ಹುಬ್ಬಳ್ಳಿ ಈದ್ಗಾ ವಿವಾದ ರಾಜಕೀಯ ಪ್ರೇರಿತ: ಸಿಪಿಐ ಖಂಡನೆ
ಬೆಂಗಳೂರು, ಸೆ.1: ಉತ್ತರ ಕರ್ನಾಟಕದಲ್ಲಿ ಈದ್ಗಾ ವಿವಾದ, ದಕ್ಷಿಣ ಕರ್ನಾಟಕದಲ್ಲಿ ಬಾಬಾ ಬುಡನ್‌ಗಿರಿ ವಿವಾದ ಸೃಷ್ಟಿಸಿ ಬಿಜೆಪಿ ರಾಜಕೀಯ ಲಾಭವನ್ನು ಈಗಾಗಲೇ ಮಾಡಿಕೊಂಡಿದೆ. ಸಂಘ ಪರಿವಾರದ ಸಂಘಟನೆಗಳು ಸದಾ ಇಂತಹ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಮೂಲಭೂತ ಸಮಸ್ಯೆಗಳನ್ನು ಮರೆಮಾಚಿ ಜನರಿಗೆ ಮೋಸ ಮಾಡುವ ಹುನ್ನಾರ ನಡೆಸುತ್ತಿರುವುದು ಸಾಮಾನ್ಯವಾಗಿದೆ ಎಂದು ಸಿಪಿಐ ಆರೋಪಿಸಿದೆ.
ಹುಬ್ಬಳ್ಳಿಯ ಈದ್ಗಾ ವಿವಾದ ಬಗೆಹರಿದು ಹುಬ್ಬಳ್ಳಿ ಶಾಂತವಾಗಿತ್ತು, ಆದರೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು ಮುಂದಿರುವ ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂಲಕ ಮತ್ತೆ ಈದ್ಗಾ ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ಮಹಾನಗರ ಪಾಲಿಕೆಗಾಗಲೀ ಬಿಜೆಪಿ ಸರ್ಕಾರಕ್ಕಾಗಲೀ ಗಣೇಶನ ಮೇಲಿನ ಭಕ್ತಿ ಮುಖ್ಯವಲ್ಲ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಮೆಯನ್ನಿಟ್ಟು ಇನ್ನೊಂದು ಧರ್ಮದವರನ್ನು ಪ್ರಚೋದಿಸುವುದು, ಸಂಘರ್ಷ ಹುಟ್ಟುಹಾಕುವುದು. ಆ ಮೂಲಕ ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ ಎಂದು ಸಿಪಿಐ ರಾಜ್ಯ ಮಂಡಳಿಯ ಕಾರ್ಯದರ್ಶಿ ಸಾತಿ ಸುಂದರೇಶ್ ಟೀಕಿಸಿದ್ದಾರೆ.
ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನ ಗಣೇಶೋತ್ಸವ ಆಚರಿಸಲು ಅನುಮತಿ ಪಡೆದಿರುವ ಗಜಾನನ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಂಡಳಿ ಸದಸ್ಯರು ಪೊಲೀಸರ ವಿರೋಧದ ಮಧ್ಯೆಯೇ ಪೆಂಡಾಲ್ ಎದುರಿನ ದ್ವಾರದಲ್ಲಿ ವಿ.ಡಿ.ಸಾವರ್ಕರ್, ಭಗತ್ ಸಿಂಗ್ ಮತ್ತು ಶಿವಾಜಿ ಭಾವಚಿತ್ರವಿರುವ ಪ್ಲೆಕ್ಸ್ ಗಳನ್ನು ಅಳವಡಿಸಿದ್ದಾರೆ. ಪಾಲಿಕೆ ಗಣೇಶ ಮೂರ್ತಿಯನ್ನು ಬಿಟ್ಟು ಯಾವುದೇ ಮೂರ್ತಿ, ಪ್ಲೆಕ್ಸ್, ಭಾವಚಿತ್ರ ಮತ್ತು ಜಾಹೀರಾತು ಪ್ರದರ್ಶಿಸುವಂತಿಲ್ಲ ಎಂಬ ಒಂಭತ್ತು ಷರತ್ತುಗಳನ್ನು ವಿಧಿಸಿದೆ. ಹೀಗಿದ್ದರೂ ಷರತ್ತುಗಳನ್ನು ಉಲ್ಲಂಘಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವ ಸಂಘ ಪರಿವಾರದ ಕ್ರಮ ಖಂಡನೀಯ.. ಷರತ್ತುಗಳನ್ನು ಉಲ್ಲಂಘಿಸಿ ಹಾಕಿರುವ ಎಲ್ಲ ಪ್ಲೆಕ್ಸ್ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ನಗರದ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದ ಜನತೆ ಕೋಮುವಾದಿ ಬಿಜೆಪಿ ಮತ್ತು ಸಂಘ ಪರಿವಾರದ ಹುನ್ನಾರವನ್ನು ಅರ್ಥ ಮಾಡಿಕೊಂಡು ಸಹನೆ ಸಂಯಮದಿಂದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗಬೇಕು, ಈದ್ಗಾ ಮೈದಾನದ ಸುತ್ತಲೂ ಸಾಕಷ್ಟು ಸ್ಥಳವಿದೆ. ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳ ಪ್ರಮುಖರು ಸೇರಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ಧರ್ಮದ ಹಬ್ಬಗಳು ಸಂತೋಷದ ಸಂಕೇತವಾಗಬೇಕೇ ಹೊರತು ಸಂಘರ್ಷದ ಮಾರ್ಗ ಹಿಡಿಯಬಾರದು ಎಂದವರು ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.