ಐಟಿ ಕ್ಯಾಪಿಟಲ್ ಆಗಿದ್ದ ಬೆಂಗಳೂರು, ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ: ಮಾಜಿ ಸಚಿವ ಕೃಷ್ಣಭೈರೇಗೌಡ ಆಕ್ರೋಶ
ಬೆಂಗಳೂರು, ಸೆ.1: ಬೆಂಗಳೂರು ಪ್ರಪಂಚದಲ್ಲಿ ಐಟಿ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್, ವಿಜ್ಞಾನ ಹಾಗೂ ತಂತ್ರಜ್ಞಾನದ ಕೇಂದ್ರವಾಗಿ ಸೇವೆ ಸಲ್ಲಿಸಿತ್ತು. 2015-16ರಲ್ಲಿ ವಲ್ರ್ಡ್ ಮೋಸ್ಟ್ ಡೈನಾಮಿಕ್ ಸಿಟಿ ಆಗಿ ಹೊರಹೊಮ್ಮಿತ್ತು. ಆದರೆ ಇಂದು ಅತಿ ಹೆಚ್ಚು ರಸ್ತೆ ಗುಂಡಿ ನಗರ, ಮುಳುಗುತ್ತಿರುವ ನಗರವಾಗುತ್ತಿದೆ. ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗ ದಿನ ಬೆಳಗಾದರೆ ಮೈದಾನ, ಮಸೀದಿ, ದೇವಾಲಯ ವಿಚಾರವಾಗಿ ಟೆನ್ಷನ್ ಸಿಟಿ ಆಗಿ ಮಾರ್ಪಾಡಾಗುತ್ತಿದೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ ಇದೆಯಾ? ಬೆಂಗಳೂರಿನ ಹೊಣೆಗಾರಿಕೆ ಯಾರದ್ದು? ಯಾರನ್ನು ಕೇಳಬೇಕು? ಮುಖ್ಯಮಂತ್ರಿ ರಾಜ್ಯವನ್ನು ನೋಡಬೇಕು ಕೇವಲ ಬೆಂಗಳೂರನ್ನು ನೋಡಲು ಆಗುವುದಿಲ್ಲ. ಆದರೂ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ನೀಡಿಲ್ಲ. ಅದಕ್ಕೆ ಕಾರಣ ಬಿಜೆಪಿಯಲ್ಲಿ ಅಧಿಕಾರದ ಆಂತರಿಕ ಗುದ್ದಾಟ ಎಂದು ಕೃಷ್ಣಭೈರೇಗೌಡ ಟೀಕಿಸಿದರು.
ಅಧಿಕಾರಿಗಳನ್ನು ಅಲ್ಲಿ ಕೂರಿಸಿರುವುದು ಆಡಳಿತ ಮಾಡಲು ಅಲ್ಲ, ಬಿಜೆಪಿಗೆ ಹಣ ಹುಟ್ಟಿಸಲು. ಹೀಗಾಗಿ ದುರಾಡಳಿತದ ತಾಂಡವ ನೃತ್ಯದಿಂದ ಬೆಂಗಳೂರು ಮುಳುಗುತ್ತಿರುವ ನಗರವಾಗಿದೆ. ಇನ್ನು ಬೆಂಗಳೂರಿನ ದುಸ್ಥಿತಿಗೆ 40 ಪರ್ಸೆಂಟ್ ಕಮಿಷನ್ ಕಾರಣ. ಬಿಬಿಎಂಪಿ ಗುತ್ತಿಗೆದಾರರು ಹೇಳಿರುವಂತೆ 50 ಪರ್ಸೆಂಟ್ ಲಂಚ ಸ್ವೀಕರಿಸಿದ ನಂತರ ಯಾವ ರಸ್ತೆಗಳು, ಮೇಲ್ಸೇತುವೆಗಳು, ಕಾಲುವೆ ಉಳಿಯುತ್ತವೆ? ಎಂದು ಅವರು ಪ್ರಶ್ನಿಸಿದರು.
ಇಲ್ಲಿನ ಸರಕಾರ, ಜನಪ್ರತಿನಿಧಿಗಳು ಸರಕಾರದ ಬಜೆಟ್ ಅನ್ನು ಶೇ.80ರಷ್ಟು ರಸ್ತೆ ಹಾಗೂ ಚರಂಡಿಗೆ ಹಾಕುತ್ತಾರೆ. ಹಳೇ ಕಲ್ಲು, ಹೊಸ ಬಿಲ್ಲು ಎಂಬಂತೆ ಮಾಡಿ 50 ಪರ್ಸೆಂಟ್ ಹಣ ಲೂಟಿ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬೇಕಾಗಿರುವ ರಾಜಕಾಲುವೆ, ಮೇಲ್ಸೇತುವೆಗಳನ್ನು ಬಿಟ್ಟು, ಕೇವಲ ಹಣ ಲೂಟಿ ಮಾಡಲು ಬೇಕಾದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸರಕಾರ ಬಂದ ನಂತರ ಎಷ್ಟು ಹೊಸ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದೆ? ಸರಕಾರದ ಹಣ ಎಲ್ಲಿ ಹೋಗುತ್ತಿದೆ? ಈ ಹಣ ಬಿಜೆಪಿ ನಾಯಕರ ಜೇಬು ಸೇರುತ್ತಿದೆ ಎಂದು ಆರೋಪಿಸಿದ ಕೃಷ್ಣಭೈರೇಗೌಡ, ಬಿಜೆಪಿಯವರ ಪಾಲಿಗೆ ಬೆಂಗಳೂರು ದುಡ್ಡು ಮಾಡುವ ನಗರವಾಗಿದೆ. ಇದರ ಪರಿಣಾಮವಾಗಿ ಜನ ಬೀದಿಗೆ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಮುಕ್ಕಾಲು ಪಾಲು ಪ್ರದೇಶದಲ್ಲಿ ಹಾನಿ ಆಗಿದೆ. ಪ್ರಧಾನಿ ಬೆಂಗಳೂರಿಗೆ ಬಂದಾಗ ಅವರು ಸಂಚರಿಸುವ ರಸ್ತೆಗೆ ಸಿಂಗಾರ ಮಾಡಲು 26 ಕೋಟಿ ಖರ್ಚು ಮಾಡುತ್ತಾರೆ. ಆದರೆ ಜನ ಸಮಸ್ಯೆಗೆ ಸಿಲುಕಿರುವ ಪ್ರದೇಶದಲ್ಲಿ ಅಭಿವೃದ್ಧಿಗೆ ಖರ್ಚು ಮಾಡುತ್ತಿಲ್ಲ. ಪ್ರಧಾನಿಗಾಗಿ ಖರ್ಚು ಮಾಡಲು ಹಣವಿದೆ, ರಾಜಕಾಲುವೆ ಮಾಡಲು, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಸರಕಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಅಭಯ ಹಸ್ತದಿಂದ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇವರು 50 ಪರ್ಸೆಂಟ್ ಅಲ್ಲ 100 ಪರ್ಸೆಂಟ್ ಹಣ ತಿಂದರೂ ಯಾವುದೇ ಈಡಿ, ಐಟಿ ದಾಳಿ ಆಗುವುದಿಲ್ಲ, ಯಾವುದೇ ಕೇಸ್ ದಾಖಲಾಗುವುದಿಲ್ಲ. ಈ.ಡಿ, ಸಿಬಿಐ, ಐಟಿ ಅಪ್ಪಿತಪ್ಪಿಯೂ ಬಿಜೆಪಿಯವರನ್ನು ಪ್ರಶ್ನಿಸುವುದಿಲ್ಲ ಎಂದು ಅವರು ಟೀಕಿಸಿದರು.
ಬೆಂಗಳೂರಿಗೆ 3 ಲಕ್ಷ ಕೋಟಿ ಡಾಲರ್ ಮೂಲಕವಾಗಿ ಆದಾಯ ಬರುತ್ತಿತ್ತು. ಆದರೆ ಈಗ ಇದು ಕೈತಪ್ಪುತ್ತಿದೆ. ಬೆಂಗಳೂರು ಮುಳುಗುತ್ತಿರುವುದರಿಂದ ಪಕ್ಕದ ರಾಜ್ಯಗಳು ಇಲ್ಲಿ ಮೀನು ಹುಡುಕುತ್ತಿದ್ದಾರೆ. ತಮಿಳುನಾಡು, ಹೈದರಾಬಾದ್ ರಾಜ್ಯಗಳು ಇಲ್ಲಿನ ಕಂಪನಿಗಳನ್ನು ಸೆಳೆಯುತ್ತಿವೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲೆ ಆಗುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಬ್ಯೂರೋ ಮಾಹಿತಿ ಪ್ರಕಾರ 2018ರಲ್ಲಿ ರಾಜ್ಯದಲ್ಲಿ ಡ್ರಗ್ಸ್ ನಿಗ್ರಹ ಕಾಯ್ದೆ ಅಡಿ 1030 ಪ್ರಕರಣ ದಾಖಲಿಸಿದ್ದು, ಕಳೆದ ಎರಡು ವರ್ಷಗಳಲ್ಲಿ 5587 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಪ್ರಕರಣಗಳ ಸಂಖ್ಯೆ ಶೇ.462ರಷ್ಟು ಹೆಚ್ಚಾಗಿದೆ ಇದು ಬಿಜೆಪಿ ಸರಕಾರದಲ್ಲಿ ಆಗಿರುವ ಏರಿಕೆ ಎಂದು ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರಿನಲ್ಲಿ ಡ್ರಗ್ಸ್ ಮೂಲೆ ಮೂಲೆಗೆ ಹರಡಲು ಸರಕಾರದ ಪ್ರಾಯೋಜಕತ್ವವೇ ಕಾರಣ. ಆರಂಭದಲ್ಲಿ ಸಿನಿಮಾ ತಾರೆಯರನ್ನು ಬಂಧಿಸಿ ಡ್ರಾಮಾ ಮಾಡಿದರು. ನಂತರ ಡ್ರಗ್ಸ್ ಹಾವಳಿ ಕಡಿಮೆಯಾಗಿದೆಯೇ ಅಥವಾ ಐದು ಪಟ್ಟು ಹೆಚ್ಚಾಗಿದೆಯೇ? ಬಿಜೆಪಿಯವರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಈ ಡ್ರಾಮ ಮಾಡಿದ್ದರು. ಸರಕಾರದವರೆ ಪರೋಕ್ಷವಾಗಿ ಡ್ರಗ್ಸ್ ಗೆ ಸಹಕಾರ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸುತ್ತಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.