ಡಾ.ಶಿವಮೂರ್ತಿ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂಬುದು ಸುಳ್ಳು: ಮಠದಿಂದ ಸ್ಪಷ್ಟನೆ
ಚಿತ್ರದುರ್ಗ, ಆ.29: ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು. ಅವರು ಮಠದ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಾವೇರಿಗೆ ತೆರಳಿದ್ದರು. ಅವರು ಮಧ್ಯಾಹ್ನದ ವೇಳೆ ಮಠಕ್ಕೆ ವಾಪಸ್ ಆಗಲಿದ್ದಾರೆ ಎಂದು ಮಠದವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಮಠದ ಸಲಹಾ ಸಮಿತಿ ಸದಸ್ಯ ಆನಂದಪ್ಪ, "ಸ್ವಾಮೀಜಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದೆಲ್ಲ ಸುಳ್ಳು. ಅವರು ಮಠದ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಾವೇರಿಗೆ ತೆರಳಿದ್ದಾರೆ. ಅಲ್ಲಿ ನಮ್ಮ ಹೊಸ ಮಠ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ತೆರಳಿದ್ದರು, ಅವರು ಮಧ್ಯಾಹ್ನದ ವೇಳೆ ಮಠಕ್ಕೆ ವಾಪಸ್ ಆಗಲಿದ್ದಾರೆ" ಹೇಳಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಸ್ವಾಮೀಜಿ ಪೊಲೀಸ್ ವಶಕ್ಕೆ?
ಮಠದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಮೈಸೂರಿನ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮಠಕ್ಕೆ ಸಂಬಂಧಿಸಿದವರು ಇದನ್ನು ಅಲ್ಲಗೆಳೆದಿದ್ದು, ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿಲ್ಲ. ಅವರು ಕೆಲಹೊತ್ತಿನಲ್ಲಿ ಮಠಕ್ಕೆ ಹಿಂದಿರುಗಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಈ ನಡುವೆ ಮುರುಘಾ ಮಠಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.