ಪಯಸ್ವಿನಿ ನದಿಯಲ್ಲಿ ಪ್ರವಾಹ; ಕೊಯನಾಡು ಸೇರಿ ಹಲವೆಡೆ ನುಗ್ಗಿದ ನೀರು

Update: 2022-08-29 03:12 GMT

ಸುಳ್ಯ: ಪಯಸ್ವಿನಿ ನದಿ ಉಕ್ಕಿ ಹರಿದು ಹಲವೆಡೆ ನೀರು ನುಗ್ಗಿ ಆವಾಂತರ ಸೃಷ್ಠಿಯಾದ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ನೀರು ತುಂಬಿ ಹರಿಯಿತು.

ಹಲವು ಕಡೆಗಳಲ್ಲಿ ನದಿ ಬದಿಯ ಪ್ರದೇಶಗಳಿಗೆ ನೀರು ನುಗ್ಗಿದೆ. ಕೊಯನಾಡು ಶಾಲೆ ಬಳಿಯ 5 ಮನೆಗಳು ಜಲಾವೃತವಾಯಿತು. ಬಳಿಕ ಈ ಮನೆಯವರನ್ನು ಸುರಕ್ಷಿತ ಸ್ಣಳಗಳಿಗೆ ಸ್ಥಳಾಂತರಿಸಲಾಯಿತು‌. ಭಾರೀ ಗಾತ್ರದ ಮರಗಳು ಪ್ರವಾಹ ನೀರಿ‌ನಲ್ಲಿ ಕೊಚ್ಚಿ ಬಂದು ಕೊಯನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿದೆ. ಹಲವೆಡೆ ಕೃಷಿ, ತೋಟಗಳಿಗೆ ನೀರು ನುಗ್ಗಿದೆ. ಊರುಬೈಲು, ಚೆಂಬು ಭಾಗದಲ್ಲಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಸಂಪಾಜೆ ಭಾಗದಲ್ಲಿ ಮಳೆ ಕಡಿಮೆ ಇದ್ದರೂ ಪ್ರವಾಹ ಬಂದು ನದಿ ಉಕ್ಕಿ ಹರಿದು ನೀರು ನುಗ್ಗಿದ ಕಾರಣ ಜನರಲ್ಲಿ ಆತಂಕ ಸೃಷ್ಠಿಯಾಯಿತು. ಪಯಸ್ವಿನಿ ನದಿ ಪಾತ್ರದ ಗೂನಡ್ಕ, ಪೇರಡ್ಕ ಭಾಗದಲ್ಲಿಯೂ ನೀರು ನುಗ್ಗಿದೆ. ಪಯಸ್ವಿನಿ ಉದ್ಭವ ಭಾಗದಲ್ಲಿ ಭಾರೀ ಮಳೆಯಾಗಿರುವ ಅಥವಾ ಜಲಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

ಹಲವು ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವುದಾಗಿ ತಿಳಿದುಬಂದಿದೆ. ಮಡಿಕೇರಿ ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News