ಸೆ.1ರಿಂದ 4: ಮಂಗಳೂರಿನಲ್ಲಿ ಪ್ರಥಮ ಬಾರಿ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್

Update: 2022-08-29 08:32 GMT
ಸಾಂದರ್ಭಿಕ ಚಿತ್ರ (Source: PTI)

ಮಂಗಳೂರು, ಆ. 29: ಮಂಗಳೂರು ರೈಫಲ್ ಕ್ಲಬ್ ವತಿಯಿಂದ ಮಂಗಳೂರಿನ ಮೊದಲ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್ ಸೆ.1ರಿಂದ 4ರವರೆಗೆ ಕದ್ರಿ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ನಲ್ಲಿರುವ ಮಂಗಳೂರು ರೈಫಲ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಕಾರ್ಯದರ್ಶಿ ಮುಕೇಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸೆ.1ರಂದು ಬೆಳಗ್ಗೆ 9:30ಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಿದ್ದು, ಶಾಸಕ ಹರೀಶ್ ಪೂಂಜಾ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಬ್ಯಾಂಕ್ ಆಫ್ ಬರೋಡಾ ವಲಯ ಮುಖ್ಯಸ್ಥೆ ಗಾಯತ್ರಿ ಆರ್.ಮೊದಲಾದವರು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ರೆಕಾರ್ಡ್ ಮತ್ತು ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 10 ಮೀ. ಏರ್ ರೈಫಲ್, ಏರ್ ಪಿಸ್ತೂಲ್ ವಿಭಾಗದಲ್ಲಿ ನಗದು ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ಅವರು ತಿಳಿಸಿದರು.

ಸೆ.3ರಂದು ಎನ್‌ಆರ್ ವಿಭಾಗದಲ್ಲಿ ಫೈನಲ್ ಮತ್ತು ಸಂಜೆ 6 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಐಎಸ್‌ಎಸ್‌ಎಫ್ ವಿಭಾಗದ ಫೈನಲ್ ಪಂದ್ಯಗಳು ಸೆ.4ರಂದು ಅಪರಾಹ್ನ 2 ಗಂಟೆಯಿಂದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿವೆ. ಕ್ರೀಡಾಸಕ್ತರಿಗೆ ಒಲಿಂಪಿಕ್ ಮಾದರಿಯಲ್ಲಿ ಶೂಟಿಂಗ್ ಸ್ಪರ್ಧೆ ವೀಕ್ಷಿಸಲು ಅವಕಾಶವಿದೆ. ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ಜರುಗಲಿದ್ದು, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸದಸ್ಯರಾದ ಸಂದೇಶ್ ಸುಧಾಕರ್, ಜಹೀರ್ ಮಾನಿಪ್ಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News