ರಾಮಯ್ಯ ಗೌಡ ಕಂಚಿನ ಪುತ್ತಳಿ ಪುರ ಪ್ರವೇಶ; ಪುತ್ತೂರಿನಲ್ಲಿ ಸಾರ್ವಜನಿಕರಿಂದ ಸ್ವಾಗತ
ಪುತ್ತೂರು: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಳ್ಳಲಿರುವ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯು ಸೋಮವಾರ ಮಧ್ಯಾಹ್ನ ವೇಳೆಗೆ ಪುತ್ತೂರು ಪುರಪ್ರವೇಶ ಮಾಡಿತು. ನಗರದ ದರ್ಬೆಯಲ್ಲಿ ಹಾಗೂ ಗಾಂಧಿ ಕಟ್ಟೆಯ ಮುಂಬಾಗದಲ್ಲಿ ಪುತ್ತಳಿ ಮೆರವಣಿಗೆಗೆ ಅದ್ದೂರಿಯ ಸ್ವಾಗತ ನೀಡಲಾಯಿತು.
ದರ್ಬೆಯ ಬೈಪಾಸ್ ಸರ್ಕಲ್ ಬಳಿಯಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಸೀಲ್ದಾರ್ ಸಿಸರ್ಗಪ್ರಿಯ ಸೇರಿದಂತೆ ಹಲವಾರು ಮಂದಿ ಗಣ್ಯರು ಪುತ್ತಳಿಗೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
ಬಳಿಕ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿರುವ ಐತಿಹಾಸಿಕ ಗಾಂಧೀ ಕಟ್ಟೆಯ ಬಳಿಯಲ್ಲಿ ಮತ್ತೊಮ್ಮ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರು ಪ್ರತಿಮೆಗೆ ಗೌರವ ಸಲ್ಲಿಸಿದರು.
ರಾಮಯ್ಯ ಗೌಡ ಅವರ ಕಂಚಿನ ಪುತ್ತಳಿ ಸುಳ್ಯದಿಂದ ಮಾಣಿ ಮೈಸೂರು ರಾಷ್ಟ್ರೀಯ ರಸ್ತೆಯ ಮೂಲಕ ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ದರ್ಬೆ ಬೈಪಾಸ್ ಸರ್ಕಲ್‍ನಲ್ಲಿ ಮತ್ತು ಗಾಂಧೀ ಕಟ್ಟೆಯ ಬಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಸೇರಿದ್ದರು. ಸೇರಿದ ಜನರು ರಾಮಯ್ಯ ಗೌಡ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು.
ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರಸಭಾ ಸದಸ್ಯರು, ಉದ್ಯಮಿ ಸವಣೂರು ಸೀತಾರಾಮ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಗೌಡ ಸಂಘದ ಮುಖಂಡರಾದ ವಿಶ್ವನಾಥ ಗೌಡ, ಚಿದಾನಂದ ಬೈಲಾಡಿ, ಎ.ವಿ. ನಾರಾಯಣ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.