ನನ್ನೊಂದಿಗಿನ ಎಲ್. ಕೃಷ್ಣಪ್ಪನವರು

Update: 2022-09-02 06:16 GMT

ಇಂದು ಬೆಂಗಳೂರಿನಲ್ಲಿ ಹಿರಿಯ ರಂಗಕರ್ಮಿ ಎಲ್. ಕೃಷ್ಣಪ್ಪನವರ 75ರ ಅಭಿನಂದನಾ ಸಮಾರಂಭ ಹಾಗೂ ‘ಕೃಷ್ಣಗಾರುಡಿ’ ಕೃತಿ ಲೋಕಾರ್ಪಣೆಯಾಗಲಿದೆ. 

ನಮ್ಮಲ್ಲಿ ಆರ್.ನಾಗೇಶ್, ಸಿ.ಜಿ.ಕೆ., ಕೃಷ್ಣಪ್ಪನವರಂತಹ ಅನೇಕ ನಿರ್ದೇಶಕರುಗಳನ್ನು ಬೇರೆ ಬೇರೆ ಊರುಗಳಲ್ಲಿ ಈಗಲೂ ಕಾಣುತ್ತಿರುತ್ತೇವೆ. ಇವರ್ಯಾರೂ ಶೈಕ್ಷಣಿಕವಾಗಿ ರಂಗಭೂಮಿಯನ್ನು ಕಲಿತು ಬಂದವರಲ್ಲ. ಆದರೆ ರಂಗಭೂಮಿಯಲ್ಲಿ ತೊಡಗಿಕೊಂಡೇ ರಂಗಭೂಮಿಯನ್ನು ಅರಿತವರು, ರಂಗಭೂಮಿಯಲ್ಲಿ ನುರಿತವರು. ಶೈಕ್ಷಣಿಕವಾಗಿ ಅಭ್ಯಸಿಸಿ, ಅಧ್ಯಯನ ಮುಗಿಸಿಕೊಂಡು ಬಂದ ರಾಷ್ಟ್ರೀಯ ನಾಟಕಶಾಲೆಯ ಅನೇಕಾನೇಕ ಪ್ರತಿಭಾನ್ವಿತರು ಇಂದಿಗೂ ಶಾಬ್ದಿಕ-ಭಾಷಾ ಸಂವಹನದಲ್ಲಿ ಪರದಾಡುತ್ತಿರುವುದನ್ನು ನೋಡುತ್ತಿರುತ್ತೇವೆ. ವಿಷಯ ಸ್ಪಷ್ಟತೆ ಇಲ್ಲದ ವ್ಯಕ್ತಿಗಳು ಅಭಿವ್ಯಕ್ತಿಗಾಗಿ ಪರದಾಡುವುದು ಹಾಗೂ ವಿಷಯದಲ್ಲಿ ದೃಢಸ್ಪಷ್ಟತೆ ಇದ್ದೂ ಅಭಿವ್ಯಕ್ತಿಗಾಗಿ ಪರದಾಡುವುದು ವಿಭಿನ್ನವೇ. ನಮ್ಮಲ್ಲಿ ನುರಿತ ಅನೇಕರು ಸ್ಪಷ್ಟತೆಯ ಅರಿವಿರುವವರು. ಭಾಷಾ ಅಭಿವ್ಯಕ್ತಿಯಲ್ಲಿ ಕುಂಟುವವರಾಗಿರುತ್ತೇವೆ. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪನವರು ನನಗಂತೂ ಬಹಳ ಮುಖ್ಯರಾಗಿ ಕಾಣುತ್ತಾರೆ. ಅವರ ರಂಗಾಲೋಚನೆಯ ಕ್ರಮದಲ್ಲಿ ಕುಂಟುವಿಕೆಯಿಲ್ಲ. ಅದಾಗಲೇ ಎಷ್ಟೋ ಬಾರಿ ಶೀಘ್ರ ತೀರ್ಮಾನವನ್ನು ಕೈಗೊಂಡು ತಮ್ಮ ಯೋಚನಾ ಲಹರಿಯ ವೇಗ ಮತ್ತು ತೀವ್ರತೆಯನ್ನು ಸಂವಹಿಸಿದವರು.

ಎಲ್. ಕೃಷ್ಣಪ್ಪನವರು ಇಂದಿನವರೆಗೂ ಸದಾ ರಂಗಕಾರ್ಯೋನ್ಮುಖಿಯಾಗಿಯೇ ಇರುವವರು. ಇವರ ಎಲ್ಲಾ ಶಿಬಿರಗಳಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುವ ತಹತಹಿಕೆಯವನು ನಾನು. ಹೀಗಾಗಿ ವರ್ಷವಿಡೀ ಪದೇ ಪದೇ ಮುಖಾಮುಖಿಯಾಗುತ್ತಿರುತ್ತೇವೆ.

  

 ಎಂಬತ್ತನಾಲ್ಕರಲ್ಲಿ ಕೃಷ್ಣಪ್ಪನಿರ್ದೇಶಿತ ಸಿದ್ಧಗಂಗಯ್ಯನವರ ‘ತಿರುಕರಾಜ’ ಪ್ರಯೋಗವನ್ನು ನೋಡಿದ್ದೆ. ದೊಡ್ಡಗುಂಪಿನ ಪಾತ್ರಸ್ಥಾಪನೆ ಮತ್ತು ರಂಗಸ್ಥಳದ ಚಲನವಲನಗಳನ್ನು ಅನುಭವೀ ನಿರ್ದೇಶನದ ಚಕಿತತೆಯೊಂದಿಗೆ ಕೃಷ್ಣಪ್ಪನವರು ನಿರ್ದೇಶಕರಾಗಿ ಕುತೂಹಲವನ್ನು ಸೃಜಿಸಿದ್ದರು. ಮುಂದೆ ಎಂ.ಪಿ.ಪ್ರಕಾಶ್ ಅನುವಾದಿತ ‘ಸೂರ್ಯಶಿಕಾರಿ’ ನೋಡಿದಾಗ ಪಕ್ಕಾ ಆಧುನಿಕ ವೃತ್ತಿನಿರತ ನಿರ್ದೇಶನವನ್ನು ತೋರಿದ್ದು ಯಾರೂ ಅಲ್ಲಗಳೆಯುವಂತಿಲ್ಲ. ಸ್ವತಹ ಪ್ರಕಾಶ್‌ರವರೇ ‘ನಾಟಕದ ವಸ್ತುವನ್ನು ಬಿಡಿ, ಪ್ರಯೋಗದ ಬಗ್ಗೆ ಹೇಳಿ’ ಎಂದಾಗ ಇದನ್ನೇ ಹೇಳಿದ್ದೇನೆ. ಮುಕ್ತಾಯದ ಹಂತದಲ್ಲಂತೂ ಪ್ರಯೋಗಶೈಲಿಯು ಕಾವ್ಯಾತ್ಮಕತೆಯನ್ನು ಕಂಡುಕೊಂಡಿದ್ದಾಗ ಮೆಚ್ಚಿಕೊಂಡಿದ್ದೇನೆ; ಮೆಚ್ಚುಗೆ ಸೂಚಿಸಿಯೂ ಇದ್ದೇನೆ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ಯನ್ನು ಕೃಷ್ಣಪ್ಪನಿರ್ದೇಶನದಲ್ಲಿ ಎರಡು ತಂಡಗಳ ಪ್ರಯೋಗಗಳನ್ನು ನೋಡಲು ಸಿಕ್ಕಿತ್ತು. ಎರಡೂ ಪ್ರಯೋಗಗಳು ವಿಭಿನ್ನ ಪ್ರಕಾರಗಳನ್ನೇ ಹೊಂದಿದ್ದು ಕೂಡಾ ಒಬ್ಬ ಸೂಕ್ಮನಿರ್ದೇಶಕನ ಸಹಜ ಮನಸ್ಸನ್ನು ಪ್ರೌಢಮಟ್ಟದಲ್ಲಿ ಸಾಕಾರಗೊಳಿಸಿದ್ದವು. ಶಿವಮೊಗ್ಗದಲ್ಲಿ ‘ಅಭಿನಯ’ ತಂಡದವರ ‘ಪೀಠಾರೋಹಣ’ ಹಾಗೂ ಚಿತ್ರದುರ್ಗದ ಮದಕರಿ ಕಾಲೇಜಿನ ‘ಏಕಲವ್ಯ’ ಪ್ರಯೋಗಗಳು ಕೂಡಾ ನಿರ್ದೇಶನದಲ್ಲಿ ಯಾವುದೇ ವೃತ್ತಿನಿರತ ನಿರ್ದೇಶಕನ ಜಾಣ್ಮೆಗೆ ಕುಂದಿಲ್ಲದಂತೆ ಕಂಡುಬಂದಿದ್ದವು. ಹಾಗಾಗಿ ಕೃಷ್ಣಪ್ಪನವರ ನಿರ್ದೇಶನ ಕಾಯಕವನ್ನು ಅವಲೋಕಿಸುತ್ತಾ ಮುಂದುವರಿದಿದ್ದೆ. ಪ್ರತಿಮಾ ತಂಡದ ‘ಪಂಜರಶಾಲೆ’ ಸೋಜಿಗವನ್ನೇ ಸೃಷ್ಟಿಮಾಡಿತ್ತು. ಮುಂದೆ 2017,2018,2019ರಲ್ಲಿ ಬೆಂಗಳೂರು (ಗ್ಯಾಸ್)ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಟ್ಟಿಕೊಂಡು ಬಂದ ‘ಪೋಲಿಕಿಟ್ಟಿ, ಹುತ್ತವ ಬಡಿದರೆ ಮತ್ತು ತಬರನಕತೆ’ ಪ್ರಯೋಗಗಳು ಕೂಡಾ ಪ್ರಾಯೋಗಿಕತೆಯಲ್ಲಿ ತಾಜಾತನವನ್ನು ಮೈಗೂಡಿಸಿಕೊಂಡಿದ್ದು ಆಶ್ಚರ್ಯವೇನಲ್ಲ. ಈ ಎಲ್ಲಾ ಪ್ರಯೋಗಗಳ ಪೂರ್ವಭಾವಿಯಾಗಿ ನಾನು ಶಿಬಿರಗಳನ್ನು ಮಾಡುವಲ್ಲಿ ಸಹಕರಿಸಿದ್ದೆ; ತಾಲೀಮಿನ ಕೃಷ್ಣಪ್ಪನವರನ್ನು ಕೇವಲ ಅವಲೋಕಿಸುತ್ತಾ ಹೊರಗಿನಿಂದಲೇ ಒಪ್ಪಿ ಕೊಂಡು ಬಂದಿದ್ದೇನೆ. ಇತ್ತೀಚಿಗೆ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ರಂಗಶಾಲೆಯಲ್ಲಿ ಲಂಕೇಶರ ತೆರೆಗಳನ್ನ್ನು, 70 ದಾಟಿದ ಕೃಷ್ಣಪ್ಪನವರು 40ರ ಹರೆಯದ ಶಕ್ತಿಮಾನರಾಗಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದನ್ನೂ ನೋಡಿದ್ದೇನೆ. ಇಂತಹ ನಿರ್ದೇಶನದ ಸೂಕ್ಷ್ಮಜ್ಞ ಎಲ್. ಕೃಷ್ಣಪ್ಪನವರು ಅವರಿಗಿಂತ ಹಿರಿಯರಿರುವ ಎಚ್.ವಿ.ವೆಂಕಟಸುಬ್ಬಯ್ಯನವರಂತೆ ನನ್ನ ಅನೇಕ ಪ್ರಯೋಗಗಳಿಗೆ ಬೆಳಕನಿತ್ತಿದ್ದನ್ನೂ ಮರೆಯಲಾರೆ. ಅಭಿನಯಕಲೆಯ ಸಿದ್ಧತೆಯ ಬಗ್ಗೆ ‘ವೈಜ್ಞಾನಿಕ ಹಾದಿ’ ಇದೆ ಎಂಬುದಾಗಿ ಮೊತ್ತಮೊದಲ ಬಾರಿ ಕಾನ್‌ಸ್ಟಾಂಟಿನ್ ಸ್ಟ್ಯಾನಿಸ್ಲಾವ್‌ಸ್ಕಿ ತಮ್ಮ ‘ಆ್ಯನ್ ಆ್ಯಕ್ಟರ್ ಪ್ರಿಪೇರ್ಸ್‌’ನಲ್ಲಿ ಪ್ರತಿಪಾದಿಸುತ್ತಾರೆ. ಈ ಇಡೀ ಹೊತ್ತಗೆಯು ಈ ಪ್ರತಿಪಾದನೆಗಾಗಿಯೇ ಇರುತ್ತದೆ! ಇವರ ಪ್ರತಿಪಾದನೆಗೂ ಮುಂಚಿತವಾಗಿ ಬಹುವಾಗಿ ನಂಬಿಕೆಯಲ್ಲಿ ಬಳುವಳಿಗೊಂಡು ಬಂದಿದ್ದು ‘ಪ್ರತಿಭೆ’ಯ ನಿರ್ಮಿತಿಯು ‘ಹುಟ್ಟು ಮತ್ತು ಬೆಳವಣಿಗೆಯ ಪರಿಸರ’ದಿಂದಾಗಿ ಎಂಬುದಾಗಿಯೇ. ಆದ್ದರಿಂದಲೇ ಇದಲ್ಲದ ‘ವೈಜ್ಞಾನಿಕ ಹಾದಿಯೂ ಇದೆ’ ಎಂಬುದು ಪ್ರತಿಪಾದನೆಗೆ ಆಸ್ಪದಗೊಂಡಿರುತ್ತದೆ. ಅದೇ ಕಾನ್‌ಸ್ಟಾಂಟಿನ್ ಸ್ಟ್ಯಾನಿಸ್ಲಾವ್‌ಸ್ಕಿಯವರು ‘ಹುಟ್ಟಿನಿಂದಲೂ ಪ್ರತಿಭೆ’, ಹುಟ್ಟಿನಿಂದಲೂ....ಹುಟ್ಟು..ಹುಟ್ಟು ಎಂಬವುದನ್ನು ನಿರಾಕರಿಸದೆ ಅದೇ ಹೊತ್ತಗೆಯಲ್ಲಿ ದಾಖಲಿಸಿಯೂ ಇರುತ್ತಾರೆ.

ಈ ಹುಟ್ಟಾ ಪ್ರತಿಭೆಯ ಕೃಷ್ಣಪ್ಪನವರು ರಂಗಭೂಮಿಯಲ್ಲೂ ಅಸಂಖ್ಯಾತ ಹುಟ್ಟಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ತಮ್ಮ ಕಾಯಕವನ್ನು ಇನ್ನೂ ಅನೇಕ ದಶಕಗಳ ಕಾಲ ಮುಂದುವರಿಸಿಕೊಂಡು ಹೋಗಲಿ ಎಂದೇ ಹಾರೈಸುತ್ತೇನೆ. ಶ್ರೀರಂಗರು ಹೇಳಿದಂತೆ ‘‘.....ಆದರ ಅವನ ಒಳಗಿನ ಕಲಾವಿದ ದೊಡ್ಡಾಂವ ಅದಾನ. ಅದಕ ಹೀಂಗ ಕ್ರಿಯೇಟೀವ್ ಆಗಿ ಕೆಲ್ಸ ಹಮ್ಮಿಕೊತಾನ’’ ಎಂದು ಶ್ರೀರಂಗರನ್ನೇ ಪುನರ್ ಉಲ್ಲೇಖಿಸುವುದರಲ್ಲಿ ಈ ರಂಗನಿರ್ದೇಶಕನ ವಿಷಯದಲ್ಲಿ ಅಮಿತ ಸೂಕ್ತತೆಯೇ ಇದೆ.

Writer - ಗೋಪಾಲಕೃಷ್ಣ ನಾಯರಿ

contributor

Editor - ಗೋಪಾಲಕೃಷ್ಣ ನಾಯರಿ

contributor

Similar News