ಬೆಂಗಳೂರು | ಮೇಲ್ಸೇತುವೆಗೆ '40 ಪರ್ಸೆಂಟ್ ಕಮಿಷನ್' ನಾಮ ಫಲಕ ಅಳವಡಿಕೆ: ಆಪ್ ನಾಯಕರ ಬಂಧನ

Update: 2022-08-29 12:37 GMT

ಬೆಂಗಳೂರು, ಆ.29: ಶಿವಾನಂದ ವೃತ್ತದ ಬಳಿಯಿರುವ ಮೇಲ್ಸೇತುವೆಗೆ ಆಮ್ ಆದ್ಮಿ ಪಕ್ಷದ (Aam Aadmi Party) ನೂರಾರು ಕಾರ್ಯಕರ್ತರು 40 ಪರ್ಸೆಂಟ್ ಕಮಿಷನ್ ಮೇಲ್ಸೇತುವೆ ಎಂಬ ನಾಮ ಫಲಕವನ್ನು ಅಳವಡಿಸಿ ಸೋಮವಾರ ಉದ್ಘಾಟಿಸುವ ಮೂಲಕ ಬೆಂಗಳೂರಿಗರಿಗೆ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಈ ಸ್ಟೀಲ್ ಮೇಲ್ಸೇತುವೆಯು 19 ಕೋಟಿ ರೂ.ಗಳಿಗೆ ಆರಂಭಗೊಂಡು ಇಂದು 7 ವರ್ಷಗಳ ನಂತರ 39 ಕೋಟಿ ರೂ.ವೆಚ್ಚ ಮಾಡಿಯೂ ಅತ್ಯಂತ ಕಳಪೆ ಕಾಮಗಾರಿಯಿಂದ ಕೂಡಿದೆ. ಇಂದು ಬಿಜೆಪಿ ಸರಕಾರ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇದೇ ರೀತಿಯ ಅನೇಕ ಕಾಮಗಾರಿಗಳನ್ನು ಬಿಜೆಪಿ ಸರಕಾರವು 3 ಮತ್ತು 4 ಪಟ್ಟು ಹೆಚ್ಚಿಸಿ ಸಮಯ ವ್ಯರ್ಥ ಮಾಡುತ್ತಾ 40 ಪರ್ಸೆಂಟ್ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಮುಂದಿನ ದಿನಗಳಲ್ಲಿ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋಹನ್ ದಾಸರಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಉಪಾಧ್ಯಕ್ಷ ವಿಜಯ್ ಶರ್ಮಾ, ಮುಖಂಡರಾದ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಶಾವಲಿ, ಉಷಾ ಮೋಹನ್, ಸುಹಾಸಿನಿ ಪಣಿರಾಜ್, ಗೋಪಿನಾಥ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News