×
Ad

ಬೆಂಗಳೂರಿನಲ್ಲಿ ಮಳೆ: ಹಲವು ಬಡಾವಣೆ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Update: 2022-09-05 10:56 IST

ಬೆಂಗಳೂರು: ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ (RAIN)  ಬೆಂಗಳೂರಿನ ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.  

ನಿರಂತರ ಮಳೆಗೆ ರಸ್ತೆಗಳು ಕೆರೆಯಂತೆ ಆಗಿದ್ದು,  ಬಹುತೇಕ ರಸ್ತೆಯಲ್ಲಿ ಸಂಚಾರ ಮಾಡಿದರೂ ರಸ್ತೆಯ ಬದಲು ನೀರನ್ನೇ ಕಾಣುವ ಪರಿಸ್ಥಿತಿ ಉಂಟಾಗಿದೆ. 

ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಬದಲಿ ಮಾರ್ಗ: ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ದೊಡ್ಡಕನ್ನಹಳ್ಳಿ ಮತ್ತು ಬೆಳ್ಳಂದೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂಚಾರ ಪೊಲೀಸರು ಪ್ರಮಾಣಿಕರಿಗೆ ಮನವಿ ಮಾಡಿದ್ದಾರೆ.

ವ್ಯಕ್ತಿಯ ರಕ್ಷಣೆ:  ಈ ನಡುವೆ ಮಾರತಹಳ್ಳಿ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ.ಈ ಕುರಿತು ANI ವಿಡಿಯೊ ಪೋಸ್ಟ್ ಮಾಡಿದೆ.

ಇನ್ನೂ 4 ದಿನ ಮಳೆ, ಹೈ ಅಲರ್ಟ್ ಘೋಷಣೆ: 

ರಾಜ್ಯದಲ್ಲಿ ಇನ್ನೂ 4 ದಿನ ಮಳೆಯಾಗುವ (RAIN) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಸೆ.9ರವರೆಗೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ. ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News