ತುಳುವಿಗೆ ರಾಜ್ಯಭಾಷೆ ಸ್ಥಾನಮಾನಕ್ಕಾಗಿ ಹಕ್ಕೊತ್ತಾಯ: ಆ.30ರಿಂದ ಸೆ.1ರವರೆಗೆ ‘ಟ್ವೀಟ್ ತುಳುನಾಡ್’ ಅಭಿಯಾನ

Update: 2022-08-29 08:33 GMT

ಮಂಗಳೂರು, ಆ.29: ತುಳುನಾಡಿನ ವಿವಿಧ ತುಳುಪರ ಸಂಘಟನೆಗಳು ಒಟ್ಟು ಸೇರಿ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಸ್ಥಾನಮಾನ ನೀಡಬೇಕೆಂದು ಹಕ್ಕೊತ್ತಾಯ ಮಾಡಲು ನಿರ್ಧರಿಸಿದ್ದು, ಆ.30, 31 ಮತ್ತು ಸೆ.1ರಂದು ಟ್ವೀಟ್ ತುಳುನಾಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜೈ ತುಳುನಾಡ್ ಸಂಘಟನೆ ಕಾರ್ಯದರ್ಶಿ ಅವಿನಾಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಂವಿಧಾನದ ಆರ್ಟಿಕಲ್ 345, 346 ಮತ್ತು 347ರ ಪ್ರಕಾರ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸಲು ಸರ್ಕಾರಕ್ಕೆ ಅವಕಾಶವಿದೆ. ರಾಜ್ಯದಲ್ಲಿ ಕನ್ನಡ ಹೊರತುಪಡಿಸಿದರೆ, ಅತೀ ಹೆಚ್ಚು ಮಂದಿ ಬಳಸುವ ಇನ್ನೊಂದು ಭಾಷೆ ತುಳು. ಆದರೆ ರಾಜ್ಯ ಸರ್ಕಾರ ಅನವಶ್ಯಕ ವಿಳಂಬ ಮಾಡುತ್ತಿರುವುದರಿಂದ ಎಲ್ಲ ತುಳು ಸಂಘಟನೆಗಳು ಒಟ್ಟು ಸೇರಿ ಟ್ವೀಟ್ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವುದರಿಂದ ಅದಕ್ಕಿಂತ ಮುನ್ನ ಟ್ವೀಟ್ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಎಂದು ಅವರು ವಿವರಿಸಿದರು.

ಇದನ್ನೂ ಓದಿ: ತುಳು ಭಾಷೆಯ ಮಾನ್ಯತೆಗಾಗಿ 'ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನ'

ತುಳುನಾಡ್ ಒಕ್ಕೂಟ, ತುಳುವೆರ್ ಕುಡ್ಲ, ಯುವ ತುಳುನಾಡ್, ತುಳುಪೀಡಿಯ, ತುಳುನಾಡು ನಿರ್ಮಾಣ ಸೇನೆ, ತುಳುವಾಸ್ ಕೌನ್ಸಿಲ್ ಅಭಿಯಾನದ ನೇತೃತ್ವ ವಹಿಸಿವೆ. ತುಳುವಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದರೆ, 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಮ್ಮ ಹೋರಾಟಕ್ಕೆ ಬಲ ಸಿಗಲಿದೆ. ಈ ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಅರವಿಂದ ಲಿಂಬಾವಳಿ ತುಳು ಲಿಪಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಕೊಡಿಸಿದ್ದಾರೆ. ಜತಗೆ ಭಾಷೆಗೂ ಸ್ಥಾನಮಾನ ದೊರಕಿಸುವ ಭರವಸೆ ನೀಡಿದ್ದರು. ಅವರ ನಿರ್ಗಮನದ ಬಳಿಕ ಕೆಲಸಗಳು ಬಾಕಿ ಉಳಿಯಿತು. ಈಗಿನ ಸಚಿವರು ತುಳುನಾಡಿನವರೇ ಆಗಿರುವುದರಿಂದ ಶೀಘ್ರ ಈ ಕುರಿತು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಯುವ ತುಳುನಾಡ್ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ತಾಂತ್ರಿಕ ಸಮಸ್ಯೆ ಇದೆ ಎನ್ನುತ್ತಾರೆ. ಆದರೆ ಏನು ಸಮಸ್ಯೆ ಎನ್ನುವುದನ್ನು ಸರ್ಕಾರ, ಜನಪ್ರತಿನಿಧಿಗಳು ಸ್ಪಷ್ಪಪಡಿಸಬೇಕು. ಸಂಘಟನೆಗಳೊಂದಿಗೆ ಚರ್ಚೆ ಮಾಡಿದರೆ ನಮ್ಮಲ್ಲಿರುವ ಮಾಹಿತಿಗಳನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ತುಳುವೆರ್ ಕುಡ್ಲ ಅಧ್ಯಕ್ಷ ಪ್ರತೀಕ್ ಪೂಜಾರಿ, ತುಳುನಾಡ್ ಒಕ್ಕೂಟದ ಶೈಲೇಶ್ ಆರ್.ಜೆ., ತುಳುನಾಡು ನಿರ್ಮಾಣ ಸೇನೆಯ ಸುನಿಲ್ ಸಾಲ್ಯಾನ್, ತುಳುಪೀಡಿಯದ ಸುಮಂತ್ ಹೆಬ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News