ಕರುಣಾಮಯಿ ಮದರ್ ತೆರೇಸಾ

Update: 2022-09-05 05:26 GMT

ಆ ಪಂಥ ಈ ಪಂಥ ಬರೀ ಸುಳ್ಳು, ಮಾನವತೆಯನ್ನು ಪ್ರೀತಿಸಿದವರು ಯಾವ ಪಂಥವನ್ನು ಕಟ್ಟಿಕೊಂಡರೆ ಏನು ಪ್ರಯೋಜನ?

ಒರತೆಗಳ ಕಂಡಿತು ಕೆಲವರಿಗೆ

ಬಾವಿಯ ತೋಡೆಂಬರು !

ಅರವಟ್ಟಿಗೆ ಛತ್ರವು ತಮ್ಮದೆಂದರು!

ಎಲೆಪೈರು ಐದದಿರೆ ಸುರಿವ ಮಳೆ ಸುರಿಸದಿದ್ದರೆ

ಅವರೇತರಲ್ಲಿ ನೀಡುವರಯ್ಯ ರಾಮನಾಥ!

ಇದು ಜೇಡರ ದಾಸಿಮಯ್ಯನವರ ಪ್ರಸಿದ್ಧವಾದ ವಚನ. ತೊರೆ ಎಂಬುದು ಯಾರ ಕಟ್ಟಿಗೂ ನಿರ್ಬಂಧಕ್ಕೂ ಒಳಗಾಗದೆ ತನ್ನಿಷ್ಟಕ್ಕೆ ಹರಿಯುತ್ತಿರುವ ಪ್ರವಾಹ. ಇದು ಜಗತ್ತಿನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದು. ಇದರಲ್ಲಿ ಯಾರು ತಮ್ಮ ಹಕ್ಕು ಸ್ಥಾಪನೆ ಮಾಡುವಂತಿಲ್ಲ. ಬಾಯಾರಿದವರಿಗೆ ಯಾರಿಗೆ ಬೇಕಾದರೂ ಇದರ ನೀರನ್ನು ಬಳಸಬಹುದು. ಆದರೆ ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಆ ತೊರೆಯನ್ನು ತನ್ನ ಮನೆಯ ಬಾವಿಯನ್ನಾಗಿ ಮಾಡಿಕೊಳ್ಳುತ್ತಾನೆ. ಬಾವಿಯು ಕೇವಲ ಒಂದು ಮನೆಗೆ, ಮನೆಯ ಯಜಮಾನನಿಗೆ ಸೇರಿದ್ದು. ಅದು ಪೂರ್ತಿ ಆತನ ಯಾಜಮಾನ್ಯತೆಗೆ ಸೇರಿದ್ದು.

ನಮ್ಮ ದೇಶದಲ್ಲಿ ಹುಟ್ಟಿದ ಇಲ್ಲವೆ ಬೇರೆ ದೇಶದಲ್ಲಿ ಹುಟ್ಟಿ ಇಲ್ಲಿ ಮಾನವೀಯತೆಗಾಗಿ ಹಗಲಿರುಳು ದುಡಿದ ಅನೇಕ ಮಾನವತಾವಾದಿ ದಾರ್ಶನಿಕರು ಒಂದು ಕಾಲದಲ್ಲಿ ತೊರೆಯಾ ಗಿದ್ದರು. ಇವತ್ತಿನ ಭಾರತೀಯ ಸಾಂಸ್ಕೃತಿಕ ರಾಜಕಾರಣ ಅವರನ್ನು ಬಾವಿಗಳನ್ನಾಗಿ ಮಾಡಿದೆ. ಪ್ರತಿಯೊಬ್ಬರಿಗೂ ಒಂದೊಂದು ಜಾತಿ, ಧರ್ಮಕ್ಕೆ ಲೇಬಲ್ ಮಾಡಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ಗಳು, ಮದರ್ ತೆರೇಸಾ ಮಾನವತೆಯ ತೊರೆಗಳಾಗಿದ್ದವರು. ಜಾತಿ ಧರ್ಮದ ಪಟ್ಟ ಅಂಟಿಸಿಕೊಂಡು ಜಾತಿ ಧರ್ಮದ ಗುತ್ತಿಗೆ ತೆಗೆದುಕೊಂಡ ಜನರು ಅವರನ್ನು ತಮ್ಮ ಬಾವಿಗಳು ಅಂತ ಭಾವಿಸಿದ್ದಾರೆ.

ಕರುಣಾಮಯಿ ಮಾನವತೆಯ ಆಗರ ಮದರ್ ತೆರೇಸಾ, ಅವರ ಮೂಲ ನಾಮಧೇಯ ಆಗ್ನೆಸ್ ಗೊಂಕ್ಷಾ ಜೊಯೊಕ್ಲೋ, ಡಾರ್ಜಿಲಿಂಗ್‌ನಲ್ಲಿ ಶಾಲಾ ಶಿಕ್ಷಕಿಯಾಗುವಾಗ ಫ್ರೆಂಚ್ ಸಂತ ಮಹಿಳೆ ಲೇಡಿ ತೆರೇಸಾ ಹೆಸರಿನಲ್ಲಿ ತೆರೇಸಾ ಎಂಬ ಅಭಿದಾನ ದೊರೆಯುತ್ತದೆ. ತೆರೇಸಾ ಹುಟ್ಟಿದು ಆಗಸ್ಟ್ 26, 1910 ರಂದು. ಈಕೆಗೆ ಹೆತ್ತವರಿಟ್ಟ ಹೆಸರು ಆಗ್ನೆಸ್ ಗೊಂಕ್ಲಾ. ಆಗ್ನೆಸ್ ಎಂದರೆ ಪರಿಶುದ್ಧ ವೆಂದು ಗೊಂಕ್ಲಾ ಎಂದರೆ ಹೂಮೊಗ್ಗು ಎಂದರ್ಥ. 1929 ನೇ ಜನವರಿ 6 ರಂದು ಭಾರತದ ನೆಲದ ಮೇಲೆ ಕಾಲಿಟ್ಟ ಆಗ್ನೆಸ್ ಡಾರ್ಜಿಲಿಂಗ್‌ನ ಕಾನ್ವೆಂಟ್‌ಗೆ ಸೇರಿ ಧ್ಯಾನ, ಚಿಂತನೆಯಲ್ಲಿ ಮತ್ತು ಭಾರತೀಯ ಭಾಷೆಗಳನ್ನು ಕಲಿಯುವುದರಲ್ಲಿ ಸಮಯ ಕಳೆದರು. 1931 ಮೇ ತಿಂಗಳಲ್ಲಿ ವೃತ್ತಿ ದೀಕ್ಷೆಯ ಮೊದಲ ಹಂತ ಮುಗಿದ ಕೂಡಲೇ ಭಗಿನಿ ತೆರೇಸಾ ಆಗಿ ತನ್ನ ಬದುಕನ್ನು ಬಡ ಜನರ ಸೇವೆಗೆ ಮುಡಿಪಾಗಿಟ್ಟರು.

ಬಡವರಲ್ಲಿ ಕಡು ಬಡವರಿಗಾಗಿ ಕೆಲಸ ಮಾಡಬೇಕೆಂದು ಬಯಸಿದ್ದ ತೆರೇಸಾ ಕೋಲ್ಕತಾದ ಕೊಳೆಗೇರಿಗಳನ್ನು ಆಯ್ಕೆ ಮಾಡಿದರು. ಆ ಕೊಳೆಗೇರಿಗಳು ಬಡವರು, ರೋಗಿಗಳು, ಅಂಗವಿಕಲರು ಮತ್ತು ಎಲ್ಲರಿಂದಲೂ ತ್ಯಜಿಸಲ್ಪಟ್ಟ ವರಿಂದಲೇ ತುಂಬಿತ್ತು. ಅಲ್ಲಿಯೇ ನೆಲೆ ನಿಂತ ಕರುಣಾಮಯಿ ಮದರ್ ತೆರೇಸಾ ಬಡವರ ಅನಾಥರ ಪಾಲಿಗೆ ದೇವತೆಯಾಗಿ ಕಂಡರು. ಅಲ್ಲಿಯ ಬೀದಿ ಮಕ್ಕಳಿಗೆ ಅಮ್ಮನ ಪ್ರೀತಿ ಕೊಟ್ಟರು. ಬೀದಿ ಬದಿಯಲ್ಲಿ ಮಣ್ಣಿನ ಮೇಲೆಯೆ ಅಕ್ಷರಭ್ಯಾಸದ ಪಾಠ ಮಾಡಿದರು. ತೆರೇಸಾರ ಪ್ರಾಯೋಗಿಕ ಪ್ರಯತ್ನ ಬಹುಬೇಗನೆ ಯಶಸ್ವಿಯಾಯಿತು. ಕೋಲ್ಕತಾದ ಎಲ್ಲ ಕೊಳೆಗೇರಿಗಳಲ್ಲಿ ಶಾಲೆಗಳನ್ನು ತೆರೆದು ಕೊಳೆಗೇರಿಯ ಎಲ್ಲ ಬಡ ಮಕ್ಕಳಿಗೆ ಮಾತೆಯಾಗಿ ಕಂಡು ಬಂದರು.

ತೆರೇಸಾರ ಸೇವಾ ಕಾರ್ಯಗಳಿಗೆ ಹಲವರಿಂದ ಸ್ವಯಂ ಪ್ರೇರಿತ ನೆರವು ಸಹಕಾರಗಳು ದೊರೆತಾಗ, ಅಕ್ಟೋಬರ್ 7, 1950 ರಲ್ಲಿ ಮಿಶನರೀಸ್ ಆಫ್ ಚಾರಿಟಿ ಸ್ಥಾಪನೆಯಾಯಿತು. ಬಹು ಬೇಗ ಭಗಿನಿಯರ ಸಂಖ್ಯೆ ಹೆಚ್ಚಾಯಿತು. 1952 ನೇ ಇಸವಿ ಆಗಸ್ಟ್ 22 ರಂದು ನಿರ್ಮಲ ಹೃದಯ ಸೇವಾ ಕೇಂದ್ರ ಆರಂಭಿಸಿದರು. ಅಲ್ಲಿ ಸೇವೆಯಲ್ಲಿ ನಿರತರಾಗಿದ್ದಾಗ ಮಾನವೀಯತೆಯನ್ನು ಮರೆತ ಜನರು ಮತಾಂತರದ ಆರೋಪವನ್ನು ಹೊರಿಸಿ ಅವರನ್ನು ದೇಶದಿಂದ ಓಡಿಸುವ ಪ್ರಯತ್ನ ಕೂಡ ಮಾಡಿದರು. ಇದನ್ನು ಪರೀಕ್ಷಿಸಲು ಅಧಿಕಾರಿಗಳು ಬಂದರು. ಅವರ ಕಣ್ಣಿಗೆ ತೆರೇಸಾ ರೋಗಿಯ ಕೊಳೆತ ದೇಹದ ಭಾಗಗಳಿಂದ ಹುಳಗಳನ್ನು ಹೆಕ್ಕಿ ತೆಗೆಯುವುದು ಕಂಡಿತು. ಅದನ್ನು ನೋಡಿದ ಅಧಿಕಾರಿಗಳು ಹೊರಗೆಬಂದು ನೆರೆದ ಪ್ರತಿಭಟನಾಕಾರರಿಗೆ ಹೇಳಿದರು, ನೀವು ಹೇಳಿದ ಹಾಗೆ ಅವರನ್ನು ನಾನು ಈ ಜಾಗದಿಂದ ಓಡಿಸುವುದಾಗಿಯೂ ಆದರೆ ನಿಮ್ಮಲ್ಲಿರುವ ಅಕ್ಕಂದಿರು, ತಾಯಂದಿರು ಮದರ್ ತೆರೇಸಾ ಇಲ್ಲಿ ಏನು ಕೆಲಸ ಮಾಡುತ್ತಿದ್ದರು ಅದನ್ನು ಮಾಡಬೇಕು ಎಂದಾಗ ಅಲ್ಲಿ ನೆರೆದಿದ್ದ ಜನರೆೆಲ್ಲ ಪ್ರತಿಭಟನೆೆಯ ಸುಳಿವೇ ಇಲ್ಲದೆ ಮಾಯವಾದರು. ಹಣ ಎಲ್ಲರಲ್ಲಿಯೂ ಇರುತ್ತದೆ. ರೋಗಿಗಳ ದೀನದಲಿತರ ಸೇವೆಯನ್ನು ತಾನೇ ಸ್ವತಃ ಮಾಡುವ ಮನೋಭಾವ ಬಹಳ ಕಡಿಮೆ ಜನರಲ್ಲಿ ಕಾಣಬಹುದು. ಆ ಕಾರಣಕ್ಕಾಗಿಯೇ ಜನರಿಂದು ಮದರ್ ತೆರೇಸಾ ಅವರನ್ನು ನೆನೆಯುತ್ತಾರೆ. ಮದರ್ ತೆರೇಸಾ, ರೋಗಿ ಬದುಕಲು ಸಾಧ್ಯವೇ ಇಲ್ಲ ಸಾಯುವುದು ಗ್ಯಾರಂಟಿ ಆಗಿದ್ದರೂ ಅವರು ಮನುಷ್ಯರಾಗಿ ಘನತೆಯಲ್ಲಿ ಸಾಯಲಿ ಎಂಬ ಸದಾಶಯವನ್ನು ಅವರು ವ್ಯಕ್ತಪಡಿಸುತ್ತಿದ್ದರು. ಇಡೀ ಜಗತ್ತಿನಲ್ಲಿ ಕುಷ್ಠ ರೋಗಿಗಳ ಪುನಶ್ಚೇತನಕ್ಕಾಗಿ ಯಾರೂ ಮಾಡಿರದ, ಅವರು ಪ್ರೇಮ ನಿವಾಸ ಮತ್ತು ಶಾಂತಿ ನಗರ ಸ್ಥಾಪನೆಯ ಮೂಲಕ ಮಾಡಿ ತೋರಿಸಿದರು. ಕುಷ್ಠ ರೋಗಿಗಳನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಇದರಿಂದ ಕುಷ್ಠ ರೋಗಿಗಳು ನೋವು ಮಾತ್ರ ಅಲ್ಲ ಅವಮಾನಗಳನ್ನು ಕೂಡ ಅನುಭವಿಸುತ್ತಿದ್ದರು. ಅವರು ಮೊದಲು ರೋಗಿಗಳು ಇರುವಡೆಗೆ ಹೋಗಿ ಅವರಿಗೆ ಔಷಧ ನೀಡಿದರು. ಅವರ ಹುಣ್ಣುಗಳಿಗೆ ಬಟ್ಟೆ ಸುತ್ತುವುದು ಮತ್ತು ಅದಕ್ಕಾಗಿಯೇ ಮಿಶನರೀಸ್ ಆಫ್ ಚಾರಿಟಿ ಬ್ರದರ್ಸ್‌ರ ನೆರವಿನಿಂದ 1958ರಲ್ಲಿ ಕುಷ್ಠ ರೋಗಿಗಳ ಕಾಲನಿಯಲ್ಲಿ ಗಾಂಧೀಜಿ ಪ್ರೇಮಾ ನಿವಾಸ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದರು.

1961 ರಲ್ಲಿ ಪಶ್ಚಿಮ ಬಂಗಾಳ ಸರಕಾರ ತಾಯಿ ತೆರೇಸಾರಿಗೆ ರಾಜ್ಯದ ಗಡಿ ಪ್ರದೇಶದಲ್ಲಿ ಇಪ್ಪತ್ತನಾಲ್ಕು ಎಕರೆ ಖಾಲಿ ಜಾಗವನ್ನು ನೀಡಿತು. ಅಲ್ಲಿ ಅವರು ಕುಷ್ಠ ರೋಗಿಗಳಿಗಾಗಿ ಶಾಂತಿ ನಗರವನ್ನು ಸ್ಥಾಪಿಸಿದರು. ಅಲ್ಲಿಯ ನಿವಾಸಿಗಳು, ಕುಷ್ಠ ರೋಗಿಗಳೆಲ್ಲರೂ ಸ್ವಾಭಿಮಾನದಿಂದ ಬದುಕುವಂತೆ ಮಾಡಿದರು.

ಲೇಖಕರು: ಆಡಳಿತಾಧಿಕಾರಿ, ನಾರಾಯಣ ಗುರು ವಿದ್ಯಾಸಂಸ್ಥೆಗಳು, ಮುಲ್ಕಿ, ಮಂಗಳೂರು

Writer - ಡಾ.ವಸಂತ ಕುಮಾರ್

contributor

Editor - ಡಾ.ವಸಂತ ಕುಮಾರ್

contributor

Similar News