ಕಿನ್ನಿಮುಲ್ಕಿ ಮೀನು ಮಾರಾಟದ ಶೆಡ್ ತೆರವು ಪ್ರಕರಣ; ಉಡುಪಿ ನಗರಸಭೆ ಸದಸ್ಯರ ಮಧ್ಯೆ ವಾಗ್ವಾದ- ಗದ್ದಲ
ಉಡುಪಿ: ಕಿನ್ನಿಮುಲ್ಕಿ ವಾರ್ಡ್‌ನಲ್ಲಿನ ಬಡ ಮೀನು ಮಾರಾಟ ಮಹಿಳೆಯರಿಗೆ ನಿರ್ಮಿಸಿ ಕೊಟ್ಟ ತಾತ್ಕಾಲಿಕ ಶೆಡ್ ತೆರವು ಪ್ರಕರಣವು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ, ಚರ್ಚೆಯಿಂದ ಭಾರೀ ಗದ್ದಲಕ್ಕೆ ಕಾರಣವಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಾಮನಿರ್ದೇಶಿತ ದೇವದಾಸ್ ಶೆಟ್ಟಿಗಾರ್, ಸರಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಮತ್ತು ತೆರವು ಕಾರ್ಯಾ ಚರಣೆ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸ್ಥಳೀಯ ವಾರ್ಡ್ ಸದಸ್ಯೆ ಅಮೃತ ಕೃಷ್ಣಮೂರ್ತಿ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೃತಾ ಕೃಷ್ಣಮೂರ್ತಿ, ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮೀನುಗಾರ ಮಹಿಳೆಯರ ಮನವಿಯಂತೆ ಶೆಡ್ ನಿರ್ಮಿಸಿಕೊಟ್ಟಿದ್ದೇನೆ. ಇದು ತಾತ್ಕಾಲಿಕವೇ ಹೊರತು ಶಾಶ್ವತ ಕಾಮಗಾರಿ ಅಲ್ಲ. ಆದರೆ ಅಧಿಕಾರಿಗಳು ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿ ಸಿರುವುದರಿಂದ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಸ್ಪಷ್ಟನೆ ನೀಡಿದರು.
ಇವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದ ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಸಭೆಯಲ್ಲಿ ಗೊಂದಲ, ಗದ್ದಲ ಉಂಟಾಗಿ ಕೋಲಾಹಲ ಸೃಷ್ಠಿಯಾಯಿತು. ಬಳಿಕ ಆಡಳಿತ ಪಕ್ಷದ ಸದಸ್ಯರನ್ನು ಶಾಸಕ ರಘುಪತಿ ಭಟ್ ಸಮಾಧಾನ ಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ನಾವು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಸರಕಾರಿ ಜಾಗದಲ್ಲಿರುವ ಅಕ್ರಮ ಶೆಡ್ ತೆರವುಗೊಳಿಸುವಾಗ ನೋಟೀಸ್ ನೀಡಬೇಕಾಗಿಲ್ಲ ಎಂದರು.
ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದು ಕೊಳ್ಳಬೇಕು ಮತ್ತು ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಇಲ್ಲದಿದ್ದರೆ ಅವರು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಅಮೃತಾ ಕೃಷ್ಣಮೂರ್ತಿ ಪರವಾಗಿ ಮಾತನಾಡಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ವಿಷಾಧನೀಯ. ಆದರೆ ಇದರೊಂದಿಗೆ ನಗರದಲ್ಲಿರುವ ಬೇರೆ ಅಕ್ರಮ ಕಟ್ಟಡಗಳ ವಿರುದ್ಧವೂ ನಾವು ಅಭಿಯಾನ ಆರಂಭಿಸುತ್ತೇವೆ. ಅದರ ವಿರುದ್ಧವೂ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಈ ಮೂಲಕ ಖಂಡನಾ ನಿರ್ಣಯ ಕೈಬಿಟ್ಟು ಚರ್ಚೆ ಕೊನೆಗೊಳಿಸಲಾಯಿತು.
ಗುಂಡಿ ಮುಕ್ತ ನಗರಸಭೆ: ಮಳೆಗಾಲ ಮುಗಿದ ಕೂಡಲೇ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ಅಕ್ಟೋಬರ್ ತಿಂಗಳೊಳಗೆ ರಸ್ತೆ ಗುಂಡಿ ಮುಕ್ತ ಉಡುಪಿ ನಗರಸಭೆ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ತಾಂತ್ರಿಕ ಸಮಸ್ಯೆಯಿಂದ ಇಂದ್ರಾಳಿ ರಸ್ತೆ ಕಾಮಗಾರಿ ವಿಳಂಬವಾಗಿದೆ. ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸ ಲಾಗುವುದು. ಗುಂಡಿಬೈಲು ರಸ್ತೆ ದುರಸ್ತಿ ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದ್ದು, ಈ ಕಾಮಗಾರಿಯನ್ನು ಶೀಘ್ರ ಮುಗಿಸಲಾಗುವುದು. ಮಲ್ಪೆ- ಆದಿ ಉಡುಪಿ ಚತುಷ್ಪಥ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಲ್ಲಿ ಆರಂಭಿಸ ಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಉಪಸ್ಥಿತರಿದ್ದರು.
ನಗರಸಭೆಯಲ್ಲಿ ಬ್ರೋಕರ್ ಹಾವಳಿ: ಸದಸ್ಯರ ಆಕ್ರೋಶ
ನಗರಸಭೆ ಕಚೇರಿಯಲ್ಲಿ ಬ್ರೋಕರ್ ಹಾವಳಿ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬ್ರೋಕರ್‌ಗಳಿಗೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಅಧಿಕಾರಿಗಳು ಸರಿಯಾದ ಸಮಯಕ್ಕೆ ಅರ್ಜಿ ವಿಲೇವಾರಿ ಮಾಡಿ ಕೊಟ್ಟರೆ ಯಾರು ಕೂಡ ಬ್ರೋಕರ್‌ಗಳನ್ನು ಅವಲಂಬಿಸಲ್ಲ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ರಮೇಶ್ ಕಾಂಚನ್ ಆರೋಪಿಸಿದರು. ಇತ್ತೀಚೆಗೆ ಕಂದಾಯ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಬ್ರೋಕರ್ ವಿರುದ್ಧ ಕೇಸು ದಾಖಲಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ರಘುಪತಿ ಭಟ್ ಮಾತನಾಡಿ, ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು. ಬ್ರೋಕರ್‌ಗಳಿಗೆ ಯಾವುದೇ ಅವಕಾಶ ನೀಡಬಾರದು. ಅಂತಹ ಅಧಿಕಾರಿಗಳನ್ನು ಪೌರಾಯುಕ್ತರು ಅಮಾನತುಗೊಳಿಸಬೇಕು. ಆ ಮೂಲಕ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಬೇಕು ಎಂದು ತಿಳಿಸಿದರು.