×
Ad

VIDEO- ದಲಿತರಲ್ಲಿನ ‘ಮನು ಸಿದ್ಧಾಂತ' ತೊಲಗಿದರೆ, ಅಂಬೇಡ್ಕರ್ ಶ್ರಮ ಸಾರ್ಥಕ: ರಮಾಬಾಯಿ ಅಂಬೇಡ್ಕರ್

Update: 2022-09-04 23:03 IST

ಬೆಂಗಳೂರು, ಸೆ.4: ‘ನಮ್ಮ ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ. ದಲಿತ ಸಮುದಾಯದವರ ತಲೆಯಲ್ಲಿ ಇನ್ನೂ ಜೀವಂತವಾಗಿರುವ ಮನು ಸಿದ್ಧಾಂತ ತೊಲಗಿ, ಮಹಿಳೆಯರಿಗೆ ಸೂಕ್ತ ಸ್ಥಾನ ದೊರಕುವ ವ್ಯವಸ್ಥೆ ಬಂದಾಗ ಮಾತ್ರ ಅಂಬೇಡ್ಕರ್ ಪಟ್ಟ ಶ್ರಮ ಸಾರ್ಥಕವಾಗುತ್ತದೆ’ ಎಂದು ಡಾ.ಅಂಬೇಡ್ಕರ್ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್ ಆನಂದ್ ತೇಲ್ತುಂಬ್ಡೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಗಾಂಧಿಭವನದಲ್ಲಿ ‘ತಮಟೆ-ಕರ್ನಾಟಕ ಮತ್ತು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಆಯೋಜಿಸಿದ್ದ ಲೇಖಕಿ ದು.ಸರಸ್ವತಿ ಅನುವಾದಿಸಿದ ‘ನಾವೂ ಇತಿಹಾಸ ಕಟ್ಟಿದೆವು' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘1989ರಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾಗಿದ್ದ ಪುಸ್ತಕವನ್ನು 2022ರಲ್ಲಿ ದು.ಸರಸ್ವತಿಯವರು ಅನುವಾದಿಸುವ ಮೂಲಕ ಈ ಕೃತಿ ಕನ್ನಡಕ್ಕೆ ಬರುತ್ತಿರುವುದು ಸಂತೋಷದ ಸಂಗತಿ. ಸಮುದಾಯದಲ್ಲಿ ಪುರುಷ ಪ್ರಾಬಲ್ಯವನ್ನು ಅಂಬೇಡ್ಕರ್ ಅರಿತಿದ್ದರಿಂದಲೇ ದಲಿತ ಮಹಿಳೆಯರಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಿದ್ದರು. 1924, 1927ರಲ್ಲಿ ನಡೆದ ಮಹಾ ಸತ್ಯಾಗ್ರಹ ಸೇರಿ ಆನಂತರ ನಡೆದ ಎಲ್ಲ ಚಳುವಳಿಗಳಲ್ಲಿ ಮಹಿಳೆಯರನ್ನು ಪಾಲ್ಗೊಳ್ಳುವಂತೆ ಮಾಡಲು ಪಟ್ಟ ಪಾಡನ್ನು ಈ ಕೃತಿ ವಿವರಿಸುತ್ತದೆ’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರು ದಮನಿತ ವರ್ಗಗಳ ಚಳವಳಿಯಲ್ಲಿ ಮಹಿಳಾ ಸುಧಾರಣೆಗೆ ಬಹಳ ಒತ್ತು ನೀಡಿದ್ದರು. ಈ ಪುಸ್ತಕ ಮಹಿಳೆಯರನ್ನು ಚಳವಳಿಯ ಭಾಗವಾಗಿ ಮಾಡಲು ಬಾಬಾಸಾಹೇಬರು ಪಟ್ಟ ಪಾಡಿನ ಬಗ್ಗೆ ತಿಳಿಸುತ್ತದೆ. ಅದೇ ರೀತಿಯಲ್ಲಿ ಬಾಬಾಸಾಹೇಬರು ಮುನ್ನಡೆಸಿದ ಚಳವಳಿಯಲ್ಲಿ ಭಾಗವಹಿಸಿದ್ದ ಮಹಿಳೆಯರ ಅನುಭವ ಕಥನಗಳನ್ನೂ ಒಳಗೊಂಡಿದೆ’ ಎಂದು ಅವರು ನುಡಿದರು.

‘ಶೋಷಿತ ಸಮುದಾಯಗಳ ಮಹಿಳೆಯರು ಚಳವಳಿಯಲ್ಲಿ ಭಾಗವಹಿಸುವಾಗ ಅವರ ಉಡುಗೆ-ತೊಡುಗೆಗಳು ಜಾತಿ ಸೂಚಕವಾಗದ ರೀತಿಯಲ್ಲಿ ಅವರನ್ನು ಮಾನಸಿಕವಾಗಿ ಸ್ವಾಭಿಮಾನಿಗಳಾಗಿ ಮಾಡುವಲ್ಲಿ ಬಾಬಾಸಾಹೇಬರು ಪ್ರೇರೇಪಣೆ ನೀಡಿದ್ದಾರೆ. ಮಹಿಳೆಯರು ಶಿಕ್ಷಣ ಹೊಂದಬೇಕು ಎಂದು ಪ್ರಯತ್ನಿಸಿದ್ದ ಅಂಬೇಡ್ಕರ್‍ರ ದಾರಿಯಲ್ಲಿ ನಾವು ಇಂದು ಸಾಗಬೇಕಾಗಿದೆ’ ಎಂದು ಅವರು ಕರೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News