×
Ad

ಬೊಮ್ಮಾಯಿ ಯೋಗಿ ರೂಪದಲ್ಲಿ ಕರ್ನಾಟಕದ ಸೇವೆ ಮಾಡುತ್ತಿದ್ದಾರೆ: ಬೆಂಗಳೂರಿನಲ್ಲಿ ಆದಿತ್ಯನಾಥ್

Update: 2022-09-01 20:13 IST

ಬೆಂಗಳೂರು, ಸೆ.1: 'ಕರ್ನಾಟಕದ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದ ಕಣಜ ಎಂದು ಗುರುತಿಸಲ್ಪಟ್ಟಿದೆ. ಅದರ ಜೊತೆಗೆ, ಇಲ್ಲಿ ಕ್ಷಿಪ್ರಗತಿಯಲ್ಲಿ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ಬಗ್ಗೆಯೂ ವಿಶ್ವಕ್ಕೆ ಮಾರ್ಗದರ್ಶನ ನೀಡಲಾಗುತ್ತಿದೆ' ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಾಥ ಪರಂಪರೆ’ಯ ಮೂಲಕ ಕರ್ನಾಟಕ ಹಾಗೂ ಉತ್ತರಪ್ರದೇಶದ ನಡುವೆ ಗಾಢವಾದ ಬಾಂಧವ್ಯವಿದೆ. ನಾನು ಓರ್ವ ಯೋಗಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥರು ಒಬ್ಬ ಯೋಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಓರ್ವ ಜನಪ್ರಿಯ ಮುಖ್ಯಮಂತ್ರಿ ಹಾಗೂ ಯೋಗಿ ರೂಪದಲ್ಲಿ ಕರ್ನಾಟಕದ ಸೇವೆ ಮಾಡುತ್ತಿದ್ದಾರೆ. ಅದೇ ರೀತಿ ವೀರೇಂದ್ರ ಹೆಗ್ಡೆಯವರು ಆಧ್ಯಾತ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಇದೊಂದು ಅದ್ಭುತವಾದ ಸಮ್ಮಿಲನವಾಗಿದೆ' ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸದಸ್ಯತ್ವಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ

ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹದೇವಪುರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ನಿರ್ಮಿಸಿರುವ ಪೃಕೃತಿ ಚಿಕಿತ್ಸಾ ಕೇಂದ್ರ ‘ಕ್ಷೇಮವನ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಯುಎಸ್ ಡಾಲರ್ ಮಾಡಲು ಬಯಸಿದ್ದಾರೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ವೃತ್ತಿಪರತೆಯನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು, ತಂತ್ರಜ್ಞಾನದ ಜೊತೆ ಹೇಗೆ ಮುಂದುವರಿಯಬೇಕು ಎಂಬುದು ಇಂದಿನ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು.

ಈ ಕೆಲಸ ಕೇವಲ ಸರಕಾರದ ಪ್ರಯತ್ನದಿಂದ ಸಾಧ್ಯವಿಲ್ಲ. ಎಲ್ಲ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವಾಣಿಜ್ಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈ ಜೋಡಿಸಿದಾಗ ಮಾತ್ರ ಅದರ ಪರಿಣಾಮಗಳನ್ನು ನಾವು ಕಾಣಬಹುದು. ಭಾರತಕ್ಕೆ ಆಧುನಿಕ ತಂತ್ರಜ್ಞಾನದ ಅಗತ್ಯವಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೂಲಕ ಬೆಂಗಳೂರು ಮುಂಚೂಣಿಗೆ ಬಂತು. ದೇಶವು ಯಾವುದೆ ಕ್ಷೇತ್ರದಲ್ಲಿ ಮುಂದುವರೆಯಲು ಬಯಸಿದಾಗ ಬೆಂಗಳೂರು ಹಾಗೂ ಕರ್ನಾಟಕವು ಸಂಕಷ್ಟದ ಜೊತೆಗಾರನಾಗಿ ತನ್ನ ಹೆಜ್ಜೆ ಮುಂದಿಟ್ಟಿದೆ ಎಂದು ಯೋಗಿ ಆದಿತ್ಯನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಭಾರತದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನವನ್ನು ಅಭಿನಂದಿಸುತ್ತೇನೆ. ವೀರೇಂದ್ರ ಹೆಗ್ಡೆಯವರು ಧರ್ಮಾಧಿಕಾರಿಯಾಗಿ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಯೋಗ ಹಾಗೂ ನ್ಯಾಚುರೋಪತಿಯ ಮೂಲಕ ದಶಕಗಳ ಹಿಂದೆಯೇ ಮುಂದುವರೆಸುವ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. 

ಆರಂಭಿಕವಾಗಿ ‘ಶಾಂತಿ ವನ’, ನಂತರ ‘ಸೌಮ್ಯ ವನ’ ಹಾಗೂ ಈಗ ಬೆಂಗಳೂರಿನಲ್ಲಿ ‘ಕ್ಷೇಮ ವನ’ದ ರೂಪದಲ್ಲಿ ತಮ್ಮ ಪರಂಪರೆಯನ್ನು ಮುಂದುವರೆಸುವ ಕೆಲಸ ಮಾಡಿದ್ದಾರೆ. ಕರ್ನಾಟಕದ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಆದಿಚುಂಚನಗಿರಿ ಮಠವು ಆಧ್ಯಾತ್ಮಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಲ್ಲಿಯೂ ತಮ್ಮ ಸೇವೆಯನ್ನು ಇವರು ಮುಂದುವರೆಸಿದ್ದಾರೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿಯ ಪ್ರಯತ್ನದಿಂದಾಗಿ ಜೂ.21ರಂದು ವಿಶ್ವ ಯೋಗ ದಿನಾಚರಣೆ ಘೋಷಣೆಯಾಗಿದೆ. ಯೋಗವು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಯೋಗದ ಮೂಲಕ ವಿಶ್ವದ 175 ರಾಷ್ಟ್ರಗಳು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಅರ್ಥ ಮಾಡಿಕೊಂಡಿವೆ. ಯೋಗ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಿಂದಾಗಿ ಈ ಶತಮಾನದ ಮಹಾಮಾರಿ ಕೋವಿಡ್ ಅನ್ನು ನಾವು ಎದುರಿಸಿದ್ದೇವೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

ಆಧುನಿಕ ಚಿಕಿತ್ಸಾ ಪದ್ಧತಿಯ ಮಹತ್ವ ತನ್ನದೆ ಆದ ರೀತಿಯಲ್ಲಿದೆ. ಆದರೆ, ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯತ್ತಲೇ ಹೆಜ್ಜೆ ಇಡಬೇಕು. ಅದರಲ್ಲಿ ಯೋಗ, ನ್ಯಾಚುರೋಪತಿ, ಆಯುರ್ವೇದ, ಯೂನಾನಿ ಹಾಗೂ ಸಿದ್ಧ ಇದರ ಪಾತ್ರ ಇದೆ. ಬೆಂಗಳೂರಿನಲ್ಲಿ ಕ್ಷೇಮವನದ ಮೂಲಕ ಯೋಗ, ನ್ಯಾಚುರೋಪತಿ ಹಾಗೂ ಪಾರಂಪರಿಕ ಚಿಕಿತ್ಸಾ ಪದ್ಧತಿ ನೀಡುವ ಕಾರ್ಯಕ್ಕಾಗಿ ವೀರೇಂದ್ರ ಹೆಗ್ಡೆ ಹಾಗೂ ಅವರ ತಂಡದ ಎಲ್ಲ ಸದಸ್ಯರಿಗೆ ಶುಭ ಕೋರುತ್ತೇನೆ. ಇಂತಹ ಕೇಂದ್ರದ ಅಗತ್ಯ ಇಡೀ ದೇಶದಲ್ಲಿದೆ ಎಂದು ಅವರು ಹೇಳಿದರು.

ಉತ್ತರಪ್ರದೇಶದಲ್ಲಿ ಗುರು ಗೋರಖ್‍ನಾಥ್ ಆಯುಷ್ ವಿವಿ ಜೊತೆಗೆ ನಮ್ಮ ಕಾರ್ಯ ಮುಂದುವರೆಸಿದ್ದೇವೆ. ಬೆಂಗಳೂರಿನ ವ್ಯಾಸ ವಿವಿಯ ಅಧ್ಯಕ್ಷ ಡಾ.ನಾಗೇಂದ್ರ ನಮಗೆ ಮಾರ್ಗದರ್ಶನ ನೀಡಿದ್ದಾರೆ. ನ್ಯಾಚುರೋಪತಿಯಲ್ಲಿ ಪದವಿ ಪಡೆದಿರುವ ಇಲ್ಲಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಮ್ಮ ವಿವಿಯಲ್ಲಿ ಸಮಸ್ಯೆಯಾಗಿದೆ ಎಂದು ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಯೋಗಿ ಆದಿತ್ಯನಾಥ್ ಭರವಸೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಸಮೃದ್ಧ, ಸುರಕ್ಷಿತ ಕರ್ನಾಟಕಕ್ಕಾಗಿ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ. ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕವು ದೇಶದ ದೊಡ್ಡ ಆರ್ಥಿಕ ಶಕ್ತಿಯಾಗುವುದರ ಜೊತೆಗೆ, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ಕ್ಷೇತ್ರದ ಮೂಲಕ ಭಾರತದಲ್ಲಿ ಹೆಲ್ತ್ ಟೂರಿಸಂ ಒದಗಿಸಲು ಪ್ರಯತ್ನಿಸಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ.ವೀರೇಂದ್ರ ಹೆಗ್ಡೆ, ಸಂಸದ ಬಿ.ಎನ್.ಬಚ್ಚೇಗೌಡ, ಸಚಿವರಾದ ಡಾ.ಕೆ.ಸುಧಾಕರ್, ಭೈರತಿ ಬಸವರಾಜ, ನಾರಾಯಣಗೌಡ, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News