲ ಕತೆಗಳಲ್ಲಿಯೂ ಸಂಭವಿಸುವುದಿಲ್ಲವಾದರೂ, ಇವರ ಕತೆಗಳ ಪ್ರಪಂಚವು ಸೃಷ್ಟಿಸುವ ಭಾಷಾಲಯಗಳು ಅಧ್ಯಯನ ಯೋಗ್ಯವಾದಂತಹವು. ‘ಕಥಾ ಕಿನ್ನುರಿ’ಯ ಕಥನವು ಕಟ್ಟುತ್ತಿರುವ ಲೋಕಕ್ಕೂ, ಇಲ್ಲಿನ ಭಾಷೆಗೂ ನಡುವೆ ಹರಿಗಡಿಯದ ಸಂಬಂಧವಿದೆ. ಈ ಕತೆಗಳ ಅಸ್ತಿತ್ವವೇ ಇದರ ಭಾಷೆ. ಚನ್ನಪ್ಪ ಕಟ್ಟಿ ಅವರು ನೀಡುವ ವಿವರಗಳು, ತಿಳಿವಳಿಕೆ ಮತ್ತು ಭಾವನೆಗಳನ್ನು ಬೇರೊಂದು ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವ ಅನುಭವ ಇದನ್ನು ಓದುವಾಗ ನಮಗಾಗುತ್ತದೆ. ಇದು ಕಟ್ಟಿಯವರ ಕತೆಗಳೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಭಾಷೆ. ಆಡುಮಾತಿನ ಲಯದ ತಿರುಳು ಮತ್ತು ಕಟ್ಟುತ್ತಿರುವ ವಿವರಗಳು ಒಂದು ಬಿಂದುವಿನಲ್ಲಿ ಪೂರ್ಣವಾಗಿ ಕೂಡಿ ಈ ಬರಹಗಳು ಕಾವ್ಯಾತ್ಮಕವಾಗುವತ್ತ ತುಡಿಯುತ್ತವೆ. ಬರಹಗಳುದ್ದಕ್ಕೂ ಬಳಸುವ ವಾಕ್ಯರಚನೆ, ಪದರಚನೆ ಮತ್ತು ಶಬ್ದಕೋಶ ಎಂಬ ಮೂರು ನೆಲೆಗಳಲ್ಲಿಯೂ ಒಂದು ಪ್ರದೇಶ, ಜಾತಿ ಮತ್ತು ಲಿಂಗವಿಶಿಷ್ಟವಾದ ಉಪಭಾಷೆಯ ಬಳಕೆ ಕೂಡ ನಮಗೆ ಇಲ್ಲಿ ಕಾಣಸಿಗುತ್ತದೆ.

ಒಂದೊಂದು ಕತೆಯೂ ಭಾಷೆಯ ಭಿನ್ನ ಲಯಗಳನ್ನು ಒಳಗೊಳ್ಳುವುದರ ಜೊತೆಗೆ, ಒಂದೇ ಕತೆಯೊಳಗೆ ಹಲವು ಭಾಷೆಗಳು ಹುಟ್ಟಿಕೊಂಡಿರುವ ವಿಸ್ಮಯವೂ ಇಲ್ಲಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ಶೀರ್ಷಿಕೆ ‘ಕಥಾ ಕಿನ್ನುರಿ’ ಎಂಬುದಕ್ಕೆ ಹಲವು ಆಯಾಮಗಳು ಒದಗುತ್ತವೆ. ಕಿನ್ನುರಿ ಎಂದರೆ ಕಿನ್ನರ ಸ್ತ್ರೀ; ಒಂದು ತಂತಿಯುಳ್ಳ ವಾದ್ಯ. ಬರೆಯುವ ಪ್ರಕ್ರಿಯೆಯೊಳಗೆ ನಮ್ಮನ್ನು ನಮಗೇ ಕಾಣಿಸುವುದು ಸೃಜನಶೀಲತೆಯ ಕಿನ್ನರ ಗುಣವೆ ತಾನೆ? ಅಂತೆಯೇ, ನುಡಿಸುವಾಗ ದೇಹಕ್ಕೆ ಒತ್ತಿಕೊಂಡಂತೆ ಕಾಣುವ ಈ ವಾದ್ಯಕ್ಕೂ, ನುಡಿಸುವ ಕಲಾವಿದನ ನಡುವಿನ ಅಂತರವು ಅಳಿಸಿ ಹೋಗಿ ದೇಹ ಮತ್ತು ವಾದ್ಯಗಳೆರಡೂ ಒಂದೇ ಎಂಬ ಭಾವ ನೋಡುವವರಲ್ಲಿ, ಅದನ್ನು ಕೇಳುವವರಲ್ಲಿ ಉಂಟಾಗುತ್ತದೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದೆನ್ನುವ ಏಕತ್ರ ಪ್ರಜ್ಞೆ ಕಿನ್ನುರಿ ಮತ್ತು ಅದನ್ನು ನುಡಿಸುವರದ್ದು.

ಕುಟುಂಬ ವ್ಯವಸ್ಥೆ, ಸಮಾಜ, ಮನುಷ್ಯ ಸಂಬಂಧದ ತಾಕಲಾಟಗಳು ಒಂದೆಡೆ ಮತ್ತು ಇವೆಲ್ಲವುಗಳ ಮೂಲಕ ಹೊಮ್ಮುವ ಭಾವ, ವಿಚಾರಗಳನ್ನು ಭಾಷೆಯೆಂಬ ಅಂತಃಕರಣದಿಂದ ಹೆಣೆಯುವ ಅಭೀಪ್ಸೆ ಇನ್ನೊಂದೆಡೆ. ಇವೆರಡೂ ಹಾಳತವಾಗಿ ಕರಗಿ ಒಡಮೂಡಿದ ಈ ಕಥನ ಕಿನ್ನುರಿಯ ಏಕತ್ರ ಪ್ರಜ್ಞೆಗೆ ತನ್ನದೇ ವಿಶಿಷ್ಟ ನಾದವಿದೆ. ಕಥಾ ಕಿನ್ನುರಿಯು ಕನ್ನಡ ಕಥಾಪರಂಪರೆಯ ಬಹುಮುಖ್ಯ ಸ್ವರ.

ಜ.ನಾ. ತೇಜಶ್ರೀ

ಪುಸ್ತಕ: ಕಥಾ ಕಿನ್ನುರಿ

(ಕಥಾ ಸಂಕಲನ)

ಲೇಖಕರು: ಡಾ. ಚನ್ನಪ್ಪಕಟ್ಟಿ

ಬೆಲೆ: 320 ರೂ. ಪ್ರಕಾಶಕರು: ನೆಲೆ ಪ್ರಕಾಶನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News