ಹೆಚ್ಚುತ್ತಿರುವ ಕಾರ್ಮಿಕರ ಆತ್ಮಹತ್ಯೆ: ಯಾರು ಹೊಣೆ?

Update: 2022-09-02 04:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ) ಇತ್ತೀಚೆಗಷ್ಟೇ ಈ ದೇಶದ ಅಪರಾಧಗಳ ಅಂಕಿ ಅಂಶಗಳಿರುವ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. 2021ರಲ್ಲಿ ಈ ದೇಶದ ಅಪರಾಧಗಳ ಸಂಖ್ಯೆ ವಿಪರೀತ ಏರಿರುವುದನ್ನು ಈ ದಾಖಲೆಗಳು ಬಯಲಿಗೆಳೆದಿವೆ. ಅಪಘಾತಗಳು, ಆತ್ಮಹತ್ಯೆಗಳು, ಮಹಿಳೆಯರ ಮೇಲಿನ ದೌರ್ಜನ್ಯ, ಕಳ್ಳತನ ಇವೆಲ್ಲವುಗಳು ಭಾರತದಲ್ಲಿ ಕಂಡರಿಯದ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. 2021ರಲ್ಲಿ ದಿನಗೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಅತ್ಯಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಂಶವನ್ನೂ ಎನ್‌ಸಿಆರ್‌ಬಿ ಬಯಲುಗೊಳಿಸಿದೆ. ಈ ವರದಿ ಹೊರ ಬಿದ್ದ ದಿನವೇ, ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ವರದಿಯೂ ಮಾಧ್ಯಮಗಳ ಮೂಲಕ ಹೊರ ಬಿದ್ದಿದೆ. ದೇಶದಲ್ಲಿ ಬಡತನ ಹೆಚ್ಚುತ್ತಿರುವಾಗ, ಕೂಲಿ ಕಾರ್ಮಿಕರು ಬದುಕುವ ದಾರಿ ತಿಳಿಯದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಭಾರತದ ವ್ಯಕ್ತಿಯೊಬ್ಬ ಶ್ರೀಮಂತಿಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರುತ್ತಾನೆ ಎನ್ನುವುದು ಭಾರತದ ಹಲವು ವಾಸ್ತವಗಳನ್ನು ತೆರೆದಿಡುತ್ತದೆ.

ಭಾರತ ಮಾತ್ರವಲ್ಲ ಇಡೀ ವಿಶ್ವದ ಪಾಲಿಗೆ 2020-2021 ಸಂಕಟಗಳನ್ನು ಹೊತ್ತು ತಂದಿತ್ತು. ಆದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ನಡೆದಷ್ಟು ಸಾವು ನೋವುಗಳು ಇತರೆಡೆಗಳಲ್ಲಿ ಸಂಭವಿಸಲಿಲ್ಲ. ಎಲ್ಲ ಅನಾಹುತಗಳಿಗೂ ಸರಕಾರ ಕೊರೋನವನ್ನೇ ಹೊಣೆ ಮಾಡುತ್ತಿದೆ. ಆದರೆ ಭಾರತದಲ್ಲಿ ಕೊರೋನದಿಂದ ಸಾವು ಸಂಭವಿಸಿರುವುದಕ್ಕಿಂತ, ಇನ್ನಿತರ ರೋಗ ರುಜಿನಗಳಿಗೆ ಔಷಧಿಗಳು, ಚಿಕಿತ್ಸೆಗಳು ದೊರಕದೆ ಸಾವುಗಳು ಸಂಭವಿಸಿದವು. ಬಡವರು ‘ನಾವು ಕೊರೋನಕ್ಕೆ ಹೆದರುವುದಿಲ್ಲ, ಹಸಿವಿಗೆ ಹೆದರುತ್ತಿದ್ದೇವೆ. ನಮಗೆ ಉದ್ಯೋಗ ಕೊಡಿ’ ಎಂದು ಬಹಿರಂಗವಾಗಿಯೇ ಬೀದಿಗಿಳಿದರು. ರೋಗರುಜಿನಗಳ ಆವಾಸಸ್ಥಾನವಾಗಿರುವ ಭಾರತದಲ್ಲಿ ಬಡವರ ಪಾಲಿಗೆ ಹಸಿವಿಗಿಂತ ಕ್ರೂರವಾಗಿರುವ ರೋಗ ಇನ್ನೊಂದಿಲ್ಲ. ಆದುದರಿಂದಲೇ ಭಾರತದಲ್ಲಿ ಬಡವರು ಕೊರೋನಕ್ಕೆ ಹೆದರಲಿಲ್ಲ. ಕೊರೋನಾ ಲಸಿಕೆಯ ಬಗ್ಗೆಯೂ ಆಸಕ್ತಿ ತೋರಿಸಲಿಲ್ಲ. ಅವರು ಹೆದರಿದ್ದು ಆಸ್ಪತ್ರೆಗಳ ಕ್ರೌರ್ಯಗಳಿಗೆ. ಅಧಿಕಾರಿಗಳ ಅಮಾನವೀಯತೆಗೆ. ಪೊಲೀಸರ ಲಾಠಿ ಮತ್ತು ಬೂಟಿಗೆ. ಕೊರೋನಾದಿಂದ ಆಸ್ಪತ್ರೆಗಳಲ್ಲಿ ವಲಸೆ ಕಾರ್ಮಿಕರು ಸತ್ತಿರುವುದು ಕಡಿಮೆ. ಇದೇ ಸಂದರ್ಭದಲ್ಲಿ ರಸ್ತೆಗಳಲ್ಲಿ ಹಸಿವಿನಿಂದ, ಇನ್ನಿತರ ಅನಾರೋಗ್ಯಗಳಿಂದ ಸತ್ತರು. ಆದರೆ ಈ ಸಾವು ನೋವುಗಳ ಬಗ್ಗೆ ಈವರೆಗೆ ಸರಕಾರದ ಬಳಿ ಯಾವುದೇ ಅಂಕಿಅಂಶಗಳಿಲ್ಲ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಪ್ರತಿ ದಿನ ವಲಸೆ ಕಾರ್ಮಿಕರ ಕುರಿತಂತೆ ಭೀಕರವಾದ ವರದಿಗಳು ಮಾಧ್ಯಮಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿದ್ದವು. ಸಾವಿರಾರು ಕಿಲೋಮೀಟರ್ ನಡೆದು ಊರು ಸೇರಿದ ವಲಸೆ ಕಾರ್ಮಿಕರ ಸುದ್ದಿಗಳು ಪ್ರತೀ ದಿನ ಪ್ರಕಟವಾಗುತ್ತಿದ್ದವು. ರೈಲ್ವೆ ಹಳಿಯಲ್ಲಿ ಮಲಗಿದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದ ಭೀಕರ ಸುದ್ದಿಗೆ ದೇಶ ಬೆಚ್ಚಿ ಬಿತ್ತು.

ಈ ಸಮಯದಲ್ಲಿ ಉದ್ಯಮಗಳು ಮುಚ್ಚಿದವು ಮಾತ್ರವಲ್ಲ, ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಂಡರು. ದೇಶದ ಆರ್ಥಿಕತೆ ಹಿಂದಕ್ಕೆ ಚಲಿಸಿತು. ಇಷ್ಟೆಲ್ಲ ಆಗಿದ್ದರೂ, ದೇಶದ ಅದಾನಿ ಮತ್ತು ಅಂಬಾನಿಗಳ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಆಗಲಿಲ್ಲ. 2021ರಲ್ಲಿ ಕೃಷಿ ಕೂಲಿ ಕಾರ್ಮಿಕರು ಮತ್ತು ಕಾರ್ಮಿಕರೇ ಅತ್ಯಧಿಕವಾಗಿ ಆತ್ಮಹತ್ಯೆ ಮಾಡಿಕೊಂಡರೇನೋ ನಿಜ. ಆದರೆ ಇವರ ಆತ್ಮಹತ್ಯೆಗಳಿಗೆ ಕಾರಣಗಳೇನು? ಇಂತಹ ಆತ್ಮಹತ್ಯೆ ಪ್ರಕರಣಗಳು ‘ಜೀವನದಲ್ಲಿ ನೊಂದು ಆತ್ಮಹತ್ಯೆ’ ‘ಖಿನ್ನತೆಯಿಂದ ಆತ್ಮಹತ್ಯೆ’ ‘ಮದ್ಯ ವ್ಯಸನದಿಂದ ಆತ್ಮಹತ್ಯೆ’ ‘ಅತಿ ಸಾಲದಿಂದ ಆತ್ಮಹತ್ಯೆ’ ಎಂಬ ತಲೆಬರಹಗಳ ಮೂಲಕ ಮಾಧ್ಯಮಗಳಲ್ಲಿ ಮುಗಿದು ಹೋದವು. ಪೊಲೀಸ್ ಠಾಣೆಯ ಎಫ್‌ಐಆರ್‌ನಲ್ಲೂ ಇದರಾಚೆಗೆ ವಿವರಗಳಿಲ್ಲ. 2020-21ರಲ್ಲಿ ಎಲ್ಲರೂ ಬೇರೆ ಬೇರೆ ಕಾರಣಗಳಿಗಾಗಿ ಸಾಯುವವರೇ ಆಗಿರುವುದರಿಂದ, ನಗರಗಳಲ್ಲಿ ಸಂಭವಿಸುವ ಸಾವುಗಳಿಗೆ ಸಿಗುವ ಮಹತ್ವ ಈ ಕೂಲಿ ಕಾರ್ಮಿಕರ ಆತ್ಮಹತ್ಯೆಗೆ ಸಿಗುತ್ತಿರಲಿಲ್ಲ. ದಿನಾ ಸಾಯುವವರಿಗೆ ಅಳುವವರು ಯಾರು? ಎನ್ನುವಂತೆ . ಮೋದಿಯ ‘ಅಚ್ಛೇ ದಿನ್’ ಜಾರಿಯಲ್ಲಿರುವ ಈಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರು ಮತ್ತು ಕಾರ್ಮಿಕರ ಆತ್ಮಹತ್ಯೆಯಲ್ಲಿ ಹೆಚ್ಚಳವಾಗಲು ಕಾರಣವೇನು? ಇದರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾದವರು ಯಾರು? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ನೋಟು ನಿಷೇಧ ಮಾಡಿದ ದಿನಗಳಿಂದ ಭಾರತ ಖಿನ್ನತೆಗೆ ತಳ್ಳಲ್ಪಟ್ಟಿದೆ. ನೋಟು ನಿಷೇಧವೆನ್ನುವ ಪ್ರಮಾದ ಭಾರತದ ಆರ್ಥಿಕತೆಗೆ ಮಾಡಿದ ಅನ್ಯಾಯ ಬಹುದೊಡ್ಡದು. ಒಂದೆಡೆ ಕಪ್ಪು ಹಣವನ್ನು ಹುಡುಕಿ ತೆಗೆಯುವುದಕ್ಕೆ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಅದರ ಅರ್ಥ ಭಾರತದಲ್ಲಿ ಕಪ್ಪು ಹಣ ಇದ್ದಿರಲಿಲ್ಲ ಎಂದಲ್ಲ. ಅಕ್ರಮ ದಾರಿಯಲ್ಲಿ ಕಪ್ಪು ಹಣವೆಲ್ಲವು ಬಿಳಿಯಾದವು. ಇತ್ತ ಮಧ್ಯಮವರ್ಗದ ಜನರು ತಾವು ದುಡಿದು ಸಂಗ್ರಹಿಸಿಟ್ಟ ಹಣವನ್ನು ಕಳ್ಳರಂತೆ ಬ್ಯಾಂಕುಗಳಿಗೆ ತಂದು ಒಪ್ಪಿಸುವ ಸ್ಥಿತಿ ನಿರ್ಮಾಣವಾಯಿತು. ಮದುವೆ, ಚಿಕಿತ್ಸೆ ಎಂದು ಸಂಗ್ರಹಿಸಿಟ್ಟ ಹಣವನ್ನು ವೆಚ್ಚ ಮಾಡಲಾಗದ ಸ್ಥಿತಿ ಜನಸಾಮಾನ್ಯರದ್ದಾಯಿತು. ಇತ್ತ, ನಗರಗಳಲ್ಲಿ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡವು. ಕೃಷಿ ಸಾಲಸೋಲವೆಂದು ನಗರ ಸೇರಿದ್ದ ಕೃಷಿ ಕಾರ್ಮಿಕರು ಅತ್ತ ನಗರವೂ ಇಲ್ಲದೆ ಇತ್ತ ಊರಿಗೂ ಹೋಗಲಾರದೆ ಅತಂತ್ರರಾದರು. ಉದ್ಯಮಗಳು ಒಂದೊಂದಾಗಿ ಮುಚ್ಚತೊಡಗಿದವು. ನಿರುದ್ಯೋಗಳು ಹೆಚ್ಚಿದವು. ದೊಡ್ಡ ಸಂಖ್ಯೆಯಲ್ಲಿ ಯುವಕರು ಮಾನಸಿಕವಾಗಿ ಕುಗ್ಗಿ ಹೋದರು. ನೋಟು ನಿಷೇಧದ ಬೆನ್ನಿಗೇ ಅಪ್ಪಳಿಸಿದ್ದು ಕೊರೋನ. ಇದರ ಮುಂಜಾಗ್ರತೆಗಾಗಿ ಹಮ್ಮಿಕೊಂಡ ‘ಲಾಕ್‌ಡೌನ್’ ಅಳಿದುಳಿದ ಆರ್ಥಿಕತೆಯನ್ನು ಸರ್ವನಾಶ ಮಾಡಿ ಹಾಕಿತು. ಉದ್ಯಮಿಗಳು ಸಾಲು ಸಾಲಾಗಿ ಆತ್ಮಹತ್ಯೆ ಮಾಡಬೇಕಾದ ಸ್ಥಿತಿ ನಿರ್ಮಾಣವಾದದ್ದು ಇದೇ ಅವಧಿಯಲ್ಲಿ. ಉದ್ಯಮಿಗಳ ಸ್ಥಿತಿಯೇ ಹೀಗಾದರೆ, ಸ್ಥಗಿತಗೊಂಡ ಆ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರ ಸ್ಥಿತಿ ಏನಾಗಬೇಕು? 2021ರಲ್ಲಿ ಆತ್ಮಹತ್ಯೆ ಹೆಚ್ಚುವುದಕ್ಕೆ ಕಾರಣ ಸರಕಾರದ ತಲೆಬುಡವಿಲ್ಲದ ಆರ್ಥಿಕ ನೀತಿಗಳು. ಮುಂದಾಲೋಚನೆಗಳಿಲ್ಲದ ಲಾಕ್‌ಡೌನ್‌ಗಳು. ಜನಸಾಮಾನ್ಯರು ಆತ್ಮಹತ್ಯೆ ಮಾಡಿಕೊಂಡರು ಎನ್ನುವುದಕ್ಕಿಂತ, ಸರಕಾರವೇ ಅವರನ್ನು ಆತ್ಮಹತ್ಯೆಗೆ ದೂಡಿತು ಎಂದು ಹೇಳಬಹುದು.

ದೇಶದ ಆರ್ಥಿಕತೆ ಕುಸಿದು ಹೋಗುತ್ತಿದ್ದ ಹಾಗೆಯೇ ಅದು ನೇರ ಪರೋಕ್ಷ ಪರಿಣಾಮಗಳನ್ನು ಜನರ ಬದುಕಿನ ಮೇಲೆ ಉಂಟು ಮಾಡುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯಗಳೂ ಈ ಅವಧಿಯಲ್ಲಿ ಹೆಚ್ಚಾಯಿತು. ಕೌಟುಂಬಿಕ ಜಗಳಗಳು ಅಂತಿಮವಾಗಿ ಮಹಿಳೆಯರ ಮೇಲಿನ ದೌರ್ಜನ್ಯವಾಗಿ ಮುಗಿದು ಹೋಗುತ್ತದೆ. ಮನೆಯ ಅಗತ್ಯಗಳನ್ನು ಪೂರೈಸಲು ಯಜಮಾನ ವಿಫಲವಾದಾಗ ಮನೆಯೊಳಗೆ ಜಗಳಗಳಲ್ಲದೆ ಇನ್ನೇನು ಸಂಭವಿಸಲು ಸಾಧ್ಯ? ನಿರುದ್ಯೋಗಿಯಾಗಿ ಮ ನೆಯಲ್ಲಿ ಕುಳಿತ ಯಜಮಾನ, ಶಾಲೆಯ ಶುಲ್ಕ ತೆರಲು ಸಾಧ್ಯವಾಗದೆ ಮನೆಯಲ್ಲೇ ಉಳಿದ ಮಕ್ಕಳು, ದೈನಂದಿನ ದಿನಸಿಗಳನ್ನು ಕೊಳ್ಳಲು ಸಾಧ್ಯವಾಗದೇ ಅಳುತ್ತಿರುವ ಕಂದಮ್ಮಗಳು ಇವೆಲ್ಲವೂ ಅಂತಿಮವಾಗಿ ಕೌಟುಂಬಿಕ ಜಗಳಗಳಿಗೆ ಕಾರಣವಾಗಿ, ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಕೊನೆಯಾಗುತ್ತದೆ. 2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ. 15ರಷ್ಟು ಏರಿಕೆಯಾಗಿವೆ. ಎನ್‌ಸಿಆರ್‌ಬಿ ಬಹಿರಂಗ ಪಡಿಸಿರುವ ಅಪರಾಧಗಳ ಅಂಕಿಸಂಕಿಗಳು ದೇಶ ಎತ್ತ ಸಾಗುತ್ತಿದೆ ಎನ್ನುವುದನ್ನು ಹೇಳಿದೆ. ಆದರೆ ಸರಕಾರ ಮಾತ್ರ, ಇದನ್ನೇ ತನ್ನ ಸಾಧನೆಯಾಗಿ ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಒಂದೆಡೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿಬಾತ್‌ನಲ್ಲಿ, ‘ಭಜನೆ ಭಕ್ತಿಗೀತೆಗಳಿಂದ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು’ ಎಂದು ಸಲಹೆ ನೀಡುತ್ತಿದ್ದಾರೆ. ಮೋದಿ ಭಜನೆಯಿಂದ ಅಪೌಷ್ಟಿಕತೆಯನ್ನು, ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ, ಬದಲಿಗೆ ಅದು ಹೆಚ್ಚುತ್ತದೆ ಎನ್ನುವುದನ್ನು ಎನ್‌ಸಿಆರ್‌ಬಿ ವರದಿ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News