ರೈಲು ನಿಲ್ದಾಣದ ಸುತ್ತಮುತ್ತ ಕಸದ ರಾಶಿ

Update: 2022-08-30 18:42 GMT

ಮಾನ್ಯರೇ,

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಕಾಪಾಡುವ ಟೆಂಡರ್ ಅನ್ನು ಖಾಸಗಿ ಕಂಪೆನಿಯೊಂದು ವರ್ಷಕ್ಕೆ ರೂ. 4 ಕೋಟಿಗೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಸ್ವಚ್ಛತೆ ಕಾಪಾಡಲು ತಗಲುವ ವೆಚ್ಚ ಅರ್ಧ ಕೋಟಿಯನ್ನೂ ದಾಟುವುದಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ. ಸ್ವಚ್ಛತೆ ಕೆಲಸಕ್ಕೆ 4 ಮಂದಿ ಸಿಬ್ಬಂದಿ ಇದ್ದಾರೆ. ಒಬ್ಬರು ಕಸ ಗುಡಿಸುತ್ತಾರೆ, ಒಬ್ಬರು ಕಸವನ್ನು ಸಂಗ್ರಹಿಸಿ ಕಸದ ತೊಟ್ಟಿಗೆ ಹಾಕುತ್ತಾರೆ, ಇನ್ನೊಬ್ಬರು ಕಸದ ತೊಟ್ಟಿಯನ್ನು ತೆಗೆದುಕೊಂಡು ಹೋಗುತ್ತಾರೆ ಮತ್ತು 4ನೇ ಸಿಬ್ಬಂದಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ನೀರು ಮತ್ತು ವಿದ್ಯುತ್ ಬಳಸಿ ಯಂತ್ರದಿಂದ ಪ್ಲಾಟ್‌ಫಾರ್ಮ್‌ನ ನೆಲವನ್ನು ತೊಳೆಯುತ್ತಾರೆ.
ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರದ ಹಾಳೆಗಳು, ಕಾಗದ ಇತ್ಯಾದಿಗಳನ್ನು ಒಳಗೊಂಡಿರುವ ಕಸವನ್ನು ಎಳೆದು ಕೊಂಡು ಹೋಗಬಹುದಾದ ಗಾಲಿಗಳಿರುವ ಕಸದ ದೊಡ್ಡ ಡಬ್ಬಿಯಲ್ಲಿ ಸಂಗ್ರಹಿಸಿ ಮಂಗಳೂರು ಜಂಕ್ಷನ್‌ನಿಂದ ರೈಲ್ವೆ ಗೇಟ್‌ಗೆ ಹೋಗುವ ರಸ್ತೆಯ ಕಡೆಗೆ ಸಾಗಿಸಲಾಗುತ್ತದೆ. ಆದರೆ ಅದೇ ರಸ್ತೆಯ ಬದಿಯಲ್ಲಿ ಸುಮಾರು 100 ಅಡಿಗಳಷ್ಟು ಉದ್ದಕ್ಕೆ ಅದನ್ನು ಎಸೆಯಲಾಗುತ್ತದೆ.

ಬಿರಿಯಾನಿ ಕವರ್‌ಗಳು, ಖಾಲಿ ನೀರಿನ ಬಾಟಲಿಗಳು ಇತ್ಯಾದಿಗಳನ್ನು ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್‌ಗಳ ಮೇಲೆ ಎಸೆಯಲಾಗುತ್ತದೆ. ಈ ಎಲ್ಲ ಕಸವನ್ನು ಇಲ್ಲಿನ ರಸ್ತೆ ಬದಿಗಳಲ್ಲಿ ಖಾಲಿ ಮಾಡುತ್ತಿರುವ ವ್ಯಕ್ತಿಗಳಿಗೆ ತಾವು ಏನು ಮಾಡುತ್ತಿದ್ದೇವೆಂಬ ಪಶ್ಚಾತ್ತಾಪವಿಲ್ಲ. ಕಸವನ್ನು ರಸ್ತೆ ಬದಿ ಬಿಸಾಡುತ್ತಿರುವ ಬಗ್ಗೆ ಪ್ರಶ್ನಿಸಿದರೆ ''ಮಂಗಳೂರು ಕಾರ್ಪೊರೇಷನ್ ಲಾರಿ 10 ದಿನಕ್ಕೆ ಒಮ್ಮೆ ಬರುತ್ತದೆ ಮತ್ತು ಅದನ್ನು ಇಲ್ಲಿಂದ ಸಂಗ್ರಹಿಸುತ್ತದೆ'' ಎನ್ನುತ್ತಾರೆ. ಅಂದರೆ ರಸ್ತೆಗೆ ಎಸೆಯಲ್ಪಟ್ಟದ್ದೆಲ್ಲವೂ 10 ದಿನಗಳವರೆಗೆ ಅಲ್ಲಿಯೇ ಹರಡಿಕೊಂಡಿರುತ್ತದೆ. ಪ್ರತಿದಿನ 32 ಜೋಡಿ ರೈಲುಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತವೆ. ಈ 64 ರೈಲಿನ ಎಲ್ಲಾ ಪ್ರಯಾಣಿಕರು ಈ ರಸ್ತೆಯ ಮೂಲಕವೇ ಕಾಲ್ನಡಿಗೆಯಲ್ಲಿ, ಆಟೊ, ಟ್ಯಾಕ್ಸಿ ಅಥವಾ ಬಸ್ ಮೂಲಕ ಹಾದು ಹೋಗಬೇಕು. ಸ್ಮಾರ್ಟ್ ಸಿಟಿ ಎಂದು ಬಿಂಬಿಸಿಕೊಳ್ಳುತ್ತಿರುವ ಮಂಗಳೂರಿಗೆ ಇಂತಹ ದುರವಸ್ಥೆ ಶೋಭೆಯೇ?
 

Writer - ಒಲಿವರ್ ಡಿ'ಸೋಜಾ, ಮುಂಬೈ

contributor

Editor - ಒಲಿವರ್ ಡಿ'ಸೋಜಾ, ಮುಂಬೈ

contributor

Similar News